Advertisement

ಕೇಂದ್ರದ ವಿರುದ್ಧ ಕಾರ್ಮಿಕರ ಆಕ್ರೋಶ

12:46 AM Jan 09, 2020 | Lakshmi GovindaRaj |

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಬುಧವಾರ ಹತ್ತಾರು ಕಾರ್ಮಿಕ ಸಂಘಟನೆ, ರೈತ ಸಂಘಟನೆ ಕಾರ್ಯಕರ್ತರು ಹಾಗೂ ಪ್ರಗತಿಪರ ಹೋರಾಟಗಾರರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನಾ ಸಮಾವೇಶ ನಡೆಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಬೃಹತ್‌ ರ್ಯಾಲಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನೂರಾರು ಪ್ರತಿಭಟನಾಕಾರರು ಶಾಂತಿಯುತವಾಗಿ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ರ್ಯಾಲಿ ನಡೆಸಿದರು.

Advertisement

ಬಳಿಕ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಸಮಾವೇಶ ನಡೆಯಿತು. ಮುಚ್ಚುತ್ತಿರುವ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸಬೇಕು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿನ ಗುತ್ತಿಗೆ ಪದ್ಧತಿಯನ್ನು ರದ್ದು, 21 ಸಾವಿರ ರೂ. ಕನಿಷ್ಠ ವೇತನ ನಿಗದಿ, ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಾಗಿ ಜಾರಿ, ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತಿರುವ ನೀತಿಗಳ ರದ್ದು, ಆರ್ಥಿಕ ಹಿಂಜರಿತದಿಂದ ಉದ್ಯೋಗ ಕಳೆದುಕೊಳ್ಳುತ್ತಿರುವವರಿಗೆ ಪರಿಹಾರ ನೀಡಬೇಕು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯುನ ಮೀನಾಕ್ಷಿ ಸುಂದರಂ, ದೇಶದಲ್ಲಿ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದು, ಕಾರ್ಖಾನೆಗಳು ಮುಚ್ಚುತ್ತಿವೆ. ಸಮವಸ್ತ್ರ ಧರಿಸಿರುವ ನೌಕರರು ಇಂದು ಬೀದಿಗೆ ಬಂದು ನಿಂತಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಜಾರಿಯಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸ್ವಾಮಿನಾಥನ್‌ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಎಐಟಿಯುಸಿನ ವಿಜಯ ಭಾಸ್ಕರ್‌ ಮಾತನಾಡಿ, ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ ಬೇಡಿಕೆ ಮುಂದಿಟ್ಟರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ರ್ಯಾಲಿಗೆ ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಮಿಕ ಘಟಕ ಅಧ್ಯಕ್ಷ ಪ್ರಕಾಶಂ ಮಾತನಾಡಿ, ಏರ್‌ ಇಂಡಿಯಾ, ಭಾರತೀಯ ರೈಲ್ವೆ, ಬಿಎಸ್‌ಎನ್‌ಎಲ್‌, ಬಿಪಿಸಿಎಲ್‌ನಂತಹ ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಇದರ ಬಗ್ಗೆ ಈಗಲೇ ಧ್ವನಿಯೆತ್ತದಿದ್ದರೆ, ಮುಂದೆ ದೇಶವನ್ನೇ ಮಾರುತ್ತದೆ ಎಂದು ಹೇಳಿದರು. ಸಿಐಟಿಯುನ ವರಲಕ್ಷ್ಮೀ, ಲೀಲಾವತಿ, ಐಎನ್‌ಟಿಯುಸಿಯ ಶ್ಯಾಮಣ್ಣ ರೆಡ್ಡಿ, ಯುಟಿಯುಸಿಯ ಭಟ್‌, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌, ರಾಜಣ್ಣ, ಗಂಗಣ್ಣ, ಅನಂತರಾಜು ಸೇರಿ ಹತ್ತಾರು ಮುಖಂಡರು ವೇದಿಕೆಯಲ್ಲಿ ಇದ್ದರು.

ಡಿಫೆನ್ಸ್‌ ನೌಕರರ ಒಕ್ಕೂಟ: ಜೆಸಿ ನಗರದ ಟಿವಿ ಟವರ್‌ ಸಮೀಪದ ಸಿಕ್ಯೂಎಎಲ್‌ ಕಚೇರಿ ಮುಂಭಾಗ ಆಲ್‌ ಇಂಡಿಯಾ ಡಿಫೆನ್ಸ್‌ ಎಂಪ್ಲಾಯೀಸ್‌ ಫೆಡರೇಷನ್‌ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದ ಫೇಡರೇಷನ್‌ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್‌ ಪಿಳ್ಳೆ, ರಕ್ಷಣಾ ಉದ್ಯಮದ ಖಾಸಗೀಕರಣ ತಡೆಯಲು, ಜತೆಗೆ ನಿವೃತ್ತಿ ವೇತನದ ಹಕ್ಕನ್ನು ಮರಳಿ ಪಡೆಯುವ ಸಲುವಾಗಿ ಮುಷ್ಕರ ನಡೆಸಲಾಗುವುದು. ಕೇಂದ್ರದ ನೀತಿಗಳಿಂದ ರಾಷ್ಟ್ರ ವ್ಯಾಪ್ತಿಯ ನಾಲ್ಕು ಲಕ್ಷ ರಕ್ಷಣಾ ಇಲಾಖೆಯ ಉದ್ಯೋಗಿಗಳು ಬೇಸತ್ತಿದ್ದಾರೆ. ರಕ್ಷಣಾ ನೀತಿಗಳು ದೇಶದ ಅಭಿವೃದ್ಧಿಗಾಗಿಯೋ ಅಥವಾ ಖಾಸಗಿ ಕಾರ್ಪೋರೇಟ್‌ಗಳ ಉದ್ಧಾರಕ್ಕಾಗಿಯೋ ಎಂದು ಪ್ರಶ್ನಿಸಿದರು.

Advertisement

ಆಯುಕ್ತರ ವಿರುದ್ಧ ಆಕ್ರೋಶ: ರ್ಯಾಲಿಗೆ ಅವಕಾಶ ನೀಡದ ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ವಿರುದ್ಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. “ಭಾಸ್ಕರ್‌ರಾವ್‌ ಐಪಿಎಸ್‌ ಓದಿದ್ದಾರೆ ಎಂಬುದೇ ಅಚ್ಚರಿ. ಕಾನೂನು ಓದಿದವರು ಯಾರೂ ಈ ರೀತಿ ಮಾಡಲ್ಲ. ಪ್ರತಿಭಟನೆ ಮಾಡುವುದು ಸಾರ್ವಜನಿಕರ ಹಕ್ಕು. ಅದಕ್ಕೆ ಅವಕಾಶ ನೀಡಬೇಕು ಎಂಬುದೂ ಆ ವ್ಯಕ್ತಿಗೆ ಗೊತ್ತಿಲ್ಲ,’ ಎಂದು ಸಿಐಟಿಯುನ ಮೀನಾಕ್ಷಿ ಸುಂದರಂ ಆಕ್ರೋಶ ವ್ಯಕ್ತಪಡಿಸಿದರು.

ಕೆನರಾ ಬ್ಯಾಂಕ್‌ ನೌಕರರ ಪ್ರತಿಭಟನೆ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಕೆನರಾ ಬ್ಯಾಂಕ್‌ ಸ್ಟಾಫ್ ಫೆಡರೇಶನ್‌ನ ಸದಸ್ಯರು ಬೆಂಬಲ ವ್ಯಕ್ತಪಡಿಸಿ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಕೆನರಾ ಬ್ಯಾಂಕ್‌ ಸ್ಟಾಫ್ ಫೆಡರೇಶನ್‌ನ ಜಿ.ರಾಧಾಕೃಷ್ಣ ಮಾತನಾಡಿ, ಬ್ಯಾಂಕ್‌ಗಳ ವಿಲೀನದಿಂದ ಸಾಕಷ್ಟು ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಹಳ್ಳಿಗಳಲ್ಲಿ, ಜನಸಾಮಾನ್ಯರಿಗೆ ಬ್ಯಾಂಕಿಂಗ್‌ ಸೌಲಭ್ಯಗಳೂ ಸಿಗುವುದಿಲ್ಲ. ಕೇಂದ್ರ ಸರ್ಕಾರ ಬ್ಯಾಂಕ್‌ಗಳ ವಿಲೀನ ಹಾಗೂ ಖಾಸಗೀಕರಣ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪೀಣ್ಯ, ಯಲಹಂಕ, ದೇವನಹಳ್ಳಿ ಸೇರಿ ನಗರದ ಹತ್ತಾರು ಪ್ರಮುಖ ಜಂಕ್ಷನ್‌ ಹಾಗೂ ಇತರೆ ಪ್ರದೇಶಗಳಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಶಕ್ತಿ ಸೌಧಕ್ಕೆ ತಟ್ಟದ ಮುಷ್ಕರ ಬಿಸಿ: ಮುಷ್ಕರದ ಬಿಸಿ ವಿಧಾನಸೌಧ- ವಿಕಾಸಸೌಧ, ಬಹುಮಹಡಿ ಕಟ್ಟಡ ಗಳಿಗೆ ತಟ್ಟಲಿಲ್ಲ. ಎಂದಿನಂತೆ ಅಧಿಕಾರಿ ಗಳು, ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿ ದ್ದರು. ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದ ರ್ಶಿಗಳು ಸೇರಿ ಹಿರಿಯ ಅಧಿಕಾರಿ ಗಳು ವಿಧಾನಸೌಧ, ವಿಕಾಸಸೌಧದಲ್ಲಿ ಹಾಜರಿದ್ದ ಕಾರಣ ಸಾರ್ವಜನಿಕರು ಅವರ ಭೇಟಿಗೆ ಆಗಮಿಸಿದ್ದರು.

ನೀರಸ ಪ್ರತಿಕ್ರಿಯೆ: ಎಂದಿನಂತಿದ್ದ ಜನಜೀವನ
ಬೆಂಗಳೂರು: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಕಾರ್ಮಿಕ ಮುಷ್ಕರಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಕ್ಯಾಬ್‌, ಆಟೋರಿಕ್ಷಾ ಸಹಿತ ಸರ್ಕಾರಿ ಹಾಗೂ ಖಾಸಗಿ ಸಂಚಾರ ವ್ಯವಸ್ಥೆ ಎಂದಿನಂತಿತ್ತು. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿರುವ ವಿವಿಧ ಇಲಾಖೆಗಳ ಕಚೇರಿ, ನಿಗಮ ಮಂಡಳಿಗಳ ಕಚೇರಿ, ಶಾಲಾ ಕಾಲೇಜುಗಳು, ಚಿತ್ರಮಂದಿರ, ಮಾಲ್‌ ಸಹಿತವಾಗಿ ಎಲ್ಲಡೆ ನಿತ್ಯದ ಕಾರ್ಯಚಟುವಟಿಕೆ ಸಮಸ್ಯೆಯಿಲ್ಲದೆ ನಡೆಯಿತು.

ಬಿಗಿ ಬಂದೋಬಸ್ತ್ ಇದ್ದುದ್ದರಿಂದ ರಸ್ತೆ ತಡೆ ಸಹಿತವಾಗಿ ಯಾವುದೇ ಅಹಿತಕ ಘಟನೆ ನಗರ ವ್ಯಾಪ್ತಿಯಲ್ಲಿ ನಡೆದಿಲ್ಲ. ಬಲವಂತವಾಗಿ ಬಂದ್‌ ಮಾಡಿಸುವಂತಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮೊದಲೇ ನಿರ್ದೇಶನ ನೀಡಿದ್ದರಿಂದ ಅಹಿತಕರ ಘಟನೆಗೆ ಅವಕಾಶವೇ ಇರಲಿಲ್ಲ. ಬುಧವಾರ ಬೆಳಗ್ಗೆ ಮೆಜೆಸ್ಟಿಕ್‌ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಜನ ಸಂಖ್ಯೆ ವಿಳರವಾಗಿತ್ತು. ಎಂದಿಗಿಂತ ಶೇ.50ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು.

ಬಂದ್‌ ಪರಿಪೂರ್ಣವಾಗಿ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದ್ದರಿಂದ ಬೆಳಗ್ಗೆ ಮನೆಯಿಂದ ಹೊರ ಬರಲು ತುಸು ಹಿಂಜರಿಕೆ ಮಾಡಿದರು. ಎಂದಿನಂತೆ ಸಂಚಾರ ವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾದ ನಂತರ ಮನೆಯಿಂದ ಹೊರಗೆ ಬಂದರು. ಬುಧವಾರ ನಗರದ ಯಾವುದೇ ಚಿತ್ರಮಂದಿರ ಅಥವಾ ಮಾಲ್‌ಗ‌ಳು ಬಂದ್‌ ಇರಲಿಲ್ಲ. ಎಲ್ಲವೂ ಎಂದಿನಂತೆ ಕಾರ್ಯ ನಿರ್ವ ಹಿಸಿದವು. ಕಲ್ಲುತೂರಾಟವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಮಾಲ್‌ಗ‌ಳ ಮುಂಭಾಗದ ಗ್ಲಾಸ್‌ಗೆ ನೆಟ್‌ಗಳನ್ನು ಅಳವಡಿಸಿದ್ದರು. ಸಾಮಾನ್ಯ ಚಿತ್ರಮಂದಿರಗಳಲ್ಲಿ ಎಂದಿನಂತೆ ಮೂರ್‍ನಾಲ್ಕು ಶೋಗಳು ನಡೆದಿವೆ.

ಪ್ರಯಾಣಿಕರ ಸಂಖ್ಯೆ ವಿರಳ: ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಎಂದಿನಂತೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಬೆಳಗ್ಗೆ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಆಗಮಿಸಿದವು. ನಿಲ್ದಾಣದಿಂದ ಬೇರೆ ಬೇರೆ ಪ್ರದೇಶಕ್ಕೆ ಹೋಗಲು ಬಿಎಂಟಿಸಿ ಬಸ್‌ ವ್ಯವಸ್ಥೆ, ಆಟೋ, ಕ್ಯಾಬ್‌ ಎಲ್ಲವೂ ಸಂಚರಿಸುತಿತ್ತು. ಹೀಗಾಗಿ ದೂರದ ಊರು ಗಳಿಂದ ಬಂದಿರುವ ಪ್ರಯಾಣಿಕರಿಗೂ ಯಾವುದೇ ಸಮಸ್ಯೆಯಾಗಿಲ್ಲ.

ಆದರೆ, ನಿಲ್ದಾಣ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಕಡಿಮೆ ಇತ್ತು. ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಶಿವಾಜಿನಗರ ಹಾಗೂ ಮಲ್ಲೇಶ್ವರ ಮೊದಲಾದ ಮಾರುಕಟ್ಟೆಗಳಲ್ಲೂ ಎಂದಿನಂತೆ ವಹಿವಾಟು ನಡೆದಿದೆ. ಎಪಿಎಂಸಿಯಲ್ಲಿ ವಹಿವಾಟಿನ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೇರೆ ಬೇರೆ ಭಾಗಗಳಿಂದ ಎಂದಿನಷ್ಟು ಸರಕು ಸಾಮಾನು ಗಳು ಬಂದಿಲ್ಲ ಎಂದು ಅಲ್ಲಿನ ವರ್ತಕರು ಮಾಹಿತಿ ನೀಡಿದರು. ಈ ಮಧ್ಯೆ ಬ್ಯಾಂಕ್‌ ನೌಕರರು, ಎಲ್‌ಐಸಿ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರಿಂದ ಮಧ್ಯಾಹ್ನದವರೆಗೆ ಅಲ್ಪ ಪ್ರಮಾಣದಲ್ಲಿ ವ್ಯತ್ಯಯ ಉಂಟಾಯಿತು.

ಪೊಲೀಸ್‌ ಬಂದೋಬಸ್ತ್: ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ನಾಲ್ವರು ಡಿಸಿಪಿಗಳು ಭದ್ರತೆ ಉಸ್ತುವಾರಿ ಹೊತ್ತಿದ್ದರು. ನಗರದ ಪುರಭವನ ಮತ್ತು ಸ್ವಾಂತ್ರತ್ರ್ಯ ಉದ್ಯಾನವನದಲ್ಲಿ ಕೆಎಸ್‌ಆರ್‌ಪಿ, ಸಿಎಆರ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಇನ್ನು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ನಡೆಸದರಿಂದ ಇಲ್ಲಿಯೂ ಭದ್ರತೆ ನೀಡಿದರು. ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ಆರಂಭವಾಗು ತ್ತಿದ್ದಂತೆ ಈ ಭಾಗದಲ್ಲಿ ಸಂಪೂರ್ಣವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.

ಸಿಎಎ ಪ್ರಸ್ತಾಪಿಸಿದ ಮುಖಂಡನಿಗೆ ಪ್ರತಿಭಟನಾಕಾರರ ವಿರೋಧ: ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಟಿಯುಸಿ ಮುಖಂಡ ವಿಜಯ ಭಾಸ್ಕರ್‌ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಪ್ರಸ್ತಾಪಿಸಿದಕ್ಕೆ ಕೆಲ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಭಾಷಣದ ವೇಳೆ ಕೆಲ ಮುಖಂಡರು ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ಪ್ರಶ್ನಿಸಿದರು. ಅದರಿಂದ ಕೋಪಗೊಂಡು ಕೆಲ ಕಾರ್ಮಿಕರು ಭಾಷಣಕಾರರ ವಿರುದ್ಧ ನೇರವಾ ಗಿಯೇ ವಾಗ್ವಾದಕ್ಕೆ ಮಂದಾದರು. ಕಾರ್ಮಿಕ ಸಂಘಟನೆಗೂ ಸಿಎಎಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು. ಅದಕ್ಕೆ ಪಕ್ಕದಲ್ಲಿದ್ದ ಇತರೆ ಕಾರ್ಮಿಕರು ಆತನ ವಿರುದ್ಧವೇ ಕೂಗಾಡಿದರು. ಒಂದು ಹಂತದಲ್ಲಿ ಕಾರ್ಮಿಕರು ಪರಸ್ಪರ ಕೈಕೈ ಮಿಲಾಯಿಸಿದರು. ಕೊನೆಗೆ ಸ್ಥಳಕ್ಕೆಬಂದ ಪೊಲೀಸರು, ಗಲಾಟೆ ಮಾಡುತ್ತಿದ್ದ ಕಾರ್ಮಿಕರನ್ನು ಎಳೆದೊಯ್ದು ವಾತಾವರಣ ತಿಳಿಗೊಳಿಸಿದರು.

ನೋಟುಗಳು ವಿಧಾನಸೌಧ, ಲೋಕಸಭೆಯಲ್ಲಿ ಸೃಷ್ಟಿ ಆಗುವುದಿಲ್ಲ. ರೈತರು, ಕಾರ್ಮಿಕರ ದುಡಿಮೆಯಿಂದ ಅದಕ್ಕೆ ಮೌಲ್ಯ ಬರುತ್ತದೆ. ಇದೀಗ ಆ ಮೌಲ್ಯವನ್ನು ದಿವಾಳಿ ಮಾಡಲು ಮುಂದಾಗಿದೆ.
-ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next