ಕುಂಬಳೆ: ಕುಂಬಳೆ ಸೀಮೆಯ ಪ್ರಧಾನ ದೇವಾಲಯ ದಲ್ಲೊಂದಾದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಗುರುವಾರ ಮುಂಜಾನೆ ಕಳ್ಳತನಕ್ಕೆ ಯತ್ನ ನಡೆದಿದೆ.
ಮೇ 18ರಂದು ಮುಂಜಾನೆ 3.30ಕ್ಕೆ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಆಡಿಗ ಅವರು ದೇವಾಲಯಕ್ಕೆ ಪೂಜೆಗೆ ಆಗಮಿಸಿದಾಗ ಗರ್ಭಗುಡಿಯ ಕೆಳಭಾಗದ ಎರಡು ಮೆಟ್ಟಿಲಿನ ತಗಡು ಮಾಯವಾಗಿತ್ತು. ಕ್ಷೇತ್ರದ ಮುಂದಿನ ದ್ವಾರಪಾಲಕ ಜಯ ವಿಜಯರ ಮೂರ್ತಿಯಲ್ಲಿ ಒಂದು ಕೆಳಗೆ ಬಿದ್ದಿತ್ತು. ಕ್ಷೇತ್ರದ ಗೋಪುರ ಮಾಡಿನಿಂದ ಬಡಬಡ ಶಬ್ದ ಕೇಳಿಸುತ್ತಿತ್ತು. ತತ್‌ಕ್ಷಣ ಕಾವಲು ಗಾರ ಆಡೂರು ಲಕ್ಷ್ಮಣರೊಂದಿಗೆ ಹೊರ ತೆರಳಿ ನೋಡಿದಾಗ ಕ್ಷೇತ್ರದ ಸುತ್ತು ಗೋಪುರದ ತಾಮ್ರದ ತಗಡಿನ ಮಾಡಿನಲ್ಲಿ ಓರ್ವ ಅವಿತಿದ್ದನು. ಟಾರ್ಚ್ ಬೆಳಕು ಹಾಯಿಸಿದಾಗ ಈತ ಮಾಡಿನ ಮೇಲೆ ಮಲಗಿದನು. ಬಳಿಕ ಪೊಲೀ ಸರಿಗೆ ಮಾಹಿತಿ ನೀಡಿ ಪೋಲಿಸರು ಆಗಮಿಸು ವಷ್ಟರಲ್ಲಿ ಮಾಡಿನ ಮೇಲೆ ಇರಿಸಿದ್ದ ಸೊತ್ತುಗಳನ್ನು ತುಂಬಿದ ಗೋಣಿ ಚೀಲ ಕಟ್ಟವನ್ನು ಅಲ್ಲೇ ಬಿಟ್ಟು ಕ್ಷೇತ್ರದ ಹಿಂಭಾಗದ ಮೂಲಕ ಹೆದ್ದಾರಿಯಲ್ಲಿ ಪರಾರಿಯಾದನು.
ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದ ಕೂಗಳತೆಯ ದೂರದಲ್ಲಿದ್ದ ಠಾಣೆಗೆ ಕ್ಷೇತ್ರದ ಕಾವಲುಗಾರ ಲಕ್ಷ್ಮಣ ಅವರು ದೂರವಾಣಿ ಮೂಲಕ ತತ್‌ಕ್ಷಣ ಮೊಬೈಲ್ ಮೂಲಕ ಮಾಹಿತಿ ನೀಡಿದರೂ ಠಾಣೆಯಲ್ಲಿ ಪೊಲೀಸ ರಿಲ್ಲದ ಕಾರಣ ದೂರದ ಬಂಗ್ರ ಮಂಜೇಶ್ವರದಿಂದ ಗಸ್ತು ಪೊಲೀಸ ರನ್ನು ಕರೆಸುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು.
ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ಮಾರ್ಗದರ್ಶನದಂತೆ ಶ್ರೀ ದೇವರಿಗೆ ಪಂಚಗವ್ಯ ಪುಣ್ಯಾಹ ಶುದ್ಧಿ ಕಲಶ ನಡೆಸಿದ ಬಳಿಕ ನಿತ್ಯಪೂಜೆ ಜರಗಿಸಲಾಯಿತು. ಕ್ಷೇತ್ರದ ಆನುವಂಶಿಕ ಮೊಕ್ತೇಸರ, ಮಾಯಿಪ್ಪಾಡಿ ನ್ಯಾಯವಾದಿ ರಾಜೇಂದ್ರ ರಾವ್ ಮತ್ತು ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಎಂ.ಟಿ. ರಾಮನಾಥ ಶೆಟ್ಟಿಯವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸು ತ್ತಿದ್ದಾರೆ. ಕಾಸರಗೋಡಿನಿಂದ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಕ್ಷೇತ್ರಕ್ಕೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕ್ಷೇತ್ರದೊಳಗೆ ಓರ್ವ ಕಳ್ಳನೇ ಇದ್ದರೂ ಇದು ತಂಡದ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ. ಕ್ಷೇತ್ರದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸದ ಕಾರಣ ಕಳ್ಳರನ್ನು ಪತ್ತೆಹಚ್ಚಲಾಗಲಿಲ್ಲ.
ಕಳ್ಳರು ಕ್ಷೇತ್ರದ ಪ್ರಧಾನ ಗರ್ಭಗುಡಿಯ ಸೋಪಾನದ ಮೆಟ್ಟಿಲಿನ ತಾಮ್ರದ ಮತ್ತು ಬೆಳ್ಳಿಯ ತಗಡಿನ ಮೊಳೆ ಕಿತ್ತು ತಗಡನ್ನು ತೆಗೆದಿದ್ದಾರೆ. ಗರ್ಭಗುಡಿಯ ಮುಂಭಾಗದಲ್ಲಿದ್ದ ಜಯ ವಿಜಯರ ಮೂರ್ತಿಗಳ ಬೆಳ್ಳಿ ಕವಚಗಳನ್ನು ಕಳಚಿದ್ದು ಗರ್ಭಗುಡಿಯ ಮತ್ತು ಮುಂಭಾಗದ ಕಾಣಿಕೆ ಭಂಡಾರದ ಬೀಗ ಒಡೆದಿದ್ದಾರೆ. ದೇವಸ್ಥಾನದ ಹೊರಭಾಗದ ಅರ್ಚಕರ ಸ್ನಾನ ಗೃಹದ ಗೋಡೆಹಾರಿ ಸುತ್ತುಪೌಳಿಯ ಛಾವಣಿಯ ಮೇಲೆ ಏರಿ ಬಂದ ಕಳ್ಳರು ಕ್ಷೇತ್ರದೊಳಗೆ ನುಗ್ಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ಷೇತ್ರದ ಪ್ರಧಾನ ಅರ್ಚಕರ ಮತ್ತು ಕಾವಲುಗಾರರ ಪ್ರಸಂಗಾವಧಾನದಿಂದ ಕಳ್ಳರು ಗೋಣಿಚೀಲದಲ್ಲಿ ತುಂಬಿಸಿದ್ದ ಬೆಳ್ಳಿಯ ಬೆಲೆ ಬಾಳುವ ಒಡವೆಗಳನ್ನು ಒಯ್ಯುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಕ್ಷೇತ್ರದ ಗರ್ಭಗುಡಿಯ ಮತ್ತು ಕಾಣಿಕೆ ಹುಂಡಿಯ ಬೀಗ ಒಡೆದಿದ್ದರೂ ದೇವರ ಚಿನ್ನಾಭರಣಗಳನ್ನು ಮತ್ತು ಹುಂಡಿಯ ಹಣವನ್ನು ಕಳ್ಳತನ ಮಾಡುವ ಸಂಚು ವಿಫಲಗೊಂಡಿದೆ.