Advertisement

ಕುಳ್ಳಾಜೆಯಲ್ಲಿ ಕುಡಿಯುವ ನೀರಿಗೆ ತತ್ವಾರ 

12:48 PM Feb 23, 2018 | Team Udayavani |

ಸುಳ್ಯ : ಬೇಸಗೆಯ ಆರಂಭದಲ್ಲೇ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ನೀರಿನ ತತ್ವಾರ ಆರಂಭಗೊಂಡಿದ್ದು, ಅಮರ ಮುಟ್ನೂರು ಗ್ರಾ.ಪಂ.ವ್ಯಾಪ್ತಿಯ ಅಮರ ಪಟ್ನೂರು ಕುಳ್ಳಾಜೆಯಲ್ಲಿ ಕುಡಿಯುವ ನೀರಿನ ಕೊರತೆಯಿಂದ ಪಿಕಪ್‌ ಬಳಸಿ ನೀರು ತಂದು ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ಒಂದು ತಿಂಗಳಿನಿಂದ ನೀರಿನ ಸಮಸ್ಯೆ ಉದ್ಭವಿಸಿದ್ದು, ಎತ್ತರ ಪ್ರದೇಶದಲ್ಲಿರುವ ಕುಳ್ಳಾಜೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯದ 30 ಮನೆಗಳಿಗೆ ನೀರಿನ ಅಭಾವ ಕಾಡಿದೆ. 1ಕಿ.ಮೀ ದೂರದ ಶೇಣಿಯಲ್ಲಿ ಟ್ಯಾಂಕ್‌ ನಿರ್ಮಿಸಿ, ಇಲ್ಲಿಗೆ ನಳ್ಳಿ ಸಂಪರ್ಕ ಕಲ್ಪಿಸಿದ್ದರೂ ಸರಿಯಾಗಿ ನೀರು ಬಾರದಿರುವ ಕಾರಣದಿಂದ ಜನರಿಗೆ ದಿನ ಬಳಕೆಯ ನೀರಿಗೆ ಸಮಸ್ಯೆ ಉಂಟಾಗಿದೆ.

ಪಿಕಪ್‌ನಲ್ಲಿ ನೀರು ಸಾಗಾಟ
ಕುಳ್ಳಾಜೆಯ ಐದಾರು ಮನೆ ಮಂದಿ ಮೂರು ದಿನಕ್ಕೊಮ್ಮೆ, ಕೆಲವು ಸಲ ವಾರಕ್ಕೊಮ್ಮೆ ಪಿಕಪ್‌ಗೆ ಬಾಡಿಗೆ ಕೊಟ್ಟು, ಶೇಣಿಯಿಂದ ಡ್ರಮ್‌ ಮುಂತಾದ ಪರಿಕರ ಬಳಸಿ ನೀರು ತರುತ್ತಿದ್ದಾರೆ. ಉಳಿದ ಮನೆಯವರು ಅಕ್ಕಪಕ್ಕದ ಕಡೆಯಿಂದ ನೀರನ್ನು ಸಂಗ್ರಹಿಸುವ ಸ್ಥಿತಿ ಇಲ್ಲಿನದು. ಕೆಲವೊಮ್ಮೆ ನಳ್ಳಿ ಸಂಪರ್ಕದಲ್ಲಿ ನೀರು ಬಂದರೂ ಹಲವು ದಿನ ಬಾರದಿರುವುದೇ ಅಧಿಕ ಅನ್ನುವುದು ಸ್ಥಳೀಯರ ಆರೋಪ.

ಕೊಳವೆಬಾವಿಗೆ ಬೇಡಿಕೆ
ಎತ್ತರ ಪ್ರದೇಶದಲ್ಲಿ ಮನೆಗಳು ಇರುವ ಕಾರಣ, ಕೆಳಭಾಗದ ಟ್ಯಾಂಕಿಯಿಂದ ಇಲ್ಲಿಗೆ ನೀರು ಹರಿಸುವುದು ಸಮರ್ಪಕ ಕ್ರಮ
ಅಲ್ಲ. ಹಾಗಾಗಿ 30 ಮನೆಗಳ ಆಸುಪಾಸಿನಲ್ಲಿ ಕೊಳವೆಬಾವಿ ತೋಡಿ, ಟ್ಯಾಂಕ್‌ ನಿರ್ಮಿಸಿ ನೀರು ಪೂರೈಸಬೇಕು ಎಂಬ ಬೇಡಿಕೆ ಇಲ್ಲಿನವರದ್ದು. ಈ ಹಿಂದೆ ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಸೂಕ್ತ ಸ್ಥಳ ಗುರುತಿಸದೇ ಕೊಳವೆಬಾವಿ ತೋಡಿರುವುದು ಇದಕ್ಕೆ ಕಾರಣ ಎಂದು ಕೆಲವರು ದೂರುತ್ತಾರೆ.

ಸ್ಪಂದನೆಗೆ ಪ್ರಯತ್ನ
ಈ ಹಿಂದೆ ಎರಡು ಕೊಳವೆಬಾವಿ ತೋಡಿದ್ದರೂ ನೀರು ಸಿಕ್ಕಿಲ್ಲ. ಶೇಣಿಯಿಂದ ದಿನ ಬಿಟ್ಟು ದಿನ ನೀರು ಪೂರೈಕೆ  ಮಾಡಲಾಗುತ್ತಿದ್ದು, ಈಗ ವಿದ್ಯುತ್‌ ವ್ಯತಯದಿಂದ ತೊಂದರೆ ಉಂಟಾಗಿದೆ. ಅಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು, ಸೂಕ್ತ ಜಾಗ ಗುರುತಿಸಿ ಕೊಳವೆಬಾವಿ ಕೊರೆಸಲು ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿದ್ದೇನೆ.
– ರತಿನ್‌, ಚೂಂತಾರು, ವಾರ್ಡ್‌ ಸದಸ್ಯರು

Advertisement

ಸಮಸ್ಯೆಯಿದೆ
ಒಂದು ತಿಂಗಳಿನಿಂದ ನಮಗೆ ಕುಡಿಯಲು ನೀರಿಲ್ಲ. ದಿನ ಬಳಕೆಗೆಗಾಗಿ ಪಿಕಪ್‌ಗೆ ಬಾಡಿಗೆ ಕೊಟ್ಟು, ನೀರು ತರುತ್ತಿದ್ದೇವೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗದಿರುವುದರಿಂದ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ. 
– ನಿತಿನ್‌ ಕುಳ್ಳಾಜೆ, ಸ್ಥಳೀಯ ನಿವಾಸಿ

ಕೊಳವೆಬಾವಿ ಬೇಕು
30 ಮನೆಗಳು ಎತ್ತರದ ಪ್ರದೇಶದಲ್ಲಿ ಇವೆ. ಸೂಕ್ತ ಸ್ಥಳದಲ್ಲಿ ಕೊಳವೆಬಾವಿ ತೋಡಬೇಕು ಎಂಬ ನಮ್ಮ ಬೇಡಿಕೆಗೆ ಸ್ಪಂದಿಸಬೇಕು.
– ದಿನೇಶ್‌, ಕುಳ್ಳಾಜೆ

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next