ಕುಷ್ಟಗಿ: ಕುಷ್ಟಗಿ ಪಟ್ಟಣದ 17 ನೇ ವಾರ್ಡ್ ನಲ್ಲಿ ಚರಂಡಿ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ತಮ್ಮ ಮನೆಯ ಮುಂದಿನ ಚರಂಡಿ ಕಾಮಗಾರಿಯನ್ನು ಕುಟುಂಬದವರು ಚರಂಡಿಗೆ ಇಳಿದು ನಿರ್ಮಿಸಿಕೊಳ್ಳುತ್ತಿದ್ದು ಪುರಸಭೆ ನಿರ್ಲಕ್ಷ್ಯ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಎಸ್ ಎಫ್ ಸಿ ಪ್ಯಾಕೇಜ್ ಅನುದಾನದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದಿಂದ ಚಹಾಪುಡಿ ಮನೆಯವರೆಗೆ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಚರಂಡಿ ಮುಂದುವರಿದ ಕಾಮಗಾರಿಗೆ ಅತಿಕ್ರಮ ಕಟ್ಟೆಗಳ ತೆರವು ಅಡ್ಡಿಯಾಗಿರುವುದು ವಾಸ್ತವ ಸ್ಥಿತಿ.
ಪುರಸಭೆ ಜೆಇ ಜಹಾಂಗೀರ್ ಅವರು ಅತಿಕ್ರಮ ತೆರವು ಅವಕಾಶ ಮಾಡಿಕೊಟ್ಟರೆ ಮಾತ್ರ ಚರಂಡಿ ನಿರ್ಮಿಸುವ ವಾದ ಗುತ್ತಿಗೆದಾರರದ್ದು. ಆದರೆ ಪುರಸಭೆ ಜೆಇ ಮಾತ್ರ ಅತಿಕ್ರಮ ತೆರವು ಕೆಲಸಕ್ಕೆ ಮೀನಾ ಮೇಷಾ ಮಾಡುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಥಳೀಯರಾದ ಶ್ರೀಶೈಲಪ್ಪ ಪಟ್ಟಣಶೆಟ್ಟಿ ಅವರು ತಮ್ಮ ಮನೆಯ ಮುಂದಿನ ಭಾಗದ ಚರಂಡಿಯನ್ನು ತಾವೇ ಪತ್ನಿ ಹಾಗೂ ಪುತ್ರನೊಂದಿಗೆ ಚರಂಡಿ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದಾರೆ. ಚರಂಡಿಗೆ ಇಳಿಸು ಕೆಲಸ ಮಾಡುತ್ತಿದ್ದರೂ ಪುರಸಭೆ ಸಿಬ್ಬಂದಿ, ಗುತ್ತಿಗೆದಾರರು, ಪುರಸಭೆ ಅಧಿಕಾರಿಗಳು ಗಮನಸಿಲ್ಲ.
ಇದನ್ನೂ ಓದಿ:Suyash Sharma: ಆರ್ ಸಿಬಿ ಬ್ಯಾಟರ್ ಗಳನ್ನು ಕಾಡಿದ ನೀಲಕೇಶದ ಚೆಲುವ ಯಾರು?
ಈ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡಿದ್ದು ಚರಂಡಿ ನಿರ್ಮಿಸದೇ ಅರ್ಧಕ್ಕೆ ನಿಲ್ಲಿಸಿದ್ದು, ಚರಂಡಿ ಕಾಮಗಾರಿ ಪೂರ್ಣಗೊಳಿಸಲು ಹಲವು ಬಾರಿ ಮನವಿ ಮಾಡಿದರು ಪುರಸಭೆ ಸ್ಪಂದಿಸಿಲ್ಲ ಎಂದು ಪುರಸಭೆ ನಿರ್ಲಕ್ಷ ಧೋರಣೆಗೆ ಶ್ರೀಶೈಲಪ್ಪ ಪಟ್ಟಣಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಅವರನ್ನು ಸಂಪರ್ಕಿಸಿದಾಗ ನನ್ನ ಗಮನಕ್ಕೆ ಬಂದಿಲ್ಲ ಈ ಕೂಡಲೇ ಜೆಇ ಅವರನ್ನು ಪರಿಶೀಲನೆಗೆ ಕಳುಹಿಸುವೆ. ಖುದ್ದಾಗಿ ನಾನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.