ಕುಂದಾಪುರ: ಮಧ್ಯಪ್ರದೇಶದ ಮಾಂಡ್‌ಸರ್‌ನಲ್ಲಿ 7 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮಾಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬುಧವಾರ ಕುಂದಾಪುರದಲ್ಲಿ ಎಬಿವಿಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಕುಂದಾಪುರದ ಭಂಡಾರ್‌ಕಾರ್ ಕಾಲೇಜು ಹಾಗೂ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎಬಿವಿಪಿ ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹಿಸಿದರು.
ಭಂಡಾರ್‌ಕಾರ್ ಕಾಲೇಜಿನ ಜ್ಯೋತಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದಿನ ಕಳೆದಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚುತ್ತಿದ್ದು ಇದು ನಮ್ಮ ಆಡಳಿತ, ಪೊಲೀಸ್ ಇಲಾಖೆಯ ವೈಫಲ್ಯ ಎಂದವರು ಆರೋಪಿಸಿದರು. ಇನ್ನೂ ಪ್ರಪಂಚ ನೋಡದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಹೇಯ ಕೃತ್ಯ. ಮತ್ತೆಂದೂ ನಮ್ಮ ದೇಶದಲ್ಲಿ ಇಂತಹ ಘಟನೆ ಮರುಕಳುಹಿಸದಂತೆ ಆಳುವ ವರ್ಗ, ನ್ಯಾಯಾಂಗ ವ್ಯವಸ್ಥೆ ಎಚ್ಚರವಹಿಸಬೇಕಾಗಿದೆ ಎಂದು ಬಿ.ಬಿ. ಹೆಗ್ಡೆ ಕಾಲೇಜಿನ ಪುಷ್ಪರಾಣಿ ಹೇಳಿದರು.
ಎಬಿವಿಪಿ ಪ್ರಮುಖರಾದ ಭಂಡಾರ್‌ಕಾರ್ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕೇಶ್ ಪೂಜಾರಿ, ಗುರುರಾಜ್, ರೋಶನ್, ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಪವನ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಎರಡೂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪುರದ ವೃತ್ತ ನಿರೀಕ್ಷಕ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ಕುಂದಾಪುರ ಎಸ್‌ಐ ಹರೀಶ್ ಆರ್., ಪೊಲೀಸ್ ಸಿಬಂದಿ ಭದ್ರತಾ ಉಸ್ತುವಾರಿ ನೋಡಿಕೊಂಡರು.
ಕಾಲ್ನಡಿಗೆ ಜಾಥಾ
ಭಂಡಾರ್‌ಕಾರ್ ಹಾಗೂ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಕುಂದಾಪುರ ಶಾಸಿŒ ಸರ್ಕಲ್ ಬಳಿಯಿಂದ ಕಾಲ್ನಡಿಗೆ ಜಾಥಾದ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಅಲ್ಲಿ ಸಭೆ ಸೇರಿದರು. ಬಳಿಕ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಕುಂದಾಪುರದ ಪ್ರಭಾರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಅವರಿಗೆ ಹಸ್ತಾಂತರಿಸಿದರು.