ಕುಂದಾಪುರ: ಕೋವಿಡ್ 19 ಸಂದರ್ಭ ಕಾರ್ಯನಿರ್ವಹಿಸುತ್ತಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ಕಾರ್ಯಪಡೆಯ ನರ್ಸ್‌ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಆ್ಯಂಬುಲೆನ್ಸ್ ಚಾಲಕರಿಗೆ ಮತ್ತು ಸೇವಾ ಕಾರ್ಯಕರ್ತರಿಗೆ ಆಸ್ಪತ್ರೆ ಸಭಾ ಭವನದಲ್ಲಿ ಕೆಥೊಲಿಕ್ ಸಭೆ ಕುಂದಾಪುರ ಘಟಕ ವತಿಯಿಂದ ಸಮ್ಮಾನ ನಡೆಯಿತು.
ಸಿಸ್ಟರ್‌ಗಳಾದ ಅರುಣಾ ಕುಮಾರಿ, ದಿವ್ಯಾ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀ ಅನಿತಾ, ಸುನಿತಾ, ಗಾಯತ್ರಿ, ಆಶಾ, ಶಶಿಕಲಾ, ಮಾಲತಿ, ಶಿಲ್ಪಾ, ಸಹಯಕ ಸೇವಾಕರ್ತರಾದ ಲೀಲಾ, ಸಂತೋಷ್, ಆ್ಯಂಬುಲೆನ್ಸ್ ಚಾಲಕರಾದ ನಾಗರಾಜ, ಮಣಿಕಂಠ, ವಿಷ್ಣು ಮತ್ತು ರಾಘವೇಂದ್ರ ಹೀಗೆ ಕೊರೊನಾ ಪಡೆ¿å 16 ಸೈನಿಕರನ್ನು ಸೇವೆ ಮತ್ತು ಕರ್ತವ್ಯ ಪಾಲನೆಗೆ ಗೌರವ ಕೊಡುವ ಉದ್ದೇಶದಿಂದ ಅವರನ್ನು ಫಲ ಪುಷ್ಪ ಶಾಲು ನೀಡುವ ಬದಲು, ಸಾನಿಟರಿ ಲಿಕ್ವಿಡ್, ಟವೆಲ್, ಕರ್ಚಿಫ್, ಹ್ಯಾಂಡ್ ವಾಷ್, ಸಾಬೂನು, ಸೋಪ್ ಪೌಡರ್, ಮಾಸ್ಕ್, ಕೈಗವಸು ಇನ್ನಿತರ ವಸ್ತುಗಳನ್ನು ಹರಿವಾಣದಲ್ಲಿ ನೀಡಿ ಸಮ್ಮಾನಿಸಲಾಯಿತು.
ಕುಂದಾಪುರ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾಣ ರಾಬರ್ಟ್ ರೆಬೆಲ್ಲೊ, ನರ್ಸ್, ಆಶಾ ಕಾರ್ಯಕರ್ತೆಯರ, ಆ್ಯಂಬುಲೆನ್ಸ್ ಚಾಲಕರ ಮತ್ತು ಸೇವಾ ಕಾರ್ಯಕರ್ತರ ಸೇವೆ ಬಹಳ ಅಮೂಲ್ಯವಾದುದು. ಅವರು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿದ್ದಾರೆ. ಯಾವ ಗಳಿಗೆಯಲ್ಲೂ ಅವರು ತಮ್ಮ ಸೇವೆ ನೀಡಲು ಸಿದ್ಧರಿದ್ದಾರೆ. ಈಗ ಕೆಲವರು ಕೊರೊನಾ ಪಾಸಿಟಿವ್ ಎಂದು ಗುರುತಿಸಲ್ಪಡುತ್ತಿರುವ ಕಾರಣ ಕೋವಿಡ್ 19 ವಿರುದ್ಧ ಹೋರಾಡುವ ಕಾರ್ಯ ಪಡೆ ಇನ್ನೂ ಹೆಚ್ಚು ಜಾಗೃತರಾಗಿ ಕರ್ತವ್ಯ ಪಾಲಿಸಬೇಕು ಎಂದರು.
ಕೆಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷೆ ಮೇಬಲ್ ಡಿ’ಸೋಜಾ, ಕೆಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ಕಾರ್ಯಕ್ರಮದ ಸಂಯೋಜಕ ಬರ್ನಾಡ್ ಜೆ. ಡಿ’ಕೋಸ್ತಾ, ಕುಂದಾಪುರ ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸುಪರಿಂಡೆಂಟ್ ಗೀತಾ, ರೋಜರಿ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲೊ, ಕೆಥೊಲಿಕ್ ಸಭಾದ ಪದಾಧಿಕಾರಿಗಳಾದ ಶೈಲಾ ಡಿ’ಆಲ್ಮೇಡಾ, ವಿಲ್ಸನ್ ಡಿ’ಆಲ್ಮೇಡಾ, ವಿನಯಾ ಡಿ’ಕೋಸ್ತಾ, ಶಾಲೆಟ್ ರೆಬೆಲ್ಲೊ ಹಾಜರಿದ್ದರು. ಕಾರ್ಯದರ್ಶಿ ಪ್ರೇಮಾ ಡಿ’ಕುನ್ಹಾ ವಂದಿಸಿದರು, ವಿನೋದ್ ಕ್ರಾಸ್ಟೊ ನಿರೂಪಿಸಿದರು.