ಕನ್ನಡ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ, “ಮುನಿರತ್ನ ಕುರುಕ್ಷೇತ್ರ’ ಇದೇ ವರಮಹಾಲಕ್ಷ್ಮೀ ಹಬ್ಬದ ದಿನ ಅಂದರೆ, ಆಗಸ್ಟ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮುನಿರತ್ನ ಕಳೆದ ತಿಂಗಳು ಘೋಷಿಸಿದ್ದರು.
ಬಹುತಾರಾಗಣದ “ಮುನಿರತ್ನ ಕುರುಕ್ಷೇತ್ರ’ದ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ, ತೆರೆಗೆ ಬರಲು ಸಿದ್ಧವಾಗಿರುವ ಇತರೆ ಚಿತ್ರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ, ತಮ್ಮ ತಮ್ಮ ಚಿತ್ರಗಳ ರಿಲೀಸ್ ಹೊಂದಾಣಿಕೆ ಮಾಡಿಕೊಳ್ಳಲು ಶುರು ಮಾಡಿದ್ದವು.
ಈಗ ಇದೇ “ಮುನಿರತ್ನ ಕುರುಕ್ಷೇತ್ರ’ ಚಿತ್ರತಂಡದ ಕಡೆಯಿಂದ ಬಿಡುಗಡೆಯ ಕುರಿತಾದ ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದೇನಪ್ಪ ಅಂದರೆ, “ಮುನಿರತ್ನ ಕುರುಕ್ಷೇತ್ರ’ ಆ. 9 ರ ಬದಲಾಗಿ ಆ. 2 ರಂದೇ ತೆರೆಗೆ ಬರುತ್ತಿದೆ. ಹೌದು, ಚಿತ್ರತಂಡದ ಮೂಲಗಳ ಪ್ರಕಾರ “ಮುನಿರತ್ನ ಕುರುಕ್ಷೇತ್ರ’ ಚಿತ್ರ ಮೊದಲು ಅನೌನ್ಸ್ ಮಾಡಿದ ದಿನಕ್ಕಿಂತ ಒಂದುವಾರ ಮೊದಲೇ ಬಿಡುಗಡೆಯಾಗುತ್ತಿದೆ.
“ಮುನಿರತ್ನ ಕುರುಕ್ಷೇತ್ರ’ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗುತ್ತಿರುವ ಮೈಥಾಲಜಿಕಲ್ 3ಡಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 3ಡಿ ಮತ್ತು 2ಡಿ ತಂತ್ರಜ್ಞಾನದಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಮೋಶನ್ ಕೆಲಸಗಳನ್ನು ಆರಂಭಿಸಿರುವ ಚಿತ್ರತಂಡ, ಇದೇ ಜು.7 ರಂದು ಅದ್ಧೂರಿಯಾಗಿ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡುತ್ತಿದೆ.
ಈಗಾಗಲೇ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ತಮಿಳು, ತೆಲುಗು ವಿತರಣೆಯ ಹಕ್ಕುಗಳು ದೊಡ್ಡ ಮೊತ್ತಕ್ಕೆ ವ್ಯಾಪಾರವಾಗಿದೆ. ಇನ್ನು ಕನ್ನಡದಲ್ಲಿ “ಮುನಿರತ್ನ ಕುರುಕ್ಷೇತ್ರ’ದ ವಿತರಣೆಯ ಹಕ್ಕುಗಳನ್ನು ನಿರ್ಮಾಪಕ ಕಂ ವಿತರಕ ರಾಕ್‌ಲೈನ್ ವೆಂಕಟೇಶ್ ಖರೀದಿಸಿದ್ದು, ರಾಕ್‌ಲೈನ್ ನಿಗದಿತ ದಿನಕ್ಕಿಂತ ಒಂದು ವಾರ ಮೊದಲೇ “ಮುನಿರತ್ನ ಕುರುಕ್ಷೇತ್ರ’ ಚಿತ್ರವನ್ನು ರಿಲೀಸ್ ಮಾಡಲು ಯೋಚಿಸಿದ್ದಾರೆ ಎನ್ನಲಾಗಿದೆ.
ಅತ್ತ, ತೆಲುಗು, ತಮಿಳು ಭಾಷೆಯಲ್ಲಿ ತಯಾರಾಗಿರುವ ಚಿತ್ರದ ವಿತರಣೆಯ ಹಕ್ಕುಗಳು ಮಾರಾಟವಾಗಿವೆ. ಒಟ್ಟಾರೆ “ಮುನಿರತ್ನ ಕುರುಕ್ಷೇತ್ರ’ ಒಂದು ವಾರದ ಮೊದಲೇ ತೆರೆಗೆ ಬರುತ್ತಿದೆ ಎನ್ನುವ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿರುವುದಂತೂ ಸುಳ್ಳಲ್ಲ.