Advertisement
ಶ್ರೀರಾಮಪುರ ನಿವಾಸಿ ಪ್ರಿಯಾ (27) ಮೃತ ಯುವತಿ. ರಾಜಾಜಿನಗರದ ಡಾ| ರಾಜ್ಕುಮಾರ್ ರಸ್ತೆಯ ಮೈ ಇವಿ ಸ್ಟೋರ್ ಹೆಸರಿನ ಎಲೆಕ್ಟ್ರಿಕ್ ಬೈಕ್ ಮಳಿಗೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ.
ಮಳಿಗೆಯಲ್ಲಿ ಯುವತಿ ಸೇರಿ 7ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಸಂಜೆ 6 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಶೋ ರೂಮ್ನ ಬ್ಯಾಟರಿ ಸೆಕ್ಷನ್ನಲ್ಲಿ ಬೆಂಕಿ ಕಾಣಿಸಿಕೊಂಡು, ಮೊದಲಿಗೆ ಬ್ಯಾಟರಿ ಸ್ಫೋಟಗೊಂಡಿತು. ಗಾಬರಿಗೊಂಡ ಯುವತಿ ಸೇರಿ ಎಲ್ಲಾ ಸಿಬಂದಿ ಹೊರಗಡೆ ಹೋಗಲು ಮುಂದಾದರು. ಆದರೆ ಯುವತಿ, ಬೆಂಕಿಯ ಕಿನ್ನಾಲಿಗೆಯಿಂದ ಪಾರಾಗಲು ಆಡಳಿತ ವಿಭಾಗದ ಕ್ಯಾಬಿನ್ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಇತರೆ ಸಿಬಂದಿ ಶೋರೂಮ್ನಿಂದಲೇ ಹೊರಗಡೆ ಹೋಗಿದ್ದಾರೆ. ಈ ವೇಳೆ ಕ್ಯಾಬಿನ್ಗೆ ಬ್ಯಾಟರಿಗಳ ಸ್ಫೋಟದಿಂದ ಗಾಜುಗಳು ಪುಡಿಯಾಗಿ ಬೆಂಕಿಯ ಕಿನ್ನಾಲಿಗೆ ಪ್ರಿಯಾಗೆ ತಗಲಿದೆ. ಪರಿಣಾಮ ಆಕೆ ಕೆಲವೇ ಕ್ಷಣಗಳಲ್ಲಿ ಸಜೀವ ದಹನವಾಗಿದ್ದಾರೆ.
Related Articles
ವಿಷಯ ತಿಳಿದು 2 ಅಗ್ನಿಶಾಮಕ ವಾಹನಗಳ ಜತೆ ಸ್ಥಳಕ್ಕೆ ಧಾವಿಸಿದ ಸಿಬಂದಿ ಬೆಂಕಿ ನಂದಿಸುತ್ತಿದ್ದರು.ಮತ್ತೊಂದೆಡೆ ರಾಜಾಜಿನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಘಟನಾ ಸ್ಥಳದ ಸುತ್ತ-ಮುತ್ತ ಜಮಾಯಿಸಿದ್ದ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಚದುರಿಸಿದರು. ಆದರೆ ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ಕರೆಸಿಕೊಂಡು ಸುಮಾರು 3 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
Advertisement
ಇಂದು ಹುಟ್ಟುಹಬ್ಬ ಇತ್ತು: ತಂದೆ ಆಕ್ರಂದನಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ ಪ್ರಿಯಾ ಮೃತಪಟ್ಟ ಸುದ್ದಿ ಕೇಳಿ ಅವರ ತಂದೆ ಆರ್ಮುಗಂ ಶೋ ರೂಮ್ ಬಳಿ ಬಂದು ಪುತ್ರಿಗಾಗಿ ಗೋಳಾಡಿದರು. ಅವರ ಆಕ್ರಂದನ ಅಲ್ಲಿಂದ್ದವರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು. ಭಾವುಕರಾಗಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್ಮುಗಂ, ಕಳೆದ 3 ವರ್ಷಗಳಿಂದ ಪುತ್ರಿ ಈ ಎಲೆಕ್ಟ್ರಿಕ್ ಶೋ ರೂಮ್ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನ. 20ರಂದು ಪುತ್ರಿಯ ಹುಟ್ಟುಹಬ್ಬವಿತ್ತು. ಆಕೆಗಾಗಿ ಹೊಸ ಬಟ್ಟೆ ಕೂಡ ಖರೀದಿಸಿದ್ದೆವು. ಅದನ್ನು ಧರಿಸಲು ಆಕೆಯೇ ಇಲ್ಲ ಎಂದು ಆರ್ಮುಗಂ ಕಣ್ಣೀರಿಟ್ಟರು.