Advertisement

Udupi: ಪಟಾಕಿ ಸಿಡಿಸಿ, ಆದರೆ ಎಚ್ಚರ ವಹಿಸಿ; ಇಲಾಖೆಯಿಂದ ಜಿಲ್ಲಾದ್ಯಂತ ಅಗತ್ಯಕ್ರಮ

01:29 PM Oct 31, 2024 | Team Udayavani |

ಉಡುಪಿ: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಬೆಳಕಿನ ಹಬ್ಬಕ್ಕೆ ಪಟಾಕಿಯೇ ರಂಗು. ಅಗತ್ಯ ಅಗ್ನಿ ಸುರಕ್ಷತೆಯೊಂದಿಗೆ ಹಬ್ಬ ಆಚರಿಸಲು ಅಗ್ನಿ ಶಾಮಕ ಇಲಾಖೆ ಸಜ್ಜಾಗಿದೆ. ಹಬ್ಬದ ಸಂದರ್ಭ ಅಗ್ನಿ ಅವಘಡ ತಪ್ಪಿಸಲು ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ.

Advertisement

ಸೋಮವಾರವಷ್ಟೇ ಕಾಸರಗೋಡಿನ ನೀಲೇಶ್ವರದಲ್ಲಿ ಸಂಭವಿಸಿದ ಅಗ್ನಿ ಅವಘಡ, ಕಳೆದ ವರ್ಷ ಬೆಂಗಳೂರಿನ ಅತ್ತಿಬೆಲೆ, ಹಾವೇರಿಯಲ್ಲಿ ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಎಲ್ಲೆಡೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರಂತೆ ಉಡುಪಿ ಜಿಲ್ಲಾಡಳಿತ, ಅಗ್ನಿಶಾಮಕ ಇಲಾಖೆ ಕೂಡಾ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದೆ.

ಜಿಲ್ಲೆಯ ಯಾವುದೇ ಭಾಗದಲ್ಲಿ ಅನಾಹುತ ಸಂಭವಿಸಿದರೂ ಸಿದ್ಧವಾಗಿರುವಂತೆ ಉಡುಪಿ ಅಜ್ಜರಕಾಡು, ಮಲ್ಪೆ, ಕುಂದಾಪುರ, ಬೈಂದೂರು, ಕಾರ್ಕಳದ ಅಗ್ನಿಶಾಮಕ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಸದಾ ಕಾಲ ಎಚ್ಚರದಿಂದ ಇರಬೇಕು, ಎಲ್ಲ ಸಿಬಂದಿ 24 ತಾಸು ನಿಗಾ ವಹಿಸಬೇಕು ಎಂದು ತಿಳಿಸಲಾಗಿದೆ. ಈ ಕುರಿತು ವಿಶೇಷ ತರಬೇತಿ ಕೂಡಾ ನೀಡಲಾಗಿದೆ.

ವಾಹನಗಳನ್ನು ಸಜ್ಜಾಗಿಟ್ಟುಕೊಳ್ಳುವುದು, ನೀರು ಸಂಗ್ರಹಿಸಿಟ್ಟುಕೊಳ್ಳುವುದು, ಫೈಯರ್‌ ಸುರಕ್ಷತೆ ಸಾಧನಗಳನ್ನು ಜಾಗೃತ ಸ್ಥಿತಿಯಲ್ಲಿಡುವುದು ಹೀಗೆ ಠಾಣೆಗಳ ಸಿಬಂದಿ ಸರ್ವ ರೀತಿಯಲ್ಲಿ ಸಜ್ಜಾಗಿರಲು ಕಟ್ಟಪ್ಪಣೆ ನೀಡಲಾಗಿದೆ. ಠಾಣೆಗಳ ಸಿಬಂದಿಗೆ ರಜೆ ಇದೆ: ಹಬ್ಬದ ಸಂದರ್ಭದಲ್ಲಿ ತುರ್ತು ಸೇವೆ ಬೇಕಾಗುವ ಸಾಧ್ಯತೆ ಇರುವುದರಿಂಂದ ಠಾಣೆಗಳಾÂರೂ ರಜೆ ಮಾಡದಂತೆ ಸುತ್ತೋಲೆ ನೀಡಲಾಗಿದೆ.

ಠಾಣೆಗಳು ಸನ್ನದ್ಧವಾಗಿದೆ
ಹಬ್ಬದ ಸಂದರ್ಭ ಯಾವುದೇ ರೀತಿಯ ಬೆಂಕಿ ಅವಘಡ ಸಂಭವಿಸಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಎಚ್ಚರಿಕೆ ವಹಿಸಿದ್ದೇವೆ, ಎಲ್ಲ ಅಗ್ನಿ ಶಾಮದ ದಳ ಠಾಣೆಗಳು ಸನ್ನದ್ಧ ಸ್ಥಿತಿಯಲ್ಲಿವೆ. ಈ ಬಾರಿಯ ದೀಪಾವಳಿ ಅವಘಡ ರಹಿತವಾಗಿರಲಿ. ಮಕ್ಕಳು, ನಾಗರಿಕರು ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ, ಸುರಕ್ಷತೆ ವಹಿಸುವುದು ಅಗತ್ಯ.
-ವಿನಾಯಕ ಕಲ್ಗುಟ್ಕರ್‌, ಅಗ್ನಿಶಾಮಕದಳ ಅಧಿಕಾರಿ-ಉಡುಪಿ

Advertisement

ಪಟಾಕಿ ಅಂಗಡಿ ಮಾಲಕರಿಗೆ ಸೂಚನೆ
-ಎಲ್ಲ ಪಟಾಕಿ ಮಳಿಗೆಗಳು ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿರಬೇಕು.
-ಮಳಿಗೆ ತೆರೆಯುವಲ್ಲಿ ಸಾಕಷ್ಟು ತೆರೆದ ಸ್ಥಳ ಇರಬೇಕು. ವಸತಿ ಪ್ರದೇಶ, ಶಾಲಾ ಬಳಿ ತೆರೆಯಬಾರದು.
-ಅಂಗಡಿಗಳ ಮಧ್ಯೆ 5 ಮೀಟರ್‌ ಅಂತರ ಕಡ್ಡಾಯ.
-ಮರಳು ತುಂಬಿದ ಬಕೆಟ್‌, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಡ್ರಮ್‌ಗಳಲ್ಲಿ ನೀರು ಇಟ್ಟುಕೊಳ್ಳಬೇಕು.
-ಧೂಮಪಾನ ಮಾಡದಂತೆ ಸೂಚನಾ ಫ‌ಲಕ ಅಳವಡಿಸಿಕೊಳ್ಳುವುದು.
-ಮಳಿಗೆಗಳಲ್ಲಿ ಗ್ಯಾಸ್‌ ಸಿಲಿಂಡರ್‌, ತ್ಯಾಜ್ಯ ಕಾಗದ, ಪ್ಯಾಕೇಜಿಂಗ್‌ಸ್ತುಗಳನ್ನು ಇಡಬಾರದು.

ನಾಗರಿಕರಿಗೆ ಸೂಚನೆಗಳು
-ಜನವಸತಿಗಿಂತ ಬಯಲು ಪ್ರದೇಶದಲ್ಲಿ ಪಟಾಕಿ ಬಿಡುವುದು ಸೂಕ್ತ.
-ಅಪಾಯಕಾರಿ ಪಟಾಕಿಗಳು ಬೇಡ, ಹಸುರು ಪಟಾಕಿಗೆ ಆದ್ಯತೆ ಇರಲಿ
-ಸಣ್ಣ ಮಕ್ಕಳ ಕೈಗೆ ಸಣ್ಣ ಪುಟ್ಟ ಪಟಾಕಿಗಳನ್ನಷ್ಟೇ ಕೊಡಿ, ಹಿರಿಯರು ಜತೆಗಿರಲಿ.
-ಎಲ್ಲರೂ ಸೇರಿ ಪಟಾಕಿ ಸಿಡಿಸುವುದು ಉತ್ತಮ.
-ಕಣ್ಣಿಗೆ, ಮೈಗೆ ಬೆಂಕಿ ತಗಲಿದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಿರಿ.

ಜಿಲ್ಲೆಯ ವಿವಿಧೆಡೆ 170 ಪಟಾಕಿ ಮಾರಾಟ ಮಳಿಗೆ
ಉಡುಪಿ: ದೀಪಾವಳಿ ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗ್ರಾಹಕರಿಗಾಗಿ 170 ಪಟಾಕಿ ಮಳಿಗೆ ತೆರೆಯಲಾಗಿದೆ. ಉಡುಪಿ 62, ಕುಂದಾಪುರ 26, ಕಾರ್ಕಳ 24, ಬೈಂದೂರು 2, ಬ್ರಹ್ಮಾವರ 27, ಹೆಬ್ರಿ 18, ಕಾಪು 31 ಕಡೆಗಳ ಮಳಿಗೆಗಳಲ್ಲಿ ಪಟಾಕಿ ಖರೀದಿಸಬಹುದು.

ಕಣ್ಣಿನ ಬಗ್ಗೆ ಎಚ್ಚರವಿರಲಿ
ದೀಪಾವಳಿ ಬೆಳಕಿನ ಹಬ್ಬವಾದರೇ ಪ್ರತಿ ವರ್ಷ ಹಲವರ ಬದುಕಲ್ಲಿ ಕತ್ತಲನ್ನು ಸಹ ಆವರಿಸುತ್ತದೆ. ದೀಪಾವಳಿ ಸಂದರ್ಭ ಪಟಾಕಿ ಸಿಡಿತದಿಂದ ಕಣ್ಣಿನ ಸಮಸ್ಯೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಸಿಡಿಯುವ ಪಟಾಕಿಯಿಂದ ಸಣ್ಣ ಮಕ್ಕಳು ಗಾಯಗೊಳ್ಳುವುದು ಸೇರಿದಂತೆ ಹಲವು ದುರ್ಘ‌ಟನೆಗಳು ಸಂಭವಿಸುತ್ತವೆ. ಪಟಾಕಿ ಸಿಡಿಸುವಾಗ ಕಣ್ಣಿಗೆ ಕನ್ನಡ ಧರಿಸುವುದು ಒಳ್ಳೆಯದು. ಈ ಬಾರಿ ಹಬ್ಬಕ್ಕೂ ಮುನ್ನವೇ ಕಣ್ಣಿನ ಆಸ್ಪತ್ರೆ ಸಜ್ಜಾಗಿದೆ. ಪಟಾಕಿಸಿ ಸಿಡಿತದಿಂದ ಬರುವವರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯ ಸಹಾಯವಾಣಿ 9449827833 ತೆರೆದಿರುತ್ತದೆ.

ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನು ವುದು ಸಾಧ್ಯವಾಗದ ಮಾತು. ಹಸುರು ಪಟಾಕಿ ಕೂಡ ಸಿಡಿಯುವಂತದ್ದೆ. ಪಟಾಕಿ ಸಿಡಿಸುವಾಗ ಕೈಯಲ್ಲಿ ಹಿಡಿದು ಮೇಲಿನ ಪೇಪರ್‌ ಸುಲಿದು ಬೆಂಕಿ ಹಚ್ಚುವ ಪ್ರಯತ್ನ ಬೇಡ. ಪಟಾಕಿ ಹಚ್ಚುವಾಗ ಕಿವಿಗೆ ಹತ್ತಿ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ. ಇಲ್ಲವಾದಲ್ಲಿ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next