Advertisement

ಸಾರಿಗೆ ವ್ಯವಸ್ಥೆ ಬಲಗೊಂಡರೆ ತಾಲೂಕು ಸಬಲಗೊಂಡೀತು

06:00 AM Mar 10, 2018 | |

ತಾಲೂಕಿನಲ್ಲಿ ಕೊರತೆ ಎನ್ನುವುದಕ್ಕಿಂತಲೂ ಅಗತ್ಯ ಎಂದು ಹೇಳುವುದಾದರೆ ಸಾರಿಗೆ ಸೇವೆ. ಬಹಳಷ್ಟು ಗ್ರಾಮೀಣ ಭಾಗಗಳಲ್ಲಿ ಇಂದೂ ದಿನಕ್ಕೆ ಒಂದೋ ಎರಡೋ ಬಸ್‌ ಎಂಬಂತಿದೆ. ಇದು ನಿವಾರಣೆಯಾದರೆ ತಾಲೂಕು ಅಭಿವೃದ್ಧಿಗೆ ವೇಗ ದೊರಕಬಹುದು. ರಸ್ತೆಯಾದರಷ್ಟೇ ಸಾಲದು, ಓಡಾಡಲು ಬಸ್‌ಗಳೂ ಬೇಕು ಎನ್ನುವುದನ್ನು ಜನಪ್ರತಿನಿಧಿಗಳ ಅರಿವಿಗೆ ಬರಬೇಕು.

Advertisement

ಕುಂದಾಪುರ: ಅಭಿವೃದ್ಧಿಗೆ ಹೆಗಲು ಕೊಡಬೇಕಿರುವುದು ಸಾರಿಗೆ ಸೇವೆ. ಪ್ರಸ್ತುತ ತಾಲೂಕಿನ ಹಲವು ಗ್ರಾಮೀಣ ಪ್ರದೇಶಗಳ ಬಾಗಿಲಿಗೆ ಇನ್ನೂ ಸಾರಿಗೆ ಸೇವೆ ಹೋಗಬೇಕಿದೆ. 

ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಾರಿಗೆ ವ್ಯವಸ್ಥೆ ನಡೆಯುತ್ತಿದೆ. ಆದರೆ, ಕುಂದಾಪುರ ತಾಲೂಕಿನ ತೀರಾ ಹಿಂದುಳಿದ ಪ್ರದೇಶಗಳಲ್ಲಿ ಸರಕಾರಿ ಹಾಗೂ ಖಾಸಗಿ ಸಾರಿಗೆ ಸೇವೆ ಸಾಕಷ್ಟು ಇಲ್ಲ ಎಂಬುದು ಒಪ್ಪಿಕೊಳ್ಳುವಂತಿದೆ.

ಖಾಸಗಿಯವರು ಬಹಳಷ್ಟು ವರ್ಷಗಳ ಹಿಂದೆಯೇ ಬಸ್‌ ಸಂಪರ್ಕ ಕಲ್ಪಿಸಿದ್ದರೂ, ಸರಕಾರಿ ಸಾರಿಗೆ ಸೇವೆ ಮಾತ್ರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ತಾಲೂಕಿನ ಬೆಳವಣಿಗೆ ದೃಷ್ಟಿಯಿಂದ ಈ ಭಾಗದಲ್ಲಿ ಸಾರಿಗೆ ಸಂಪರ್ಕ ಇನ್ನಷ್ಟು ಪ್ರಗತಿ ಕಾಣಬೇಕಿದೆ. ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಾದ ತುರ್ತು ಇದೆ.

ಬೇಡಿಕೆ ಇರುವ ಎಲ್ಲೆಡೆ ಸರಕಾರಿ ಬಸ್‌ಗಳನ್ನು ಬಿಡಲು ಕೆಎಸ್‌ಆರ್‌ಟಿಸಿ ಸಿದ್ಧವಿದ್ದರೂ, ಅದನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗುವುದು ಸವಾಲು. ಖಾಸಗಿ ಬಸ್‌ಗಳ ಪೈಪೋಟಿ ಹಾಗೂ ಬೆಳಗ್ಗೆ, ಸಂಜೆ ಹೊರತುಪಡಿಸಿದರೆ ಬೇರೆ ಅವಧಿಗಳಲ್ಲಿ ಬಸ್‌ಗಳಲ್ಲಿ ಜನದಟ್ಟಣೆ ಕಡಿಮೆ. ಇದರಿಂದ ನಷ್ಟ ಉಂಟಾಗಿ ಬಸ್‌ ರೂಟ್‌ಗಳೇ ರದ್ದಾದ ನಿದರ್ಶನಗಳಿವೆ. ಕುಂದಾಪುರದಿಂದ ಬೈಂದೂರು, ಸಿದ್ದಾಪುರ, ಶಂಕರನಾರಾಯಣ, ಕೊಲ್ಲೂರು ಭಾಗಗಳಿಗೆ ಒಟ್ಟು 38 ಬಸ್‌ಗಳು ಸಂಚರಿಸುತ್ತಿವೆ. 

Advertisement

ಬೇಕಿದೆ ಪ್ರಾದೇಶಿಕ ಸಾರಿಗೆ ಕಚೇರಿ
ಕುಂದಾಪುರದಲ್ಲೊಂದು 

ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯ ಬೇಕೆನ್ನುವುದು ಕುಂದಾಪುರ- ಬೈಂದೂರು ತಾಲೂಕಿನ ಜನರ ಬಹು ದಿನಗಳ ಬೇಡಿಕೆ. ಈಗ ಎಲ್ಲದಕ್ಕೂ ಮಣಿಪಾಲಕ್ಕೆ ಹೋಗಬೇಕು. 

ಕುಂದಾಪುರದಲ್ಲಿ ಯಾಕೆ ಬೇಕು?
ಮಣಿಪಾಲದಲ್ಲಿ ವಾರ್ಷಿಕ 140 ಕೋ.ರೂ. ಆದಾಯ ಬರುತ್ತಿದ್ದು, ವಾರ್ಷಿಕ ಒಟ್ಟು 6 ಸಾವಿರ ವಾಹನಗಳ ನೋಂದಣಿಯಾಗುತ್ತಿದೆ. ಸದ್ಯ ಮಣಿಪಾಲ ಆರ್‌ಟಿಒದಲ್ಲಿ ಶೇ. 40 ರಷ್ಟು ಸಿಬಂದಿ ಕೊರತೆ ಇದೆ. ಇದರಿಂದ ಅಲ್ಲಿ ತ್ವರಿತಗತಿಯಲ್ಲಿ ನೋಂದಣಿ ಪ್ರಕ್ರಿಯೆ ಕಾರ್ಯ ನಡೆಯುತ್ತಿಲ್ಲ. ತಿಂಗಳುಗಟ್ಟಲೆ ಕಾಯಬೇಕಿದೆ.

ಆರ್‌ಟಿಒ ಅರ್ಹತೆ
ಆರ್‌ಟಿಒ ಕಚೇರಿ ತೆರೆಯಲು ಅಗತ್ಯವಾಗಿ ವಾರ್ಷಿಕ 20 ಕೋಟಿ ರೂ. ಆದಾಯ ಬರಬೇಕು. 1 ಲಕ್ಷ ವಾಹನ ನೋಂದಣಿಯಾಗುವಂತಿರಬೇಕು. ಈಗಿರುವ ಮಣಿಪಾಲದ ವಾರ್ಷಿಕ ಆದಾಯ 140 ಕೋ.ರೂ. ನಲ್ಲಿ ಶೇ. 50ರಷ್ಟು ಆದಾಯ ಬರುತ್ತಿರುವುದು ಕುಂದಾಪುರ-ಬೈಂದೂರು ಭಾಗಗಳ ವಾಹನ ನೋಂದಣಿಯಿಂದ. 

ತುರ್ತಾಗಿ ಆಗಬೇಕಾಗಿರುವುದೇನು?
-  ಸ್ಥಳೀಯ ಸರಕಾರಿ ಬಸ್‌ಗಳು ನಿಲ್ಲಲು ಬಸ್‌ ನಿಲ್ದಾಣ ನಿರ್ಮಾಣವಾಗಬೇಕು.
-  ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯಬೇಕು.
-  ಕುಂದಾಪುರ ಪೇಟೆಯಿಂದ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಸುಮಾರು 5 ಕೀ.ಮೀ. ದೂರವಿದ್ದು, ಈಗ ಕೇವಲ ಒಂದು ಸರಕಾರಿ ಬಸ್‌ ಮಾತ್ರ ಸಂಚರಿಸುತ್ತಿದೆ. ಅಲ್ಲಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸಲು ಇನ್ನಷ್ಟು ಬಸ್‌ ಸೇವೆ ಬೇಕು.
-  ತಾಲೂಕು ಕೇಂದ್ರದಿಂದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಸರಕಾರಿ ಬಸ್‌ ಕಲ್ಪಿಸಿದರೆ ಜನರಿಗೆ ಅನುಕೂಲವಾಗಲಿದೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಗಂಗೊಳ್ಳಿ, ಆಲೂರು, ಉಳೂ¤ರು-74, ಪಡುಕೋಣೆ, ಶೇಡಿಮನೆ, ಹಳ್ಳಿಹೊಳೆ, ಅಮಾಸೆಬೈಲು, ನಾಡ-ಗುಡ್ಡೆಯಂಗಡಿಯಂಥ ಭಾಗಗಳಿಗೆ ಇನ್ನಷ್ಟು ಬಸ್‌ಗಳು ಬೇಕು.

ಪ್ರಗತಿಗೆ  ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ ಗತಿ ಗುರುತಿಸುತ್ತಿರುವ ಪ್ರಯತ್ನ. ಕುಂದಾಪುರ ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್‌ ನಂಬರ್‌ 91485 94259ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು ಹಾಗೂ ಭಾವಚಿತ್ರವಿರಲಿ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next