ಭೋಪಾಲ್: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತ್ತೀಚೆಗೆ 10 ಆನೆಗಳ ಸಾವಿಗೆ ಶಿಲೀಂಧ್ರಪೀಡಿತ ಅರ್ಕ(ಕೋಡೋ) ಸಿರಿಧಾನ್ಯ ಸೇವನೆಯೇ ಕಾರಣ ಎಂದು ಶಂಕಿಸಲಾಗಿದೆ. 13 ಆನೆಗಳ ಗುಂಪಿನ ಪೈಕಿ ಅ.29ರಿಂದ 3 ದಿನಗಳ ಅವಧಿಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಒಟ್ಟು 10 ಆನೆಗಳು ಮೃತಪಟ್ಟಿದ್ದವು.
ಗುಂಪಿನ ಉಳಿದ 3 ಆನೆಗಳ ಮೇಲೂ ನಿಗಾ ಇರಿಸಲಾಗಿದ್ದು, ಅವುಗಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.
ಸದ್ಯ ಆನೆಗಳ ಮರಣೋತ್ತರ ಪರೀಕ್ಷೆ ಯನ್ನು ವನ್ಯಜೀವಿ ತಜ್ಞರು ನಡೆಸುತ್ತಿದ್ದು, ಆನೆಗಳ ಜಠರದಲ್ಲಿ ಸಾಕಷ್ಟು ಪ್ರಮಾಣದ ಸಿರಿಧಾನ್ಯ ಉಳಿಕೆಯನ್ನು ಪತ್ತೆ ಮಾಡಿ ದ್ದಾರೆ. ಅಲ್ಲದೇ ಆನೆಗಳ ಯಕೃತ್, ಶ್ವಾಸ ಕೋಶ, ಕರುಳು ಮತ್ತು ಕಿಡ್ನಿಗಳು ಹಾನಿ ಗೀಡಾಗಿರುವುದು ಕಂಡುಬಂದಿದೆ.
“ಅಕಾಲಿಕವಾಗಿ ಬೆಳೆದ ಸಿರಿಧಾನ್ಯಗಳಲ್ಲಿ ಕಂಡುಬಂದ ವಿಷಪೂರಿತ ಶಿಲೀಂಧ್ರ ಗಳಿಂದ ಆನೆಗಳು ಮೃತಪಟ್ಟಿರಬಹುದು, ಅದಾಗ್ಯೂ ಸಾವಿನ ನಿಖರ ಕಾರಣಕ್ಕಾಗಿ ತನಿಖೆ ನಡೆಸಲಾಗುವುದು” ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆನೆ ಗಳ ಸಾವಿನ ಹಿನ್ನೆಲೆಯಲ್ಲಿ ಈ ಪ್ರದೇಶ ದಲ್ಲಿನ ಅರ್ಕ ಬೆಳೆ ನಾಶಪಡಿಸಲು ಆದೇಶಿಸಲಾಗಿದ್ದು, ಇದಕ್ಕಾಗಿ ರೈತರಿಗೆ ಪರಿಹಾರವನ್ನೂ ಸರಕಾರ ಘೋಷಿಸಿದೆ.