Advertisement
ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿ ಅರ್ಜಿ ಆಹ್ವಾನಿಸಿದರೂ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. ಜಿಲ್ಲಾಸ್ಪತ್ರೆ, ಕಾರ್ಕಳ, ಕುಂದಾಪುರ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸಲು ಸರಕಾರ ಆದೇಶ ನೀಡಿದೆ. 2 ಬಾರಿ ಸಂದರ್ಶನ ನಡೆಸಿದರೂ 10 ಹುದ್ದೆಗಳಲ್ಲಿ ಕೇವಲ 8 ಹುದ್ದೆ ಮಾತ್ರ ಭರ್ತಿ ಮಾಡಲು ಸಾಧ್ಯವಾಗಿದೆ. ಇದೀಗ ಮತ್ತೆ 7 ತಜ್ಞ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರ ನೇಮಕಾತಿ ಜು.10ರಂದು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದೆ.
1997ರ ಆಗಸ್ಟ್ ತಿಂಗಳಲ್ಲಿ ನೂತನವಾಗಿ ರಚನೆಯಾದ 7 ಜಿಲ್ಲೆಗಳಲ್ಲಿ ಒಂದಾದ ಉಡುಪಿ ಜಿಲ್ಲೆಗೆ ವಿವಿಧ ಇಲಾಖೆಗಳಿಗೆ ಜಿಲ್ಲಾ ಮಟ್ಟದ ಸ್ಥಾನ ನೀಡಿ, ಅಗತ್ಯವಿರುವ ಸಿಬಂದಿಯನ್ನು ನೇಮಕ ಮಾಡಿದೆ. ಆದರೆ ಸರಕಾರ ಜಿಲ್ಲಾಸ್ಪತ್ರೆಯಾಗಿ ಬದಲಾದ ಈ ತಾಲೂಕು ಕೇಂದ್ರದ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಹಾಗೂ ಸಿಬಂದಿ ನೇಮಕ ಮಾಡಲು ಮನಸ್ಸು ಮಾಡಿಲ್ಲ. ಪ್ರಸ್ತುತ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿರುವಾಗ ಮಂಜೂರಾದ 128 ಹುದ್ದೆಗಳಲ್ಲಿ ಕೇವಲ 76 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 50 ಹುದ್ದೆಗಳು ಖಾಲಿಯಿವೆ. ಇದೀಗ ಕೋವಿಡ್ ಸಂಖ್ಯೆ ಒಂದೆಡೆ ಹೆಚ್ಚಾಗುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಾತಿಗೆ ಸರಕಾರ ಆದೇಶ ಹೊರಡಿಸಿದೆ.
Related Articles
Advertisement
ಪ್ರತ್ಯೇಕ ವೈದ್ಯರುಕೋವಿಡ್ 19ರ ಬಳಿಕ ಪ್ರತಿನಿತ್ಯ 400 ಮಂದಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಈ ಎಲ್ಲ ರೋಗಿಗಳನ್ನು ಫೀವರ್ ಕ್ಲಿನಿಕ್‌ನಲ್ಲಿ ಸ್ಕ್ರೀನಿಂಗ್ ಮಾಡಿದ ಬಳಕವಷ್ಟೆ ಆಸ್ಪತ್ರೆಯ ಒಳಗೆ ಬಿಡಲಾಗುತ್ತಿದೆ. ಪ್ರಸ್ತುತ ಖಾಯಂ ವೈದ್ಯರನ್ನು ಫೀವರ್ ಕ್ಲಿನಿಕ್‌ಗೆ ವರ್ಗಾಯಿಸಿದರೆ ದೈನಂದಿನ ತಪಾಸಣೆಗೆ ತೊಂದರೆಯಾಗಲಿದೆ. ಹೀಗಾಗಿ ತಾತ್ಕಾಲಿಕವಾಗಿ ಎಂಬಿಬಿಎಸ್ ಪದವಿ ಪಡೆದ ವೈದ್ಯರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಸ್ನಾತಕೋತ್ತರ ಪದವಿಯತ್ತ ಒಲವು
ಖಾಸಗಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವೈದ್ಯರಿಗೆ 40ರಿಂದ 50 ಸಾವಿರ ರೂ. ವೇತನ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಮಾಸಿಕ 60,000 ರೂ. ವೇತನ ನಿಗದಿಪಡಿಸಲಾಗಿದೆ. ಎಂಡಿ ಪದವಿ ಪಡೆದವರಿಗೆ ಖಾಸಗಿಯಲ್ಲಿ 1.5 ಲ.ರೂ. ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ 1.10 ಲ. ರೂ. ಲಭಿಸುತ್ತಿದೆ. ಈ ನಿಟ್ಟಿನಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿದ್ದಾರೆ. ಜತೆಗೆ ತಾತ್ಕಾಲಿಕ ಅವಧಿಗೆ ನೇಮಕಾತಿ ನಡೆಯುತ್ತಿರುವುದರಿಂದ ವೈದ್ಯ ಅಭ್ಯರ್ಥಿಗಳು ಸಂದರ್ಶನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೆಚ್ಚುವರಿ ವೈದ್ಯರ ಅಗತ್ಯ
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಐಸೊಲೇಶನ್ ವಾರ್ಡ್‌ನಲ್ಲಿ ಕೆಲಸ ಮಾಡುವವರನ್ನು ಬೇರೆಡೆ ನಿಯೋಜಿಸಲಾಗುವುದಿಲ್ಲ. ಕುಂದಾಪುರ, ಕಾರ್ಕಳ ಆಸ್ಪತ್ರೆಯಲ್ಲಿ 3 ಪಾಳಿಯಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಐಸೊಲೇಶನ್ ವಾರ್ಡ್ ಮತ್ತು ಫೀವರ್ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚುವರಿ ವೈದ್ಯರ ಅಗತ್ಯವಿದೆ. ಇದೀಗ ಮತ್ತೆ 7 ಹುದ್ದೆಗಳಿಗೆ ಸಂದರ್ಶನದ ಮೂಲಕ ವೈದ್ಯರನ್ನು ನೇಮಕ ಮಾಡಲಾಗುತ್ತದೆ.
-ಡಾ| ಮಧುಸೂದನ ನಾಯಕ್, ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ ಅಜ್ಜರಕಾಡು