Advertisement

ರಾಜ್ಯದ ಅರಣ್ಯ ನಿಧಿಗಾಗಿ ಕೇಂದ್ರ ಸರಕಾರಕ್ಕೆ ನಿಯೋಗ: ಅರಣ್ಯ ಸಚಿವ ಖಂಡ್ರೆ

11:48 PM Jan 02, 2025 | Team Udayavani |

ಬೆಂಗಳೂರು: ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ರಾಜ್ಯಗಳಿಂದ ಸಂಗ್ರಹವಾದ ಹಣ ಬಿಡುಗಡೆ ಮಾಡಲು ಕೇಂದ್ರ ಸರಕಾರ ಮೀನಮೇಷ ಎಣಿಸುತ್ತಿದ್ದು, ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುವುದಾಗಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

Advertisement

ಗುರುವಾರ ವಿಕಾಸಸೌಧದಲ್ಲಿ ಇಲಾಖಾ ಅಧಿಕಾರಿಗಳ ಸಭೆ ಬಳಿಕ 2025ರ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿದ್ದು, ಅವು ವಿದ್ಯುತ್‌ ಸ್ಪರ್ಶದಿಂದ ಸಾವಿಗೀಡಾಗುತ್ತಿವೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದರು.

ರೈಲ್ವೇ ಬ್ಯಾರಿಕೇಡ್‌ ಅಳವಡಿಸಲು, ಕಾರಿಡಾರ್‌ ನಿರ್ಮಿಸಲು ಕ್ಯಾಂಪಾದಲ್ಲಿರುವ ರಾಜ್ಯದ 1400 ಕೋಟಿ ರೂ.ಗಳನ್ನೇ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರ ಬಳಿಗೆ ದಕ್ಷಿಣ ರಾಜ್ಯಗಳ ಅರಣ್ಯ ಸಚಿವರ ನಿಯೋಗ ತೆಗೆದುಕೊಂಡು ಹೋಗಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದು, ಶೀಘ್ರವೇ ಎಲ್ಲ ಸಚಿವರಿಗೂ ಪತ್ರ ಬರೆಯಲಾಗುವುದು ಎಂದರು.

ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಮಾನವ-ಆನೆ ಸಂಘರ್ಷ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಝಾರ್ಖಂಡ್‌ ರಾಜ್ಯದ ಸಚಿವರು ಕೂಡ ಕೇಂದ್ರಕ್ಕೆ ನಿಯೋಗದಲ್ಲಿ ಆಗಮಿಸಲು ಸಮ್ಮಿತಿಸಿದ್ದರು. ಈಗ ಮತ್ತೂಮ್ಮೆ ಚರ್ಚಿಸಿ, ಎಲ್ಲ ರಾಜ್ಯಗಳ ಸಚಿವರನ್ನೂ ಆಹ್ವಾನಿಸುತ್ತೇವೆ ಎಂದು ಹೇಳಿದರು.

ಬಂಡೀಪುರ ರಾತ್ರಿ ಸಂಚಾರಕ್ಕೆ ತೊಡಕಿಲ್ಲ
ಕರ್ನಾಟಕ ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಬಂಡೀಪುರ – ವಯನಾಡು ನಡುವೆ ರಾತ್ರಿ ಸಂಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ರಾತ್ರಿ 9ರ ವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ 9 ಗಂಟೆಯ ಅನಂತರ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ಇದರ ಹೊರತಾಗಿಯೂ ಎರಡೂ ಕಡೆಯಿಂದ 2 ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ಆ್ಯಂಬುಲೆನ್ಸ್‌ ಓಡಾಟಕ್ಕೆ ಯಾವುದೇ ಅಡ್ಡಿ ಮಾಡುತ್ತಿಲ್ಲ. ಹೀಗಾಗಿ ರಾತ್ರಿ ಸಂಚಾರಕ್ಕೆ ಯಾವುದೇ ತೊಡಕಿಲ್ಲ ಎಂದು ಸಚಿವ ಈಶ್ವರ್‌ ಖಂಡ್ರೆ ಸ್ಪಷ್ಟಪಡಿಸಿದರು.

Advertisement

ಭದ್ರಾ ಅಭಯಾರಣ್ಯದಲ್ಲಿ
ಆನೆಗಳ ವಿಹಾರಧಾಮ?
ಆನೆಗಳಿಂದ ಬೆಳೆಹಾನಿ ಮತ್ತು ಜೀವಹಾನಿ ಆಗುತ್ತಿದ್ದು, ಇದನ್ನು ತಪ್ಪಿಸಲು ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್‌ ಸಾ´r… ರಿಲೀಸ್‌ ಸೆಂಟರ್‌) ನಿರ್ಮಿಸಲು ಯೋಜನೆ ರೂಪಿಸಲಾಗತ್ತಿದೆ. ಇದಕ್ಕೆ 100 ಕೋಟಿ ರೂ. ಅಗತ್ಯವಿದ್ದು, ಬಜೆಟ್‌ನಲ್ಲಿ ಅನುದಾನ ನೀಡುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.

ಅರಣ್ಯವಾಸಿಗಳ ಸ್ಥಳಾಂತರ, 15 ಲಕ್ಷ ರೂ. ಪರಿಹಾರ
ಇದಿಷ್ಟೇ ಅಲ್ಲದೆ ರಾಜ್ಯದ ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಅಭಯಾರಣ್ಯ, ಮೀಸಲು ಅರಣ್ಯ, ಹುಲಿ ಸಂರಕ್ಷಿತ ಅರಣ್ಯ ಸೇರಿದಂತೆ ವಿವಿಧ ಅರಣ್ಯಗಳಲ್ಲಿ ಹಲವಾರು ವರ್ಷಗಳಿಂದ ಅರಣ್ಯವಾಸಿಗಳು ಜೀವಿಸುತ್ತಿದ್ದು, ಗಂಡ, ಹೆಂಡತಿ ಒಳಗೊಂಡು ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಅದೇ ರೀತಿ ಅರಣ್ಯದೊಳಗೆ ಅಳವಡಿಸಲಾಗಿರುವ ವಿದ್ಯುತ್‌ ತಂತಿಗಳು ಕೆಲವೆಡೆ ಜೋತು ಬಿದ್ದಿದ್ದು, ಆನೆಗಳು ಸಾವಿಗೀಡಾಗುತ್ತಿವೆ. ವಿದ್ಯುತ್‌ ತಂತಿ ತೂಗಾಡದಂತೆ ಕ್ರಮ ವಹಿಸಲು ಮತ್ತು ಅಂತರ್ಗತ ಕೇಬಲ್‌ ಅಳವಡಿಸಲು ವಿದ್ಯುತ್‌ ಕಂಪೆನಿಗಳಿಗೆ ತಿಳಿಸಿರುವುದಾಗಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next