Advertisement
ಕಾವು ಪಳ್ಳತ್ತೂರು ಲೋಕೋಪಯೋಗಿ ರಸ್ತೆಯಲ್ಲಿ ಪಳ್ಳತ್ತೂರು ಸೇತುವೆ ಕಾರ್ಯ ನಡೆಯುತ್ತಿರುವುದರಿಂದ ಪಂಚೋಡಿ ಕರ್ನೂರು ಗಾಳಿಮುಖ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ನ. 5ರಂದು “ಉದಯವಾಣಿ’ ಸುದಿನದಲ್ಲಿ “ಕರ್ನಾಟಕ ಕೇರಳ ರಸ್ತೆ: ಸಂಪರ್ಕ ಕಡಿತಗೊಳ್ಳುವ ಭೀತಿ’ ಕರ್ನೂರು ಮಠದಲ್ಲಿ ಅಪಾಯಕಾರಿ ಹೊಂಡ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅದಾಗಿ ಎರಡೇ ದಿನಗಳಲ್ಲಿ ಮೋರಿ ಕುಸಿದಿದ್ದು, ಕೇರಳ ಸಂಪರ್ಕವನ್ನು ಕಳೆದುಕೊಂಡಿತ್ತು. ಯಾವುದೇ ಅನಾಹುತ ಸಂಭವಿಸುವ ಮೊದಲೇ ಕುಸಿಯುವ ಲಕ್ಷಣ ಕಂಡು ಬಂದಿರುವುದರಿಂದ ಸಂಚಾರ ನಿಬಂರ್ಧಿಸಲಾಗಿತ್ತು.
ಮೋರಿಯ ಎರಡೂ ಬದಿ ಕುಸಿದಿದ್ದು, ಜೆಸಿಬಿ ಮೂಲಕ ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯ ನಡೆದಿದೆ. ಮಳೆ ಜೋರಾಗಿ ಸುರಿದರೆ ತಾತ್ಕಾಲಿಕ ವ್ಯವಸ್ಥೆ ನೀರಿನಲ್ಲಿ ಕೊಚ್ಚಿ ಹೋಗಲಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಕೂಡಲೇ ಸ್ಪಂದಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಸತ್ತಿವೇಲು, ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಸುರೇಶ್ ರೈ, ಸಿಬಂದಿ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಸದಸ್ಯರು, ಗ್ರಾಮಸ್ಥರು ಆಗಮಿಸಿ ತಾತ್ಕಾಲಿಕ ದುರಸ್ತಿಗೆ ಸಹಕರಿಸಿದರು.