ಬೆಂಗಳೂರು: ಒಂದೆಡೆ ಕಾರ್ಮಿಕರ ಕೊರತೆ, ಮತ್ತೂಂದೆಡೆ ಕುಂಠಿತ ಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮಾಡಿ ಮುಗಿಸುವ ಒತ್ತಡ, ಇನ್ನೊಂದೆಡೆ ಶಾಲೆಗಳಿಗೆ ರಜೆ ಘೋಷಣೆ. ಇದೆಲ್ಲವೂ ಬಾಲಕಾರ್ಮಿಕರ ಬಳಕೆಗೆ ಪುಷ್ಟಿ ನೀಡುತ್ತಿವೆಯೇ? “ಹೌದು’ ಎನ್ನುತ್ತವೆ ಕಾರ್ಮಿಕ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಚೈಲ್ಡ್‌ಲೈನ್ ಮೂಲಗಳು. ರಾಜ್ಯದಲ್ಲಿ ಲಾಕ್‌ಡೌನ್ ತೆರವಾಗಿದೆ. ಜೂ.1ರಿಂದ ಬಹುತೇಕ ಮುಕ್ತಗೊಂಡಿತು. ಹೆಚ್ಚು-ಕಡಿಮೆ ಇದೇ ಅವಧಿಯಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಪ್ರಕರಣಗಳೂ ಹೆಚ್ಚಾಗಿ ಕಂಡುಬರುತ್ತಿವೆ.
ಕಳೆದ ಕೇವಲ ಒಂದೂವರೆ ತಿಂಗಳಲ್ಲಿ ಈ ಸಂಬಂಧ 30ಕ್ಕೂ ಅಧಿಕ ದೂರು ವರದಿಯಾಗಿರುವುದು ಬೆಳಕಿಗೆ ಬಂದಿದೆ. ಬಾಲಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಕಾರ್ಮಿಕ ಇಲಾಖೆ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ(ಐಸಿಪಿಎಸ್) ನಿರ್ದೇಶನಾಲಯ, ಚೈಲ್ಡ್‌ಲೈನ್‌ಗೆ ದೂರುಗಳು ಬರುತ್ತಿದ್ದು, ಮೇ ನಿಂದ ಈವರೆಗೆ 30ಕ್ಕೂ ಅಧಿಕ ದೂರು ವರದಿಯಾಗಿವೆ. ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕೈಗಾರಿಕೆಗಳು ಆರಂಭವಾಗಿವೆ. ಕೆಲಸ ನಿರ್ವಹಿಸಬೇಕಿದ್ದ ಕಾರ್ಮಿಕರು ತವರಿಗೆ ತೆರಳಿ ದ್ದು, ಕಾರ್ಮಿಕರ ಕೊರತೆಯಿಂದಾಗಿ ಶಾಲಾ- ಕಾಲೇಜಿಗೆ ಹೋಗುವ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ.
“ಕೋವಿಡ್ 19 ಸಂದರ್ಭದಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸಿದ್ದ ಕೆಲ ಕುಟುಂಬಗಳು ತಮ್ಮ ಮಕ್ಕಳು ಕೆಲಸಕ್ಕೆ ಹೋದರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಕೆಲಸಕ್ಕೆ ಕಳುಹಿಸುತ್ತಿರುವುದು ಗೊತ್ತಾಗಿದೆ. ಇದು ಮಕ್ಕಳ ಹಕ್ಕುಗಳು ಹಾಗೂ ಕಾನೂನಿಗೆ ವಿರುದ್ಧವಾಗಿದೆ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಚೈಲ್ಡ್‌ಲೈನ್ ತಿಳಿಸಿದೆ.
ಕೋವಿಡ್ 19 ನಡುವೆಯೂ ಚೈಲ್ಡ್‌ಲೈನ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಏಪ್ರಿಲ್, ಮೇ ತಿಂಗಳಲ್ಲಿ ಸುಮಾರು 11 ದೂರು ಬಂದಿವೆ. ಕಾರ್ಮಿಕ ಇಲಾಖೆ ಹಾಗೂ ಐಸಿಪಿಎಸ್‌ಗೂ ಪ್ರತಿದಿನ ದೂರು ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಕಡು ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ತಮ್ಮ ಮಕ್ಕ ಳನ್ನು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳುವ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಚೈಲ್ಡ್‌ಲೈನ್, ಕಾರ್ಮಿಕ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ವಾಸು ದೇವ ಶರ್ಮಾ ತಿಳಿಸಿದ್ದಾರೆ.
ರೈಲುಗಳಲ್ಲಿ ಆಗಮನ?: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಕಾರ್ಯಾಚರಣೆಗೆ ಮಾತ್ರ ಅನುಮತಿ ನೀಡಲಾಗಿದೆ. ಎಂದಿನಂತೆ ರೈಲುಗಳ ಸಂಚಾರ ಆರಂಭಗೊಂಡರೆ, ಉತ್ತರ ಭಾರತದಿಂದ ಇನ್ನೂ ಬಹಳಷ್ಟು ಮಕ್ಕಳು ಕಾರ್ಮಿಕ ಕೆಲಸಕ್ಕೆ ಬರುವ ಸಾಧ್ಯತೆ ಇದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಳೆದ 3 ವರ್ಷದಲ್ಲಿ 8 ಸಾವಿರ ಮಕ್ಕಳನ್ನು ಗುರುತಿಸಿ ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಇದೀಗ ಕಾರ್ಮಿಕರ ಕೊರತೆ ಇರುವುದರಿಂದ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಹೆಚ್ಚಿದೆ ಎಂದು ರೈಲ್ವೆ ಚೈಲ್ಡ್‌ಲೈನ್ ಸಿಬ್ಬಂದಿ ಮಾಹಿತಿ ನೀಡಿದರು.
ಸಹಾಯವಾಣಿ: 1098 – ಚೈಲ್ಡ್‌ಲೈನ್ 080- 29752833- ಕಾರ್ಮಿಕ ಇಲಾಖೆ ಬಾಲಕಾರ್ಮಿಕ ದೂರವಾಣಿ ಸಂಖ್ಯೆ. 080- 22115291 – ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಾಯವಾಣಿ.
ಕೋವಿಡ್ 19 ಹಿನ್ನೆಲೆಯಲ್ಲಿ ಶಾಲೆಗಳು ರಜೆ ಇದ್ದು, ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿರುವ ಸಂಬಂಧ ದೂರು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. 18 ವರ್ಷದ ಒಳಗಿನ ಮಕ್ಕಳನ್ನು ಕಾರ್ಮಿಕ ಕೆಲಸಕ್ಕೆ ಕಳುಹಿಸುವುದು ಕಾನೂನುಬಾಹಿರ. ಈ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸಲಾಗುವುದು.
-ಪಲ್ಲವಿ ಅಕುರಾತಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆ(ಐಸಿಪಿಎಸ್) ನಿರ್ದೇಶಕರು
ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುವವರ ವಿರುದ್ಧ ಇಲಾಖೆ ಕ್ರಮಕೈಗೊಳ್ಳಲಿದೆ. ಬಾಲ ಕಾರ್ಮಿಕರ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಿದ್ದು, ದೂರು ಬಂದರೆ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಕ್ರಮವಹಿಸಲಾಗುವುದು.
-ಅಕ್ರಂ ಪಾಷ, ಕಾರ್ಮಿಕ ಇಲಾಖೆ ಆಯುಕ್ತರು
* ಮಂಜುನಾಥ ಗಂಗಾವತಿ