Advertisement
‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕುಂದಾಪ್ರ ಕನ್ನಡ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಕುಂದಾಪುರದ ಜನರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಷ್ಟೇ ಗಂಭೀರವಾಗಿ ತೆಗೆದುಕೊಂಡರೂ, ಅದನ್ನು ಅಷ್ಟೇ ಆರಾಮವಾಗಿ ನೋಡುತ್ತಾರೆ. ಅಜ್ಜನಿಂದ, ತಂದೆಯವರೆಗೂ ಎಲ್ಲರನ್ನೂ ತಮಾಷೆ ಮಾಡುವ ಭಾಷೆ ಇದ್ದರೆ ಅದು ಕುಂದಾಪುರ ಕನ್ನಡ ಭಾಷೆ. ಇದು ಭಾಷೆಯ ಗರಿಮೆ. ಈ ಒಂದು ಕಾರಣದಿಂದ ನಾವೆಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತವಾಗುತ್ತದೆ. ಸಮಾನತೆ ಕುಂದಾಪುರ ಭಾಷೆಯಲ್ಲಿದೆ. ಬದುಕನ್ನು ಸುಂದರವಾಗಿ ಕಾಣುವ ದೃಷ್ಟಿಕೋನ ಕುಂದಾಪುರದ ಜನರಲ್ಲಿದೆ. ಹೀಗಾಗಿ ಜೀವನದಲ್ಲಿ ಎಷ್ಟೇ ದೊಡ್ಡ ಸೋಲಾದರೂ ಬೇಗನೆ ಪುಟಿದೇಳುತ್ತಾರೆ ಎಂದು ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಹೇಳಿದರು.
ಕುಂದಾಪುರದವರು ತಮ್ಮ ಭಾಷೆ ಉಳಿಸಿ ಬೆಳೆಸುತ್ತಿದ್ದಾರೆ. ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವುದು ತಪ್ಪಲ್ಲ. ನಮ್ಮತನ ಉಳಿಯಬೇಕೆಂದಾದರೆ ಮನೆಯಲ್ಲಿ ಮಕ್ಕಳೊಂದಿಗೆ ಆಡುಭಾಷೆಯಲ್ಲೇ ಮಾತನಾಡಿ. ಕುಂದಾಪುರ ಭಾಷೆಯಲ್ಲಿ ವಿಶಿಷ್ಟ ಶಕ್ತಿ ಇದೆ. ಭಾಷೆಯನ್ನು ಉಳಿಸಿಕೊಂಡರೆ ನಾವು ಉಳಿಯುತ್ತೇವೆ. ನಾವು ಉಳಿಯಬೇಕಾದರೆ ಭಾಷೆ ಉಳಿಯಬೇಕು ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
‘ಹುಟ್ಟೂರ ಗೌರವ’ ಸನ್ಮಾನದೇಶ ವಿದೇಶದಲ್ಲಿ ಎಷ್ಟೇ ಗೌರವ ಸನ್ಮಾನ ಬಂದಿದ್ದರೂ, ಹುಟ್ಟೂರ ಸನ್ಮಾನಕ್ಕೆ ಯಾವುದೂ ಸರಿಸಾಟಿ ಇಲ್ಲ. 14 ತಿಂಗಳ ಮಗುವಾಗಿದ್ದಾಗ ಪೋಲಿಯೂ ರೋಗಕ್ಕೆ ತುತ್ತಾದೆ. ಹೆತ್ತವರ ಪರಿಶ್ರಮ, ಆಶೀರ್ವಾದದ ಫಲವಾಗಿ ಸಾಧನೆ ಸಾಧ್ಯವಾಗಿದೆ. ನಾನಿಂದು ವ್ಹೀಲ್ಚಯರ್ನಲ್ಲಿ ಕೂತಿಲ್ಲ, ಇದು ನನ್ನ ರಥ, ಇದರಲ್ಲಿ ರಾಣಿಯಂತೆ ಕೂತಿದ್ದೇನೆ ಎಂದು ಭಾವಿಸುತ್ತೇನೆ. ಕನಸು ಕಾಣಬೇಕು. ಆ ಕನಸು ಒಂದಲ್ಲ ಒಂದು ದಿನ ನನಸಾಗುತ್ತದೆ. ಕೆಲವು ಬಾರಿ ಸ್ವಲ್ಪ ತಡವಾಗುತ್ತದೆ. ಇದಕ್ಕೆ ನಾನೇ ಉದಾಹರಣೆ. ದೇವರು ನನಗೆ ಸಣ್ಣ ನೋವು ಕೊಟ್ಟರೂ, ನೂರರಷ್ಟು ಗೌರವ ಕೊಟ್ಟಿದ್ದಾನೆ. ಅಂಗವೈಕಲ್ಯ ಇದೆ ಅಂತ ಅಂಜಬೇಕಿಲ್ಲ. ಮನಸ್ಸಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂದು ಪದ್ಮಶ್ರೀ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಮಾಲತಿ ಹೊಳ್ಳ ‘ಊರ ಗೌರವ’ ಸ್ವೀಕರಿಸಿ ಮಾತನಾಡಿದರು. ಹಿಂದೆ ಕುಂದಾಪುರ ಭಾಷೆ ಮಾತನಾಡಿದರೆ ‘ಸರಿಯಾಗಿ ಮಾತನಾಡು’ ಎನ್ನುತ್ತಿದ್ದರು. ಈ ಭಾಷೆ ಸರಿಯಾಗಿಲ್ಲ ಎಂದವರು ಯಾರು? ಇಂದಿಗೆ ಭಾಷೆಯ ಮೇಲಿನ ಕೀಳರಿಮೆ ಕಳೆದು ಹೋಗಿದೆ. ಬೆಂಗಳೂರಿನಲ್ಲಿರುವ ವಿವಿಧ ಜಿಲ್ಲೆಗಳ ಜನರು ಕುಂದಾಪುರ ಭಾಷೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಭಾವ ಬೀರಿದಂತೆ ಭಾಷೆ ಬೆಳೆಯುತ್ತ ಹೋಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಹಾಯ್ ಪದವನ್ನು ಹ್ವಾಯ್ ಮಾಡು! ”ಕುಂದಾಪುರ ನನ್ನಿಷ್ಟದ ಊರು. ಕೊಟ್ಟೆ ಕಡುಬು ನೆಚ್ಚಿನ ತಿನಿಸು. ಅತ್ತೆ-ಮಾವನ ಮೂಲಕ ಕನ್ನಡ ಕಲಿತುಕೊಂಡಿದ್ದೇನೆ. ಮದುವೆ ನಂತರ ಆನೆಗುಡ್ಡೆ ದೇವಸ್ಥಾನಕ್ಕೆ ಹೋಗಿದ್ದೆ. ‘ಕುಂದಾಪ್ರ ಕನ್ನಡ’ ಎಂದಾಗ ಮನೆಯಲ್ಲಿ ಮಾವ ‘ಹಾಯ್ ಪದವನ್ನು ಹ್ವಾಯ್ ಮಾಡು ಅಷ್ಟೇ..’ಎಂದಿದ್ದರು ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು. ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ,ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ, ಸೌತ್ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಉಪೇಂದ್ರ ಶೆಟ್ಟಿ, ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು.