Advertisement
ಕಳೆದ ವಾರದ ಇದೇ ಅಂಕಣದಲ್ಲಿ ತೀರ್ಥಹಳ್ಳಿ ತಾಲೂಕಿನ ಬಸವಾನಿಯ ಅಂಡೆಕುಳಿ ಮಂಜಯ್ಯನವರು ತಮ್ಮ ಸರ್ವಸ್ವವನ್ನು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ, ದಲಿತರ ಅಭಿವೃದ್ಧಿಗೋಸ್ಕರ ತ್ಯಾಗ ಮಾಡಿದ್ದನ್ನು ಉಲ್ಲೇಖೀಸಲಾಗಿತ್ತು. ಕಾಕತಾಳೀಯವೋ ಎಂಬಂತೆ ಅದೇ ದಿನ ಅದೇ ಊರಿನ ಇನ್ನೊಂದು ಕುಟುಂಬದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ರೂಪುಗೊಂಡ ರಚನಾತ್ಮಕ ಚಟುವಟಿಕೆಗೆ ರಾಜ್ಯ ಸರಕಾರ ಪ್ರಶಸ್ತಿ ನೀಡಿ ಪುರಸ್ಕರಿಸಿತು. ರಾಮಶರ್ಮರ ಪತ್ನಿ ಸಾವಿತ್ರಮ್ಮ ಕಸ್ತೂರ್ಬಾ ಗಾಂಧಿಯವರ ಪ್ರೇರಣೆಯಿಂದ ಆರಂಭಿಸಿದ ಸಾಮಾಜಿಕ ಸೇವಾ ಚಟುವಟಿಕೆಗಳು ಈಗಲೂ ಮುನ್ನಡೆಯುತ್ತಿರುವುದು ವಿಶೇಷ.
Related Articles
Advertisement
ತಮ್ಮೂರಿನಲ್ಲಿ ಬಡ ಹೆಣ್ಣು ಮಕ್ಕಳಿಗೆ ಹೆರಿಗೆ ಸಮಯದಲ್ಲಿ ಮನೆಯಿಂದಲೇ ದವಸಧಾನ್ಯಗಳನ್ನು ಕೊಟ್ಟು ಸಲಹುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುತ್ತಿದ್ದರು. ಬಸವಾನಿಯ ಒಂದೂವರೆ ಕಿ.ಮೀ. ದೂರದ ಹೊಳೆಕೊಪ್ಪದಲ್ಲಿ (ತುಂಗಾ ನದಿ ತೀರ) ಹೆರಿಗೆ ಕೇಂದ್ರವನ್ನು ತೆರೆದರು. ಇದಕ್ಕೆ ಕಸ್ತೂರ್ಬಾ ಮಾತೃಮಂದಿರ ಎಂದು ಹೆಸರು ಇಟ್ಟರು. ಆಗ ಇಂತಹ ಕೇಂದ್ರಗಳನ್ನು ಶಿಬಿರ ಎಂದು ಕರೆಯುತ್ತಿದ್ದರು. 1958ರಿಂದೀಚೆ ಸಂಸ್ಥೆಗೆ ಭೇಟಿ ನೀಡಿದ ಸಂದರ್ಶಕರ ದಾಖಲೆ ದೊರಕುತ್ತಿದೆ. ವಿವಿಧೆಡೆ ಆಸ್ಪತ್ರೆಗಳು ಆರಂಭವಾದ ಬಳಿಕ ನರ್ಸಿಂಗ್, ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ನೀಡಿ ಅವರು ವಿವಿಧೆಡೆಗಳಲ್ಲಿ ನೆಮ್ಮದಿ ಜೀವನ ಕಂಡುಕೊಳ್ಳಲು ಕಾರಣರಾದರು. 1984ರಲ್ಲಿ, 2000, 2004-05ರಲ್ಲಿ ಕಟ್ಟಡ ವಿಸ್ತರಣೆಯಾಯಿತು.
ಸಾವಿತ್ರಮ್ಮನವರಿಗೆ ವಯಸ್ಸಾದ ಕಾರಣ 1995ರಲ್ಲಿ ಕಸ್ತೂರ್ಬಾ ಆಶ್ರಮ ಟ್ರಸ್ಟ್ ನೋಂದಣಿ ಮಾಡಿದರು. ಸಾವಿತ್ರಮ್ಮನವರ ನಿಧನಾನಂತರ 2007ರಲ್ಲಿ ಸಾವಿತ್ರಮ್ಮ ರಾಮ ಶರ್ಮ ಸೇವಾ ಟ್ರಸ್ಟ್ ಎಂದು ನೋಂದಣಿ ಮಾಡಿಸಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸಾಮಾಜಿಕ ಅಗತ್ಯಗಳು ಬದಲಾದಂತೆ ಸೇವಾ ಚಟುವಟಿಕೆಗಳನ್ನೂ ಬದಲಾಯಿಸಿಕೊಳ್ಳಲಾಯಿತು. ಈಗ ವೃದ್ಧಾಶ್ರಮವನ್ನು ನಡೆಸಲಾಗುತ್ತಿದೆ. ಶಿವಮೊಗ್ಗದ ಮಾನಸ ಆಸ್ಪತ್ರೆಯ ಡಾ|ಅಶೋಕ್ ಪೈಯವರು, ಆಸ್ಪತ್ರೆಯಲ್ಲಿ ಚಿಕಿತ್ಸಾ ಅನಂತರದಲ್ಲಿ ಬದಲಾವಣೆಗಾಗಿ ರೋಗಿಗಳನ್ನು ಈ ಆಶ್ರಮದಲ್ಲಿ ಕೆಲವು ದಿನ ಇರಿಸಿದ್ದು ಇದೆ. ಸಾಂಸಾರಿಕವಾಗಿ ನೊಂದು ಬಂದ ಮಹಿಳೆಯರು ಇಲ್ಲಿ ಕೆಲವು ದಿನವಿದ್ದು ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಮನೆಗೆ ಹಿಂದಿರುಗುವುದೂ ಇದೆ. ಸಾವಿತ್ರಮ್ಮನವರು ಇರುವವರೆಗೆ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಅವರಿಗೆ ಆರಂಭದಿಂದಲೂ ಕಾರ್ಯದರ್ಶಿಯಾಗಿ, ಈಗ ಟ್ರಸ್ಟಿಯಾಗಿ ಬೆನ್ನೆಲುಬಾಗಿ ನಿಂತವರು ಅಂಡೆಕುಳಿ ಮಂಜಯ್ಯನವರ ಮೊಮ್ಮಗ ಹರಿಪ್ರಸಾದರ ಪತ್ನಿ ಶಿವಮೊಗ್ಗದಲ್ಲಿರುವ ತಾರಾಪ್ರಸಾದ್. ಪ್ರಸ್ತುತ ಟ್ರಸ್ಟ್ ಅಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಕಾರ್ಯನಿರ್ವಹಿಸುತ್ತಿದ್ದಾರೆ.
“ಸಾವಿತ್ರಮ್ಮನವರು ಕಸ್ತೂರ್ಬಾ ಗಾಂಧಿಯವರಿಂದ ಪ್ರೇರಿತರಾಗಿ ಅವರ ಹೆಸರಿನಲ್ಲಿ ಟ್ರಸ್ಟ್ ನಡೆಸಿದ್ದರೆ, ನಾವು ಕಸ್ತೂರ್ಬಾ ಗಾಂಧಿಯವರನ್ನು ನೋಡಿಲ್ಲ. ನಮಗೆ ಪ್ರೇರಣೆ ಸಾವಿತ್ರಮ್ಮನವರಾದ ಕಾರಣ ಸಾವಿತ್ರಮ್ಮನವರ ಹೆಸರಿನಲ್ಲಿ ಟ್ರಸ್ಟ್ ಹೆಸರನ್ನು ಬದಲಾಯಿಸಿದೆವು. ಸಾವಿತ್ರಮ್ಮನವರು ಇರುವವರೆಗೆ ಅವರೇ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಾವು ಮಹಿಳೆಯರ ವೃದ್ಧಾಶ್ರಮವನ್ನು ನಡೆಸುತ್ತಿದ್ದೇವೆ. ಸಂಸ್ಥೆಯನ್ನು ಸರಕಾರದ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಪುರುಷರಿಗೂ ವೃದ್ಧಾಶ್ರಮದ ಸೌಲಭ್ಯ ಕೊಡಬೇಕೆಂಬ ಹಂಬಲವಿದೆ’ ಎನ್ನುತ್ತಾರೆ ಕಾರ್ಯದರ್ಶಿಯಾಗಿರುವ ರಾಘವೇಂದ್ರ ಬಸವಾನಿ.
-ಮಟಪಾಡಿ ಕುಮಾರಸ್ವಾಮಿ