ಬೀಳಗಿ (ಬಾಗಲಕೋಟೆ): ಸಮ್ಮಿಶ್ರ ಸರ್ಕಾರದಲ್ಲಿನ ಕಾಂಗ್ರೆಸ್-ಜೆಡಿಎಸ್ ಶಾಸಕರ ಅಸಮಾಧಾನ ಬಗೆಹರಿಸಲಾಗದ ಸಿಎಂ ಕುಮಾರಸ್ವಾಮಿ, ಅಸಹಾಯಕತೆಯಿಂದ ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಮೊದಲೇ ನುರಿತ ಚಿತ್ರ ನಿರ್ಮಾಪಕರು. ಹೀಗಾಗಿ ಆ ಕಲೆ ಅವರಿಗೆ ಕರಗತ. ತಾವೇ ಇಂಥ ಟೇಪ್ ಸೃಷ್ಟಿಸೋದು ಹಾಗೂ ತಾವೇ ಇಂತಹ ಸುದ್ದಿಯನ್ನು ಜನರಿಗೆ ತಲುಪಿಸುವ ನಾಟಕ ಕಂಪನಿ ಹುಟ್ಟು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಆಯ್ಕೆಯಾದ ಶೇ.70ರಷ್ಟು ಹಿರಿಯ ಶಾಸಕರು ಮಂತ್ರಿ, ಮುಖ್ಯಮಂತ್ರಿಯಾಗುವ ಕನಸು ಕಟ್ಟಿಕೊಂಡಿದ್ದಾರೆ. ಸಚಿವ ಸ್ಥಾನ, ಅಭಿವೃದ್ಧಿಗೆ ಹಣ ಸಿಗದ ಅಸಮಾಧಾನ ಅವರಲ್ಲಿದೆ. ಆ ಕಾರಣಕ್ಕಾಗಿ ಸರ್ಕಾರದ ಖುರ್ಚಿ ಅಲ್ಲಾಡುತ್ತಿದೆ. ಇದನ್ನೆಲ್ಲ ಮರೆ ಮಾಚಲು ಕುಮಾರಸ್ವಾಮಿಯವರು, ಆಪರೇಷನ್ ಕಮಲ ಮಾಡುತ್ತಿದ್ದಾರೆಂದು ಬಿಜೆಪಿ ಹೆಸರು ಮುಂದೆ ತರುವ ಕೆಲಸ ಮಾಡುತ್ತಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ ಸೂಕ್ತ ಕಾಲದಲ್ಲಿ ಇದೆಲ್ಲವನ್ನು ಬಹಿರಂಗ ಮಾಡುವುದಾಗಿ ಹೇಳುತ್ತಾರೆ. ತಮ್ಮ ಕೈಯಲ್ಲಿ ಸರ್ಕಾರ, ಕಾನೂನು ಇರುವುದು ಸೂಕ್ತ ಕಾಲವಲ್ಲವೆ? ತಾಕತ್ತಿದ್ದರೆ ಈಗಲೇ ಬಹಿರಂಗಪಡಿಸಿ. ಅದು ಬಿಟ್ಟು ಬ್ಲಾಕ್‌ವೆುàಲ್ ತಂತ್ರ ಸಲ್ಲದು ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿಕೊಳ್ಳಬಹುದು ಎನ್ನುವ ಭಯ ಮುಖ್ಯಮಂತ್ರಿಗೆ ಕಾಡುತ್ತಿದೆ. ಸಂಪುಟ ವಿಸ್ತರಣೆಯಾದರೂ ಅಥವಾ ಆಗದಿದ್ದರೂ ಕೂಡ ಸಮ್ಮಿಶ್ರ ಸರ್ಕಾರ ಬೀಳುವುದು ಗ್ಯಾರಂಟಿ. ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನ ಹರಿಸುವ ಕೆಲಸಕ್ಕೆ ಸಿಎಂ ಮುಂದಾಗಬೇಕು. ಸುಳ್ಳಿನ ಮೇಲೆ ಸರ್ಕಾರ ನಡೆಸುವುದನ್ನು ಬಿಟ್ಟು ಗೌರವಯುತವಾಗಿ ಸ್ಥಾನ ತ್ಯಜಿಸಬೇಕು ಎಂದರು.