Advertisement

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

05:12 PM Nov 16, 2024 | Team Udayavani |

ಮಣಿಪಾಲ: ರಿಕ್ಷಾ, ಕಾರು ಮೊದಲಾದ ವಾಹನಗಳಿಗೆ ಸಿಎನ್‌ಜಿ ಕೊರತೆಯಾಗುತ್ತಿರುವ ಬಗ್ಗೆ ನಿತ್ಯವೂ ದೂರುಗಳು ಬರುತ್ತಿವೆ. ಜಿಲ್ಲೆಯ ಎಲ್ಲ ಸಿಎನ್‌ಜಿ ಫಿಲ್ಲಿಂಗ್‌ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಇರಬೇಕು ಮತ್ತು ಪೂರೈಕೆದಾರರು ಸಿಎನ್‌ಜಿ ಕೊರತೆಯಾಗದಂತೆ ಪೂರೈಕೆ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜರುಗಿದ ಸಿಎನ್‌ಜಿ ಇಂಧನ ಪೂರೈಕೆದಾರರು, ವಿತರಕರ ಸಭೆಯಲ್ಲಿ ಮಾತನಾಡಿದ ಅವರು, 8 ಕಡೆಗಳಲ್ಲಿ ಸಿಎನ್‌ಜಿ ಫಿಲ್ಲಿಂಗ್‌ ನಡೆಯುತ್ತಿದೆ. ಪೂರೈಕೆ ಕೊರತೆಯಿಂದ ನಿತ್ಯವೂ ರಿಕ್ಷಾಗಳು ಸಾಲುಗಟ್ಟಿ ನಿಂತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ತತ್‌ಕ್ಷಣವೇ ಪ್ರತಿ ಸಿಎನ್‌ಜಿ ಕೇಂದ್ರಕ್ಕೆ 2 ವಾಹನಗಳಲ್ಲಿ ಪೂರೈಕೆ ಮಾಡುವ ಕಾರ್ಯ ಆಗಬೇಕು. ನಗರ ಭಾಗದಲ್ಲಿ ಟ್ರಾಫಿಕ್‌ ನಿಯಂತ್ರಣಕ್ಕೆ ಜಂಬೋ ವಾಹನಗಳಲ್ಲಿ ಪೂರೈಕೆ ಮಾಡಬೇಕು ಎಂದು ಸೂಚಿಸಿದರು.

ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಶೇ.50ರಷ್ಟು ಸಿಎನ್‌ಜಿ ಆಧಾರಿತ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚುತ್ತಿಲ್ಲ. ಈಗಿರುವ ಬಂಕ್‌ಗಳಿಗೆ ಬೇಡಿಕೆಯಷ್ಟು ಇಂಧನ ಲಭ್ಯವಾಗುತ್ತಿಲ್ಲ. ಈ ಕೂಡಲೇ ಪೂರೈಕೆದಾರರಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮಾತನಾಡಿ, ನಿರ್ದಿಷ್ಟ ಸಮಯ ನಿರ್ಧರಿಸಿ ಇಂಧನ ಘಟಕಗಳನ್ನು ತುಂಬಿಸಕೊಳ್ಳಬೇಕು. ಇದರಿಂದ ದಟ್ಟಣೆ ಕಡಿಮೆಯಾಗುತ್ತದೆ ಎಂದು ಡೀಲರ್‌ಗಳಿಗೆ ಸಲಹೆ ನೀಡಿದರು. ಶಾಸಕ ಯಶಪಾಲ್‌ ಸುವರ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ., ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಗೇಲ್‌ ಸಂಸ್ಥೆಯ ಪ್ರತಿನಿಧಿಗಳು, ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್‌ ಅಳ್ವ ಸಹಿತ ಜಿಲ್ಲೆಯ ವಿವಿಧ ಸಿಎನ್‌ಜಿ ಕೇಂದ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next