ಕಾರ್ಕಳ/ ಹೆಬ್ರಿ: ಮೂರು ರಾಜ್ಯಗಳ ಭದ್ರತ ಪಡೆಗಳು ಹಗಲಿರುಳು ಹುಡುಕಾಡುತ್ತಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಮತ್ತು ತಂಡದ ವಿರುದ್ಧ ನಡೆದ ಕಾರ್ಯಾಚರಣೆ ನಿಜಕ್ಕೂ ರೋಚಕವಾಗಿತ್ತು.
ವಾರದ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಸಿಬಂದಿ ಕಾಡಂಚಿನ ಹೆಬ್ರಿ ತಾಲೂಕಿನ ಪೀತಬೈಲು ಗ್ರಾಮಕ್ಕೆ ತೆರಳಿ ಮಾರುವೇಷದಲ್ಲಿ ತಂಗಿದ್ದರು. ನಾಗರಿಕ ಉಡುಗೆಯಲ್ಲಿದ್ದ ಈ ವಿಶೇಷ ತಂಡವು ಅರಣ್ಯದಲ್ಲಿ ಓಡಾಟ ಮಾಡುವವರ ಮೇಲೆ ನಿಗಾ ಇರಿಸಿತ್ತು. ಇನ್ನೊಂದೆಡೆ ಶೋಧ ಕಾರ್ಯಾಚರಣೆಯೂ ನಡೆಯುತ್ತಿತ್ತು.
ಇದರ ನಡುವೆಯೇ ನಕ್ಸಲ್ ನಾಯಕ ವಿಕ್ರಂ ಗೌಡ ಬರುವ ಮಾಹಿತಿ ಎಎನ್ಎಫ್ ತಂಡಕ್ಕೆ ದೊರೆತಿದ್ದು, ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹೆಚ್ಚುವರಿ ಪಡೆ ಯನ್ನು ಸ್ಥಳಕ್ಕೆ ಕರೆಸಿದ್ದರು. ನಕ್ಸಲರು ಬರುವ ವೇಳೆ ಕಾರ್ಯಾಚರಣೆಗೆ ಎಎನ್ಎಫ್ ಸಂಪೂರ್ಣ ಸನ್ನದ್ಧವಾಗಿತ್ತು. ವಿಶೇಷ ಎಂದರೆ ಎಎನ್ಎಫ್ ಇರುವ ಮಾಹಿತಿ ಊರಿನವರಿಗೂ ಇರಲಿಲ್ಲ.
ಸೋಮವಾರ ಸಂಜೆ ವೇಳೆಗೆ ಪೀತಬೈಲು ಜಯಂತ ಗೌಡ ಅವರ ಮನೆಯತ್ತ ಆಹಾರ ಕೊಂಡೊಯ್ಯಲು ನಕ್ಸಲರು ಬಂದಿರುವ ಗುಪ್ತ ಚರ ಮಾಹಿತಿಯಂತೆ ಹೆಚ್ಚಿನ ಪಡೆಯೊಂದಿಗೆ ಶೋಧ ನಡೆಯುತ್ತಿದ್ದಾಗ ಎದುರಾದ ನಕ್ಸಲರು ಎಎನ್ಎಫ್ ಸಿಬಂದಿಯತ್ತ ಗುಂಡಿನ ದಾಳಿ ನಡೆಸಿದರು. ಎಎನ್ಎಫ್ ಸಿಬಂದಿ ಶರಣಾ ಗುವಂತೆ ನಕ್ಸಲರಿಗೆ ಪದೇ ಪದೆ ಸೂಚಿಸಿದರೂ ಅವರು ಗುಂಡಿನ ದಾಳಿಯನ್ನು ತೀವ್ರಗೊಳಿಸಿ ದ್ದರಿಂದ ಎಎನ್ಎಫ್ ಸಿಬಂದಿ ಕೂಡ ಪ್ರತಿ ದಾಳಿ ನಡೆಸಬೇಕಾಯಿತು.
ಈ ವೇಳೆ ಓರ್ವ ಗುಂಡೇಟು ತಗಲಿ ಕುಸಿದು ಬಿದ್ದಿದ್ದು, ಇತರ ಕೆಲವರು ಕಾಡಿನತ್ತ ಓಡಿ ಪರಾರಿಯಾದರು. ಗುಂಡಿನ ಮೊರೆತ ಕಡಿಮೆಯಾದ ಬಳಿಕ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಬಿದ್ದಿದ್ದ ವ್ಯಕ್ತಿ ನಕ್ಸಲ್ ಮುಖಂಡ ವಿಕ್ರಂ ಗೌಡ ಎಂಬುದು ತಿಳಿದುಬಂತು.
ಅಟೋರಿಕ್ಷಾದಲ್ಲಿ ಆಹಾರ ಪೂರೈಕೆ
ಎಎನ್ಎಫ್ ಸಿಬಂದಿ ಆಟೋರಿಕ್ಷಾದಲ್ಲಿ ಬಂದು ಪೀತಬೈಲಿನಲ್ಲಿ ತಂಗಿದ್ದು, ರಹಸ್ಯ ಕಾರ್ಯಾ ಚರಣೆಯಲ್ಲಿ ತೊಡಗಿದ್ದರು. ಇವರಿಗೆ ಆಹಾರ ಸಾಮಗ್ರಿಯನ್ನು ಆಟೋ ರಿಕ್ಷಾದಲ್ಲಿಯೇ ರಹಸ್ಯವಾಗಿ ಒಯ್ಯಲಾಗುತ್ತಿತ್ತು ಎನ್ನಲಾಗಿದೆ.
ಎನ್ಕೌಂಟರ್ ಘಟನಾವಳಿ: ಏನಾಯಿತು?
ಆಹಾರ ಒಯ್ಯಲು ಪೀತಬೈಲಿನ ಮನೆಯೊಂದರ ಬಳಿ ನಕ್ಸಲ್ ತಂಡ ಆಗಮನ. ಆಗ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಕಾಳಗ. ಮೈಕ್ ಇಲ್ಲದೆ ಶರಣಾಗುವಂತೆ ಬಾಯಿ ಮಾತಿನಿಂದಲೇ ಪೊಲೀಸರ ಸೂಚನೆ. ಎಷ್ಟೇ ಸೂಚನೆ ನೀಡಿದರೂ ಶರಣಾಗದ ನಕ್ಸಲರು. ಬದಲಿಗೆ ಗುಂಡಿನ ದಾಳಿ ತೀವ್ರ.
ಅನಿವಾರ್ಯವಾಗಿ ಎಎನ್ಎಫ್ ಸಿಬಂದಿಯಿಂದಲೂ ಪ್ರತಿದಾಳಿ. ಆಗ ಒಬ್ಬ ಕುಸಿದು ಬಿದ್ದು, ಉಳಿದವರು ಗುಂಡು ಹಾರಿಸುತ್ತಲೇ ಕಾಡಿನತ್ತ ಓಟ. ಎಎನ್ಎಫ್ ಸಿಬಂದಿ ಸನಿಹಕ್ಕೆ ಹೋಗಿ ನೋಡಿದಾಗ ಸತ್ತದ್ದು ನಕ್ಸಲ್ ನಾಯಕ ವಿಕ್ರಂ ಗೌಡ ಎಂಬುದಾಗಿ ಪತ್ತೆ.