Advertisement

ಜಮ್ಮು-ಕಾಶ್ಮೀರ: ಮತ್ತಿಬ್ಬರು ಉಗ್ರರ ಸಂಹಾರ; 2 ಮ್ಯಾಗ್ನೆಟಿಕ್‌ ಬಾಂಬ್‌ ಪತ್ತೆ

07:25 PM Jun 07, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನಿ ಉಗ್ರ ಸೇರಿದಂತೆ ಇಬ್ಬರು ಲಷ್ಕರ್‌ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

Advertisement

ಕುಪ್ವಾರಾ ಜಿಲ್ಲೆಯ ಚಕ್ತಾರಾಸ್‌ ಪ್ರದೇಶದಲ್ಲಿ ಉಗ್ರರಿರುವ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದಾಗ, ಅಡಗಿದ್ದ ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾರೆ. ನಂತರ ಎರಡೂ ಕಡೆ ಕೆಲ ಕಾಲ ಗುಂಡಿನ ಚಕಮಕಿ ನಡೆದಿದ್ದು, ಪಾಕ್‌ ಉಗ್ರ ತುಫೈಲ್‌ ಸೇರಿ ಇಬ್ಬರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಕಾಶ್ಮೀರ ಐಜಿ ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ಮ್ಯಾಗ್ನೆಟಿಕ್‌ ಐಇಡಿ ಪತ್ತೆ:
ಈ ನಡುವೆ, ಜಮ್ಮುವಿನ ಗಡಿ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ನೆಲಕ್ಕೆ ಎಸೆಯಲಾಗಿದ್ದ ಮೂರು ಮ್ಯಾಗ್ನೆಟಿಕ್‌ ಐಇಡಿಗಳನ್ನು ಪೊಲೀಸರು ಮಂಗಳವಾರ ಪತ್ತೆಹಚ್ಚಿದ್ದಾರೆ. ಟೈಮರ್‌ಗಳನ್ನು ಸೆಟ್‌ ಮಾಡಿ ಟಿಫಿನ್‌ ಬಾಕ್ಸ್‌ನೊಳಗೆ ಈ ಬಾಂಬ್‌ಗಳನ್ನು ಇಡಲಾಗಿತ್ತು ಎಂದು ಜಮ್ಮು ಎಡಿಜಿಪಿ ಮುಕೇಶ್‌ ಸಿಂಗ್‌ ತಿಳಿಸಿದ್ದಾರೆ.

ಮೇಳಕ್ಕೆ ಹೊರಟ ಕಾಶ್ಮೀರಿ ಪಂಡಿತರಿಗೆ ಬಿಗಿಭದ್ರತೆ
ಕಾಶ್ಮೀರದ ಗಂದೇರ್‌ಬಾಲ್‌ ಜಿಲ್ಲೆಯಲ್ಲಿರುವ ಖೀರ್‌ ಭವಾನಿ ದೇವಾಲಯದ ವಾರ್ಷಿಕ ಮೇಳ ಜೂ.8ರಿಂದ ಆರಂಭವಾಗಲಿದ್ದು, 250 ಮಂದಿಯುಳ್ಳ ಕಾಶ್ಮೀರಿ ಪಂಡಿತರ ಮೊದಲ ತಂಡವನ್ನು ಬಿಗಿಭದ್ರತೆಯೊಂದಿಗೆ ಮೇಳಕ್ಕೆ ಕರೆದೊಯ್ಯಲಾಗಿದೆ. ಸರ್ಕಾರವೇ ವಿಶೇಷ ಬಸ್‌ಗಳ ವ್ಯವಸ್ಥೆಯನ್ನೂ ಮಾಡಿದೆ. ಆದರೆ, ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಿರುವ ಕಾರಣ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಂಡಿತರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next