ಮಂಡ್ಯ/ಬೆಳಗಾವಿ: ಇತ್ತೀಚೆಗೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದ ಬೆನ್ನಲ್ಲೇ, ಇದೀಗ ಸಚಿವ ಸ್ಥಾನಕ್ಕೆ ಇಬ್ಬರು ಶಾಸಕರು ಬೇಡಿಕೆ ಇಟ್ಟಿದ್ದಾರೆ.
ಅಪರೇಷನ್ ಕಮಲ ಚರ್ಚೆಯ ನಡುವೆಯೇ, ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸಿಫ್ ಸೇಠ್ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
“ಸಚಿವ ಸ್ಥಾನ ಪಡೆಯುವುದು ಬೇಡಿಕೆಯಲ್ಲ. ಅದು ನನ್ನ ಹಕ್ಕಾಗಿದೆ. ಸಂಪುಟ ಪುನರಾರಚನೆ ವೇಳೆ ಸಚಿವ ಸ್ಥಾನ ದಕ್ಕಿಸಿಕೊಳ್ಳುತ್ತೇನೆ’ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಂಡ್ಯದಲ್ಲಿ ತಿಳಿಸಿದ್ದಾರೆ. “ಬೆಳಗಾವಿ ಜಿಲ್ಲೆಯಲ್ಲಿ 18 ಮತ ಕ್ಷೇತ್ರಗಳಿವೆ. ಇಷ್ಟು ದೊಡ್ಡ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಬೇಕು. ಬೆಂಗಳೂರಿನಂಥ ದೊಡ್ಡ ಜಿಲ್ಲೆಗೆ 3-4 ಸಚಿವ ಸ್ಥಾನ ಕೊಟ್ಟಿದ್ದೀರಿ. ಯಾಕೆ ಉತ್ತರ ಕರ್ನಾಟಕದ ಅಲ್ಪಸಂಖ್ಯಾಕರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎಂದು ನಮ್ಮ ಸಮುದಾಯದವರು ಕೇಳುತ್ತಿದ್ದಾರೆ’ ಎಂದು ಬೆಳಗಾವಿಯಲ್ಲಿ ಶಾಸಕ ಆಸಿಫ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನರೇಂದ್ರಸ್ವಾಮಿ, ರಾಜಕೀಯ ಹಿನ್ನೆಲೆ ಇದ್ದರೆ ಸ್ಥಾನಮಾನ ಸಿಗುತ್ತದೆ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ನಾನೇ ಹಿರಿಯ ಶಾಸಕನಾಗಿದ್ದೇನೆ. ಕಾಂಗ್ರೆಸ್ ಕಟ್ಟಿದ್ದೇನೆ. ನನಗೆ ಹಕ್ಕಿಲ್ಲವೇ?, ನನಗೆ ಯೋಗ್ಯತೆ, ಅರ್ಹತೆ, ಸೀನಿಯಾರಿಟಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.