Advertisement
ಕಟ್ಟಡ ನಿರ್ಮಾಣ, ವ್ಯಾಪಾರ-ವಹಿವಾಟು ಸೇರಿ ವಿವಿಧ ಪರವಾನಗಿ, ಖಾತೆ ಬದಲಾವಣೆ, ಇ-ಸ್ವತ್ತು, ಇ-ಖಾತೆ, ವಿವಿಧ ನಿರಾಕ್ಷೇಪಣ ಪತ್ರ ಇನ್ನಿತರ ಕಾರ್ಯಗಳು ವಿಳಂಬವಾಗುತ್ತಿದ್ದು, “ಸಕಾಲ’ ಸೇವೆ ಸಕಾಲಕ್ಕಿಲ್ಲದಾಗಿದೆ. ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಸೇರಿ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲ ಯೋಜನೆ ಕಡೆಗಣಿಸಲಾಗಿದ್ದು ಸಕಾಲ ತಂತ್ರಾಂಶದಲ್ಲಿ ಅರ್ಜಿಗಳನ್ನೇ ಸ್ವೀಕರಿಸುತ್ತಿಲ್ಲ. ನೇರ ಅರ್ಜಿಗಳ ಕಾರುಬಾರು ಜೋರಾಗಿದೆ.
ಬಹುತೇಕ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿದಿನ ನೂರಾರು ಅರ್ಜಿಗಳು ಸ್ವೀಕೃತವಾಗುತ್ತವೆ. ಆದರೆ, ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿವೆ. ಲಂಚ ಕೊಡದೆ ಸೇವೆ ಪಡೆಯಲು ಮುಂದಾಗುವ ನಾಗರಿಕರಿಗೆ ಸೇವೆ ಬದಲಿಗೆ ಅಗತ್ಯ ದಾಖಲೆಗಳಿಲ್ಲ ಎಂಬ ಸಬೂಬಿನ ಕಿರುಕುಳ ಕಾಡುತ್ತಿದ್ದು, ಇದೇ ಕಾರಣಕ್ಕಾಗಿ ಬಹುತೇಕ ಅರ್ಜಿಗಳು ತಿರಸ್ಕೃತವಾಗುತ್ತಿರುವುದು ಸ್ಥಳೀಯಾಡಳಿತದ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರದ ಮುಖ್ಯ ಕಾರ್ಯದರ್ಶಿಗಳು ನಿಗದಿತ ಅವಧಿಯಲ್ಲಿ ಅರ್ಜಿ ವಿಲೇಗೊಳಿಸಲು ಕ್ರಮ ಕೈಗೊಳ್ಳದೆ ಬಾಕಿ ಉಳಿಸಿಕೊಂಡಿರುವ ಅಧಿಕಾರಿ, ನೌಕರರನ್ನು ಗುರುತಿಸಿ, ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಹಾಗೂ ಆಧಾರ ರಹಿತವಾಗಿ ಅರ್ಜಿ ತಿರಸ್ಕರಿಸುವ ಅಧಿಕಾರಿಗಳಿಂದ ವಿವರಣೆ ಪಡೆದು ಕ್ರಮ ಜರಗಿಸಬೇಕು ಎಂದು ನ. 7ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಆದರೆ, ಯಾವ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿ, ನೌಕರರು ತಮ್ಮ ವಿಳಂಬ ಹಾಗೂ ಅರ್ಜಿ ತಿರಸ್ಕಾರದ ಚಾಳಿ ಮುಂದುವರಿಸಿರುವುದು ವಿಪರ್ಯಾಸ.
Related Articles
ಸಕಾಲ ಯೋಜನೆಯಡಿ ನೀಡುವ ಸೇವೆಗಳು ಹಾಗೂ ನಿಗದಿಪಡಿಸಿರುವ ಅವಧಿಯ ವಿವರಗಳುಳ್ಳ ಫಲಕ ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಸೂಚನೆ ಇದ್ದರೂ ಬಹುತೇಕ ಸಂಸ್ಥೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುತ್ತಿಲ್ಲ.
Advertisement
ಸಕಾಲ ಅರ್ಜಿಯೇ ಕ್ಷೀಣರಾಜ್ಯದಲ್ಲಿ ಪಾಲಿಕೆ, ನಗರಸಭೆ, ಪುರಸಭೆ, ಪಪಂಗಳಲ್ಲಿ ವಿವಿಧ ಸೇವೆಗಳಿಗಾಗಿ ಪ್ರತಿದಿನ 30-40 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆದರೆ, ಸಕಾಲದಲ್ಲಿ ಸ್ವೀಕೃತಿಯಾಗುವ ಅರ್ಜಿಗಳ ಸಂಖ್ಯೆ ಮಾತ್ರ ತೀರಾ ಕಡಿಮೆ ಎಂಬುದು ಸಕಾಲ ತಂತ್ರಾಂಶದಲ್ಲಿ ದಾಖಲಾದ ಅಂಕಿ-ಅಂಶಗಳಿಂದಲೇ ಬಹಿರಂಗಗೊಳ್ಳುತ್ತದೆ.ರಾಜ್ಯದಲ್ಲಿ ಎಲ್ಲ ಇಲಾಖೆಗಳಿಗೆ ಸಂಬಂಧಿಸಿ ನ.13 ವರೆಗೆ 8,85,774 ಅರ್ಜಿಗಳು ಸಕಾಲದಲ್ಲಿ ಸಲ್ಲಿಕೆಯಾಗಿದ್ದು 8,84,124 ವಿಲೇವಾರಿಯಾಗಿವೆ. ವಿಲೇವಾರಿಯಾಗದ ಅವಧಿ ಮೀರಿದ 54,836 ಅರ್ಜಿಗಳು ಬಾಕಿ ಇವೆ. ಬಾಕಿ ಅರ್ಜಿ ಇಟ್ಟುಕೊಂಡಿರುವ ಇಲಾಖೆಗಳಲ್ಲಿ ನಗರಾಭಿವೃದ್ಧಿ ಇಲಾಖೆಯದ್ದೇ ಸಿಂಹಪಾಲಾಗಿದ್ದು, ಬರೋಬ್ಬರಿ 25,258 ಅರ್ಜಿಗಳು ಅವಧಿ ಮೀರಿದರೂ ವಿಲೇವಾರಿಯಾಗಿಲ್ಲ. ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿ ಪ್ರಸಕ್ತ ಮಾಸದಲ್ಲಿ ಈವರೆಗೆ 21,529 ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗಿದ್ದು, 811 ಅರ್ಜಿಗಳು ಅವಧಿ ಮೀರಿದರೂ ವಿಲೇವಾರಿ ಆಗದೆ ಬಾಕಿ ಇವೆ. ಎಚ್.ಕೆ. ನಟರಾಜ