Advertisement

ಕುತ್ಪಾಡಿ ಪಡುಕೆರೆ ಆರೋಗ್ಯ ಕೇಂದ್ರವೇ ಅಸ್ವಸ್ಥ!

06:00 AM Jun 21, 2018 | Team Udayavani |

ಮಲ್ಪೆ: ತಾಲೂಕಿನ ಕಡೆಕಾರು ಕುತ್ಪಾಡಿ ಗ್ರಾಮದ ಕುತ್ಪಾಡಿ ಕುದ್ರುಕರೆಯಲ್ಲಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಸಿಬಂದಿ ಕೊರತೆಯಿಂದ ಕಳೆದ ಒಂದು ವರ್ಷದಿಂದ ಬಾಗಿಲು ಮುಚ್ಚಿದೆ. ಇದರಿಂದ ಮಳೆಗಾಲದಲ್ಲಂತೂ ಬಡರೋಗಿಗಳಿಗೆ ತೀವ್ರ ಸಮಸ್ಯೆಯಾಗಿದೆ.  

Advertisement

20 ವರ್ಷಗಳ ಹಿಂದೆ ಆರೋಗ್ಯ ಉಪಕೇಂದ್ರವನ್ನು ಸ್ಥಾಪನೆ ಮಾಡ ಲಾಗಿತ್ತು. ಇದೀಗ ಇಲಾಖೆಯ ಸಿಬಂದಿ ಇಲ್ಲದ ಕಾರಣ ಸಂಪೂರ್ಣ ಸ್ಥಗಿತಗೊಂಡಿದೆ.

ಈ ಹಿಂದೆ ಇಲ್ಲಿ ವೈದ್ಯರು ವಾರಕ್ಕೊಮ್ಮೆ ಸಿಗುತ್ತಿದ್ದರು. ಇಲ್ಲಿ ಖಾಯಂ ಆಗಿ ಇದ್ದ ಒಬ್ಬ ಆರೋಗ್ಯ ಸಹಾಯಕಿ ವರ್ಗಾವಣೆಗೊಂಡಿದ್ದು, ಅಂದಿನಿಂದ ಆರೋಗ್ಯ ಕೇಂದ್ರಕ್ಕೆ ಬೀಗ ಬಿದ್ದಿದೆ. ಆದರೆ ಈ ಬಗ್ಗೆ ಉತ್ತರಿಸಬೇಕಾದ ಆರೋಗ್ಯ ಇಲಾಖೆ ಕಣ್ಮುಚ್ಚಿ ಕೂತಿದೆ. 

ಏಕೈಕ ಉಪಕೇಂದ್ರ
ಪಡುಕರೆ ಭಾಗದ ಮಲ್ಪೆ, 

ಕಿದಿಯೂರು, ಕುತ್ಪಾಡಿ, ಕಡೆಕಾರ್‌ ಉದ್ಯಾವರ ಗ್ರಾಮದ ಜನರಿಗೆ ಇದು ಏಕೈಕ ಆರೋಗ್ಯ ಉಪ ಕೇಂದ್ರವಾಗಿತ್ತು. ಬಹುತೇಕ ಬಡ ಮೀನುಗಾರರ ಮನೆಗಳೇ ಹೆಚ್ಚಿರುವ ಇಲ್ಲಿನ ಮಂದಿ ಯಾವುದೇ  ಸಣ್ಣಪುಟ್ಟ ಅನಾರೋಗ್ಯ ಬಂದರೂ ದೂರದ ಮಲ್ಪೆ ಪ್ರಾಥಮಿಕ ಕೇಂದ್ರ ಅಥವಾ ಇನ್ನಿತರ ಖಾಸಗಿ ಚಿಕಿತ್ಸಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. 

ಸರ್ವ ಸೌಕರ್ಯ 
ಇಲ್ಲಿನ ಆರೋಗ್ಯ ಕೇಂದ್ರ ಬೇಕಾದ ಎಲ್ಲ ಸೌಕರ್ಯಗಳನ್ನು ಹೊಂದಿದೆ. ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಗೃಹವೂ ಇದೆ. ಆಸ್ಪತ್ರೆಯಲ್ಲಿ ಇಂಜೆಕ್ಷನ್‌ ಮತ್ತು ಇನ್ನಿತರ ಅಗತ್ಯ ವೈದ್ಯಕೀಯ ವಸ್ತುಗಳನ್ನು ಸಂಗ್ರಹಿಸುವ ರೆಫ್ರಿಜರೇಟರ್‌ ಇಲ್ಲಿವೆ. 

Advertisement

ಇದೀಗ ವರ್ಷದಿಂದ ಮುಚ್ಚಿರುವುದ ರಿಂದ ಅವು ಕೆಟ್ಟು ಹೋಗುವ ಸಂಭವ ಇದೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಕಂಡಿಲ್ಲ. 

ಆರೋಗ್ಯದ ಕಾಳಜಿ ವಹಿಸಿ 
ಇಲ್ಲಿನ ಆರೋಗ್ಯ ಉಪಕೇಂದ್ರಕ್ಕೆ ಆರೋಗ್ಯ ಸೇವಕಿಯನ್ನು ಒದಗಿಸಬೇಕೆಂದು ತಾಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಖಾಯಂ ಒಬ್ಬ ವೈದ್ಯರು ಹಾಗೂ ಆರೋಗ್ಯ ಸಹಾಯಕರನ್ನು ನೇಮಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.
– ಆನಂದ ಪುತ್ರನ್‌, ಪಡುಕರೆ

 ಪ್ರಸ್ತಾವನೆ ಸಲ್ಲಿಕೆ
ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಆರೋಗ್ಯ ಸಹಾಯಕಿಯರ ಹುದ್ದೆಯ ನೇಮಕಾತಿಗೆ ಸಂಬಂಧಪಟ್ಟಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಮಲ್ಪೆ ಆರೋಗ್ಯ ಕೇಂದ್ರದಲ್ಲಿಯೂ ಹುದ್ದೆಗಳು ಖಾಲಿ ಇದ್ದು  ಅಲ್ಲಿಗೆ ನೇಮಕಾತಿ ದೊರೆತಲ್ಲಿ ಮೊದಲು ಇಲ್ಲಿಗೆ ಭರ್ತಿ ಮಾಡಲಾಗುವುದು.
– ಡಾ|ರೋಹಿಣಿ
ಜಿಲ್ಲಾ ಆರೋಗ್ಯ ಇಲಾಖಾಧಿಕಾರಿ

 ಮನವಿಗೆ ಫ‌ಲವಿಲ್ಲ
ಹಿಂದಿನಂತೆ ದೋಣಿಯನ್ನೆ ಅವಲಂಬಿಸುವುದಾದರೆ ಆನಾರೋಗ್ಯ ಉಂಟಾದ ಸಂದರ್ಭದಲ್ಲಿ ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಈಗ ಪಡುಕರೆಗೆ ಸೇತುವೆಯಾದ್ದರಿಂದ ವಾಹನದ ಮೂಲಕವಾದರೂ ಬೇರೆ ಕಡೆಗೆ ಹೋಗಬಹುದು. ಆರೋಗ್ಯ ಕೇಂದ್ರದ ಬಗ್ಗೆ  ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದರೂ, ಯಾವ ಪ್ರಯೋಜನವೂ ಆಗಿಲ್ಲ. ಅಧಿಕಾರಿಗಳು ಕಾಯಕಲ್ಪ ನೀಡಿ ನಿರ್ವಹಣೆಗೆ ಒಳಪಡಿಸಬೇಕು. ಅಗತ್ಯ ವೈದ್ಯಾಧಿಕಾರಿ ಸಿಬಂದಿಗಳನ್ನು ನೇಮಕ ಮಾಡಬೇಕು.
– ಸುರೇಶ್‌ ಮೆಂಡನ್‌,ಪಡುಕೆರೆ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next