ಸುಬ್ರಹ್ಮಣ್ಯ: ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಾಣಗೊಂಡ 200 ಕೊಠಡಿಗಳ ಪೀಠೊಪಕರಣದ ಕೆಲಸಕ್ಕೆ ಅನುಮೋದನೆ, 14 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಸುತ್ತುಪೌಳಿ, ಪ್ರಾಥಮಿಕ ಶಾಲೆ ಕಟ್ಟಡ, ನೌಕರರ ವಸತಿಗೃಹ, ಮಿತವ್ಯಯದ ಕಲ್ಯಾಣ ಮಂಟಪ ಇತ್ಯಾದಿ ಕಾಮಗಾರಿ ಹಾಗೂ ಕ್ಷೇತ್ರ ವ್ಯಾಪ್ತಿಯ ಸಂಪರ್ಕ ರಸ್ತೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಸರಕಾರದ ಅನುಮೋದನೆ ಬಳಿಕ ಶೀಘ್ರದಲ್ಲಿ ಆರಂಭಗೊಳಿಸಲಾಗುವುದೆಂದು ಧಾರ್ಮಿಕ ದತ್ತಿ ಆಯುಕ್ತೆ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಕಾಮಗಾರಿಗಳ ಮೇಲ್ವಿಚಾರಣ ಸಮಿತಿಯ 26ನೇ ಸಭೆಯಲ್ಲಿ ಮಾತನಾಡಿದ ಅವರು, ಅನಂತ, ಅಭಯ, ವರದಾ-ವಸುಧಾ ವಸತಿಗೃಹ, ಇಒ ವಸತಿಗೃಹ, ಸರ್ಪಸಂಸ್ಕಾರ ಯಾಗಶಾಲೆ ಹಾಗೂ ಭೋಜನ ಶಾಲೆ, ವಿ.ಐ.ಪಿ. ಅತಿಥಿಗೃಹ ಕಾಮಗಾರಿಗಳು ಪೂರ್ಣಗೊಂಡಿದ್ದು, ಗಾತ್ರ ಮತ್ತು ಗುಣಮಟ್ಟದ ಬಗ್ಗೆ ಮೂರನೇ ಹಂತದಲ್ಲಿ ಪರಿಶೀಲನೆ ನಡೆದು ಅನುಮೋದನೆ ದೊರೆತಿದೆ ಎಂದು ತಿಳಿಸಿದರು.
ದೇವಸ್ಥಾನದ ಸುತ್ತ ಖಾಲಿ ಜಾಗ ಹಾಗೂ ನೂತನ ಭೋಜನ ಶಾಲೆಗೆ ನಿವೇಶನವನ್ನೂ ಗಮನದಲ್ಲಿಟ್ಟುಕೊಂಡಿದ್ದು ಒತ್ತುವರಿ ಸ್ಥಳವನ್ನು ಮಾತುಕತೆ ಮೂಲಕ ತೆರವುಗೊಳಿಸಲಾಗುವುದು. ದೇವಸ್ಥಾನದ ವತಿಯಿಂದ ಕೈಗೊಂಡ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳು ಶೇ. 80ರಷ್ಟು ಪೂರ್ಣಗೊಂಡಿದ್ದು 2ನೇ ಹಂತದ ರಸ್ತೆ ಕಾಮಗಾರಿಯ ಯೋಜನೆ ವರದಿ ಮಂಜೂರಾತಿಗಾಗಿ ಸರಕಾರದ ಹಂತದಲ್ಲಿದೆ.
ರಸ್ತೆ ವಿಸ್ತರಣೆ ಕಾಮಗಾರಿ ಗಾಗಿ ರಸ್ತೆಯ ಬದಿಯ ವಿದ್ಯುತ್ ಕಂಬ ಹಾಗೂ ಲೈನ್ ಗಳನ್ನು ಸ್ಥಳಾಂತರಿಸಲು ಮೆಸ್ಕಾಂಗೆ ದೇಗುಲದಿಂದ ಶುಲ್ಕ ಪಾವತಿಸಲಾಗಿದೆ ಎಂದರು. ಧಾರ್ಮಿಕ ದತ್ತಿ ಆಯುಕ್ತೆ ಎಂ.ಕೆ. ಪ್ರಮೀಳಾ, ವ್ಯವಸ್ಥಾಪನ ಸಮಿತಿಯ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರಾದ ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ರಾಜೀವಿ ರೈ, ಮಾಸ್ಟರ್ ಸಮಿತಿಯ ಸದಸ್ಯರಾದ ಶಿವರಾಮ ರೈ, ಸುಧೀರ್ ಕುಮಾರ್ ಶೆಟ್ಟಿ, ಕೆ.ಪಿ. ಗಿರಿಧರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಹನುಮಂತರಾಯ, ಪದ್ಮನಾಭ ಕೋಟ್ಯಾನ್, ಜಗನ್ನಿವಾಸ್ ರಾವ್ ಸಭೆಯಲ್ಲಿ ಉಪಸ್ಥಿತರಿದ್ದರು.