ಕುಷ್ಟಗಿ: ತಾಲೂಕಿನ ಕುಷ್ಟಗಿ-ಗಜೇಂದ್ರಗಡ ರಸ್ತೆ ಹಿರೇನಂದಿಹಾಳ ಸೀಮಾದ ಕುಷ್ಟಗಿ-ಗಜೇಂದ್ರಗಡ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಪಿಲ ತೀರ್ಥ ತೋಟಗಾರಿಕಾ ರೈತ ಉತ್ಪಾದಕರ ಘಟಕದ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ 80 ಕ್ವಿಂಟಲ್ ಮೆಕ್ಕೆಜೋಳ ಉತ್ಪನ್ನವನ್ನು ಕಳ್ಳರು ಅಪಹರಿಸಿದ ಘಟನೆ ನಡೆದಿದೆ.
ಕಪಿಲತೀರ್ಥ ರೈತ ಉತ್ಪಾದಕರ ಘಟಕದಲ್ಲಿ ಗೋಡೌನ್ 500 ಚೀಲಗಳು ಹಾಗೂ 200 ಚೀಗಳು ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗಿತ್ತು. ಲಾರಿಯೊಂದಿಗೆ ಆಗಮಿಸಿದ ಕಳ್ಳರು, ಗೋಡೌನ್ ಹಿಂಬದಿಯ ಕಿಟಕಿ ಎಕ್ಸೆಲ್ ಬ್ಲೇಡ್ ನಿಂದ ಕೊರೆದು ಒಳ ನುಗ್ಗಿದ್ದಾರೆ.
ನಂತರ ಮುಖ್ಯ ದ್ವಾರದ ಶೆಟರ್ ಎತ್ತಿ ಒಟ್ಟು 124 ಚೀಲಗಳ ಅಂದಾಜು 80 ಕ್ವಿಂಟಲ್ ಮೆಕ್ಕೆಜೋಳ ಲಾರಿಗೆ ಲೋಡ್ ಮಾಡಿಕೊಂಡು ಹೋಗಿದ್ದಾರೆ. ಹೋಗುವಾಗ ಅಳವಡಿಸಿದ ನಾಲ್ಕು ಸಿಸಿ ಕ್ಯಾಮರಾ ಹಾಗೂ ಡಿವೈಸ್ ಸಹ ಕದ್ದೊಯ್ದಿದ್ದಾರೆ. ಈ ಕಳ್ಳತನ ಪ್ರಕರಣದ ಹಿನ್ನೆಲೆ ಸ್ಥಳೀಯರ ಕೈವಾಡದ ಶಂಕೆ ಸಾರ್ವಜನಿಕವಾಗಿ ವ್ಯಕ್ತವಾಗಿದೆ.
ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ ಭೇಟಿ ನೀಡಿ ಸ್ಥಾನಿಕ ಪರಿಶೀಲನೆ ನಡೆಸಿ, ಶ್ವಾನ ದಳ ಕರೆಸಿ ಕಳ್ಳರ ಪತ್ತೆಗೆ ಕ್ರಮಕ್ಕೆ ಮುಂದಾಗಿದ್ದಾರೆ.
ಕಪಿಲತೀರ್ಥ ರೈತರ ಉತ್ಪಾದನಾ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ರೈತರ ಉತ್ಪನ್ನ ಘಟಕದಲ್ಲಿ ಈ ಮೊದಲು ಕಾವಲುಗಾರರನ್ನು ನೇಮಿಸಿಕೊಂಡಿತ್ತು. ಆದರೆ ಅವರಿಗೆ ವೇತನ ಜಾಸ್ತಿ ಕೇಳಿದ್ದರಿಂದ 30 ಸಾವಿರ ರೂ. ವೆಚ್ಚ ಮಾಡಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಆದರೆ ಸಿಸಿ ಕ್ಯಾಮರಾ ಕಿಟ್ ಅನ್ನು ಕದ್ದೊಯ್ದಿರುವುದು ಹಾಗೂ ಮೆಕ್ಕೆಜೋಳ ಉತ್ಪನ್ನ ಸೇರಿದಂತೆ ಒಟ್ಟು 2.50 ಲಕ್ಷ ರೂ. ಮೌಲ್ಯದ ವಸ್ತುಗಳು ಕಳವಾಗಿದೆ.
ಗೋಡೌನ್ ನಲ್ಲಿ 200 ಚೀಲದಲ್ಲಿ 109 ಚೀಲಗಳು ಹಾಗೂ 500 ಚೀಲಗಳಲ್ಲಿ 15 ಚೀಲ ಕಳವಾಗಿದೆ ಎಂದು ತಿಳಿಸಿದ್ದಾರೆ.