ಜಮ್ಮು: ಭಾರತದ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆಯ ಯೋಧರು ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣಾ ರೇಖೆ(ಎಲ್‌ಒಸಿ)ಯ ಬಳಿ ಗುರುವಾರ ಈ ಘಟನೆ ನಡೆದಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕೆ ಹೊಂದಿಕೊಂಡಿರುವ ನಿಯಂತ್ರಣಾ ರೇಖೆಯಲ್ಲಿ ಮೂವರು ಉಗ್ರರು ಗಡಿ ದಾಟಿ ಭಾರತದ ಒಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಗಡಿ ಕಾಯುತ್ತಿದ್ದ ಭಾರತೀಯ ಯೋಧರು ಇದನ್ನು ಗಮನಿಸಿ, ಅಲರ್ಟ್ ಆಗಿದ್ದಾರೆ. ಉಗ್ರರು ಈ ವೇಳೆ ಯೋಧರ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾರೆ.
ಪ್ರತಿಯಾಗಿ ಗುಂಡಿನ ದಾಳಿ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಒಬ್ಬ ಉಗ್ರನ ಮೃತದೇಹ ಇದ್ದು, ಉಳಿದ ಇಬ್ಬರು ಉಗ್ರರ ಮೃತದೇಹವನ್ನು ಪಿಒಕೆ ಗ್ರಾಮಸ್ಥರು ಪಡೆದಿದ್ದಾರೆ. ಉಗ್ರರ ಬಳಿಯಿಂದ ಎರಡು ಎಕೆ 47, ಪಿಸ್ತೂಲ್ ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಇಬ್ಬರು ವಲಸೆ ಕಾರ್ಮಿಕರ ಮೇಲೆ ದಾಳಿ:
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ ಒಟ್ಟು ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿ, ಗಾಯಗೊಳಿಸಿದ್ದಾರೆ. ಚಿಕಿತ್ಸೆಗಾಗಿ ಇವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಇಬ್ಬರು ಕಾರ್ಮಿಕರು ಅನಂತ್‌ನಾಗ್ ಜಿಲ್ಲೆಯ ಬೊಡಿಯಾಲ್‌ಗಾಮ್‌ನ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.