Advertisement

ಅವಸಾನದ ಅಂಚಿನತ್ತ ಖಾದಿ ಉದ್ಯಮ

11:04 AM Jan 17, 2019 | |

ಕುಮಟಾ: ಬಟ್ಟೆಯ ವಿಷಯದಲ್ಲಿಯೂ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಗಾಂಧೀಜಿ ಕನಸನ್ನು ಸಾಕಾರಗೊಳಿಸಲು 1959ರಲ್ಲಿ ಕುಮಟಾ ತಾಲೂಕಿನ ಬಾಡದಲ್ಲಿ ಖಾದಿ ನೂಲು ಉತ್ಪಾದನಾ ಕೇಂದ್ರ ಸ್ಥಾಪನೆಯಾಯಿತು. ಅಂದು ಸ್ಥಾಪಿಸಿದ ಘಟಕ ಇಂದು ಸರಕಾರದ ಸರಿಯಾದ ಪ್ರೋತ್ಸಾಹವಿಲ್ಲದೆ ಅವಸಾನದ ಅಂಚಿನತ್ತ ಸಾಗಿದೆ.

Advertisement

ನರಸಿಂಹ ನಾಯಕ, ಸೀತಾರಾಮ ನಾಯಕ ಮತ್ತು ಇನ್ನೂ ಅನೇಕ ಸ್ಥಳೀಯರ ಸಹಕಾರದಲ್ಲಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಸೇವಾ ಸಮಿತಿ ವತಿಯಿಂದ ಖಾದಿ ನೂಲು ಉತ್ಪಾದನಾ ಕೇಂದ್ರ ಬಾಡಾದಲ್ಲಿ ಸ್ಥಾಪನೆಯಾಯಿತು. ಅಂಕೋಲಾದಲ್ಲಿ ಪ್ರಧಾನ ನೂಲಿನ ಘಟಕವಿದ್ದು, ಬಾಡ ಘಟಕವು ಅದರ ಶಾಖೆಯಾಗಿ ಕಾರ್ಯ ನಿರ್ವಹಿಸತೊಡಗಿತು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಹರಿ ಅನಂತ ಪೈ ಈ ಘಟಕವನ್ನು ಉದ್ಘಾಟಿಸಿದ್ದರು. ಈ ಘಟಕಕ್ಕೀಗ ಬರೋಬ್ಬರಿ 70 ವರ್ಷ. ಉದ್ಯೋಗವಿಲ್ಲದೆ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ಸುತ್ತಲಿನ ಜನತೆ ಆಗ ಉದ್ಯೋಗ ಸಿಕ್ಕ ಕಾರಣಕ್ಕೆ ಸಂಭ್ರಮಾಚರಣೆ ಮಾಡಿದ್ದರು. ಜೀವನೋಪಾಯಕ್ಕಾಗಿ ಸುತ್ತಲಿನ ದುಡಿಯುವ ಕೈಗಳು ಈ ಖಾದಿ ಮತ್ತು ನೂಲು ಉತ್ಪಾದನಾ ಘಟಕಕ್ಕೆ ಲಗ್ಗೆ ಹಾಕಿದ್ದವು.

1980ರ ನಂತರ ಫ್ಯಾಶನ್‌ ಯುಗ ಪ್ರಾರಂಭವಾಯಿತು. ಮಾರುಕಟ್ಟೆಯಲ್ಲಿ ತರಹವಾರಿ ಬಟ್ಟೆಗಳು ಲಗ್ಗೆಯಿಟ್ಟವು. ಪಾಶ್ಚಾತ್ಯ ಧಿರಿಸುಗಳತ್ತ ಯುವ ಜನತೆ ಆಕರ್ಷಣೆ ಹೊಂದಿತು. ಕಾಲಕ್ರಮೇಣ ಖಾದಿ ತನ್ನ ಮಾರುಕಟ್ಟೆ ಕಳೆದುಕೊಳ್ಳತೊಡಗಿತು. ಈಗ ಖಾದಿ ನೇಕಾರರು ನಂಬಿದ ಉದ್ಯೋಗವನ್ನೇ ಕಳೆದುಕೊಳ್ಳುವ ಭಯದಲ್ಲಿ ಕಂಗಾಲಾಗಿದ್ದಾರೆ.

ಬಟ್ಟೆ ನೇಯುವುದು ದೈಹಿಕ ಶ್ರಮದ ಕೆಲಸ. ಬೇರೆ ಉದ್ಯೋಗಕ್ಕೆ ಹೋದರೆ ಕನಿಷ್ಠವೆಂದರೂ 300 ರೂ. ಸಂಪಾದಿಸಬಹುದು. ಆದರೆ ಇದರಲ್ಲೇ ಜೀವ ತೇದವರು ಈಗ ಬೇರೆ ಕೆಲಸಕ್ಕೆ ಹೋಗಲಾರದ ಸ್ಥಿತಿಯಲ್ಲಿದ್ದಾರೆ. ಸರಕಾರ 1 ಮೀಟರ್‌ ಬಟ್ಟೆ ನೇಯ್ದಿದ್ದಕ್ಕೆ 7 ರೂ. ಅನುದಾನ ನೀಡುತ್ತದೆ. ಆದರೆ 2014ರಿಂದ ಸರಿಯಾಗಿ ಈ ಅನುದಾನವನ್ನೇ ನೀಡಿಲ್ಲ. ಅಲ್ಲದೆ ದುಡಿದು ತಿನ್ನುವ ಕೈಗಳು ಅನುದಾನ ಪಡೆಯಲೂ ಜಿಲ್ಲಾಮಟ್ಟದ ಅಧಿಕಾರಿಗೆ ಲಂಚ ಕೊಡಬೇಕಾದ ಪರಿಸ್ಥಿತಿಯಿದೆ ಎನ್ನುವುದು ಇಲ್ಲಿಯ ನೇಕಾರರ ಆರೋಪ.

ಮಗ್ಗಗಳ ಸಂಖ್ಯೆ 10ಕ್ಕೆ ಇಳಿಕೆ
ಪ್ರಾರಂಭದಲ್ಲಿ ಬಾಡ ಘಟಕದಲ್ಲಿ 200 ಮಗ್ಗಗಳಿದ್ದವು. ಸುಮಾರು 250 ಜನ ನೇಕಾರರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದಾಗಿ ಸುಮಾರು 200ರಷ್ಟು ನೂಲುಗಾರರು ಉದ್ಯೋಗ ಕಂಡುಕೊಂಡಿದ್ದರು. ಮಹಿಳೆಯರಿಗಾಗಿ ನೂಲು ಉತ್ಪಾದನಾ ತರಬೇತಿ ಶಿಬಿರವೂ ನಡೆಯುತ್ತಿತ್ತು. 40 ಚರಕಗಳಿದ್ದವು. ಆದರೆ ಈಗ ಒಂದೇ ಒಂದು ಚರಕವೂ ಇಲ್ಲಿ ಕಾಣಸಿಗದು. ಮಗ್ಗಗಳ ಸಂಖ್ಯೆ 10ಕ್ಕೆ ಇಳಿದಿದೆ. 60ರಿಂದ 80ರ ವಯಸ್ಸಿನ ಒಟ್ಟೂ 11 ಜನ ಈಗ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದ ಮಾಡಿಕೊಂಡು ಬಂದ ಉದ್ಯೋಗವನ್ನು ಬಿಡಲಾರದೆ ಮಗ್ಗದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಕಡಿದುಕೊಳ್ಳಲಾರದೆ ದಿನವೊಂದಕ್ಕೆ 60ರಿಂದ 70 ರೂ. ಗಳಿಸಿದರೂ ಈ ಉದ್ಯೋಗದ ಮೇಲಿನ ಪ್ರೀತಿಯಿಂದಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಖಾದಿ ನೂಲಿನ ಕಚ್ಚಾ ವಸ್ತುವನ್ನು ಲಡಿ ಎನ್ನುತ್ತಾರೆ. ಈ ಲಡಿ ಚರಕದಿಂದ ತೆಗೆದ ಹತ್ತಿಯ ದಪ್ಪಗಿನ ಹಗ್ಗದಂತಿರುತ್ತದೆ. ಅದನ್ನು 3 ದಿನ ನೀರಿನಲ್ಲಿ ಕೊಳೆಯುವ ಹಾಗೆ ನೆನೆಸಿಡುತ್ತಾರೆ. ನಾಲ್ಕನೇ ದಿನ ಮೈದಾ ಹಿಟ್ಟಿನ ಗಂಜಿಯಲ್ಲಿ ಹಾಕಿ ಕುದಿಸುತ್ತಾರೆ. ಮರುದಿನ ತೆಗೆದು ದಾರ ತಯಾರಿಸುತ್ತಾರೆ. ಈ ಲಡಿಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಸಂಸ್ಥೆ ಒದಗಿಸುತ್ತದೆ. ಪ್ರತೀ ಲಡಿಗೆ 70ಪೈಸೆ ಹಣವನ್ನು ನೂಲುವವನೇ ಕೊಟ್ಟು ಖರೀದಿಸಬೇಕು. 1 ಮೀಟರ್‌ ಬಟ್ಟೆ ನೇಯ್ದರೆ ಕಾರ್ಮಿಕರಿಗೆ 11 ರೂ. ಕೊಡುತ್ತಾರೆ. ದಿನವಿಡೀ ದುಡಿದರೂ ಒಬ್ಬ ಮನುಷ್ಯ 5 ರಿಂದ 6 ಮೀಟರ್‌ ನೂಲಬಹುದು. ಹಿಂದೆ ಸೀರೆ, ಪಂಜಿ, ಅಂಗಿ ಬಟ್ಟೆಗಳನ್ನು ತಯಾರಿಸುತ್ತಿದ್ದರು. ಆದರೆ ಬೇಡಿಕೆಯ ಕುಸಿತದಿಂದಾಗಿ ಈಗ ಬರೇ ಟವೆಲ್‌ಗ‌ಳನ್ನು ಮಾತ್ರ ತಯಾರಿಸುತ್ತಿದ್ದಾರೆ.

Advertisement

ನನಗೀಗ 89 ವರ್ಷ. 63 ವರ್ಷಗಳಿಂದ ಈ ಉದ್ಯೋಗ ಮಾಡಿಕೊಂಡು ಬರುತ್ತಿದ್ದೇನೆ. ಆದರೆ ಇತ್ತೀಚೆಗೆ ಸರಕಾರದಿಂದಾಗಲೀ ಖಾಸಗಿಯವರಿಂದಾಗಲೀ ಈ ಕಸುಬಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ಇದರಿಂದಾಗಿ ಯುವಪೀಳಿಗೆ ಇತ್ತ ಮುಖಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇದು ಮುಚ್ಚಿ ಹೋಗಬಹುದೇ ಎನ್ನುವ ಅಭದ್ರತೆ ಕಾಡುತ್ತಿದೆ. ಸರಕಾರ ಮಗ್ಗದ ನೇಕಾರರ ಬದುಕಿಗೆ ಏನಾದರೂ ಭದ್ರತೆ ಕಲ್ಪಿಸಿಕೊಡಬೇಕು.
 ಬೀರಪ್ಪ ವೆಂಕಪ್ಪ ನಾಯ್ಕ,
 ಕಾರ್ಮಿಕ

ವರ್ಷಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಎರಡು ವರ್ಷದ ಮೊದಲು ಕಮಿಷನರ್‌ ಪ್ರೋತ್ಸಾಹ ಧನ ಬಿಡುಗಡೆ ಮಾಡುತ್ತಿದ್ದರು. ಈಗ ಆ ಪದ್ಧತಿ ಬದಲಾಗಿದೆ. ಬಟ್ಟೆಗೆ, ಮಿಟರ್‌ಗೆ ತಕ್ಕಂತೆ ಹಣವನ್ನು ನಿಗದಿ ಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕಾಗದ ಪತ್ರ ನೀಡಿದರೆ ಸರಕಾರದ ಪ್ರೋತ್ಸಾಧನ ಸರಿಯಾಗಿ ನೀಡಲಾಗುತ್ತಿದೆ.
ಮಲ್ಲಿಕಾರ್ಜುನ
ಖಾದಿ ಬೋರ್ಡ್‌ ಜಿಲ್ಲಾ ಅಧಿಕಾರಿ

ದಿನೇಶ ಗಾಂವ್ಕರ

Advertisement

Udayavani is now on Telegram. Click here to join our channel and stay updated with the latest news.

Next