ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ- 75ರಲ್ಲಿ ಬರುವ ಕಲ್ಲಡ್ಕವನ್ನು ಕೆಲವರು ಗಲಭೆಯಿಂದಷ್ಟೇ ಗುರುತಿಸುತ್ತಾರೆ. ಆದರೆ, ಬಹುತೇಕ ಮಂದಿ ಗುರುತಿಸೋದು ಇಲ್ಲಿ ಸಿಗುವ ವಿಶೇಷ ಟೀ, ಕಾಫಿಯಿಂದ. ಪಶ್ಚಿಮ ಘಟ್ಟ ಇಳಿದು ಮಂಗಳೂರಿಗೆ ಹೋಗುವಾಗ ಇನ್ನೂ 30 ಕಿ.ಮೀ. ದೂರದಲ್ಲೇ ಕಲ್ಲಡ್ಕ ಸಿಗುತ್ತದೆ. ಇಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಒಂದು ಹೋಟೆಲ್ ಇದೆ. ಅದೇ ಲಕ್ಷ್ಮೀನಿವಾಸ ಹೋಟೆಲ್, ಅಂದ್ರೆ ಕೆ.ಟೀ.(ಕಲ್ಲಡ್ಕ ಟೀ) ಹೋಟೆಲ್. ಇಲ್ಲಿ ಸಿಗುವ ಟೀ ಮತ್ತು ಕಾಫೀ ಇತರೆ ಹೋಟೆಲ್ ಹಾಗೂ ಮನೆಯಲ್ಲಿ ಮಾಡುವ ಚಹಾಗಿಂತ ವಿಭಿನ್ನ. ಇದು ಕಲ್ಲಡ್ಕದಲ್ಲಿ ಮಾತ್ರ ಸಿಗುವುದರಿಂದ ಅದಕ್ಕೆ ಕೆ.ಟಿ. ಹೋಟೆಲ್, ಕಲ್ಕಡ ಹೋಟೆಲ್ ಎಂದು ಕರೆಯುತ್ತಾರೆ.
1952ರಲ್ಲಿ ಲಕ್ಷ್ಮೀ ನಾರಾಯಣ ಹೊಳ್ಳ ಅವರು ಈ ಹೋಟೆಲ್ ಪ್ರಾರಂಭಿಸಿದರು. ಕೆ.ಟಿ. ಚಹಾವನ್ನು ಮೊದಲಿಗೆ ಪ್ರಾರಂಭಿಸಿದ್ದೂ ಅವರೇ. ಇವರ ಮಗ ನರಸಿಂಹ ಹೊಳ್ಳ ಕೂಡ ಹೋಟೆಲ್ ಪ್ರಾರಂಭಿಸುವುದಕ್ಕೆ ಸಹಕಾರ ನೀಡಿದ್ದರು. ಇದೀಗ ಶಿವರಾಂ ಎನ್. ಹೊಳ್ಳ ಅವರು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ. ಹೋಟೆಲ್ ಪ್ರಾರಂಭವಾಗಿ 68 ವರ್ಷ ಕಳೆದಿದೆ. ಆದರೂ ರುಚಿಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಮೊದಲು ವಿಶ್ವನಾಥ್ ಎಂಬವರು 17 ವರ್ಷಗಳ ಕಾಲ ಈ ವಿಶೇಷ ಟೀ ಮಾಡುತ್ತಿದ್ದರು. ಈಗ ವಿಠಲ್ ಎನ್ನುವವರು, ಬಿಸಿಬಿಸಿ ಟೀಯನ್ನು ತಯಾರಿಸುತ್ತಿದ್ದಾರೆ.
Advertisement
ಕೆ.ಟೀ. ವಿಶೇಷ
ಬಿಸಿ ಹಾಲನ್ನು ಒಂದು ಗಾಜಿನ ಲೋಟಕ್ಕೆ ಮೊದಲು ಹಾಕುತ್ತಾರೆ. ನಂತರ ಮೊದಲೇ ಸಿದ್ಧ ಮಾಡಿದ ಟೀ ಅಥವಾ ಕಾಫಿಯನ್ನು ಹಾಕುತ್ತಾರೆ. ಇಲ್ಲಿನ ವಿಶೇಷ ಏನೆಂದರೆ, ಟೀ ಪುಡಿ ಹಾಕಿದ ತಕ್ಷಣ ಹಾಲಿನಲ್ಲಿ ಬೆರೆಯುವುದಿಲ್ಲ. 24 ಗಂಟೆ ಇಟ್ಟರೂ ಟೀ ಅಥವಾ ಕಾಫಿ ಹಾಲಿನ ಜೊತೆ ಬೆರೆಯದೇ, ಪ್ರತ್ಯೇಕವಾಗಿಯೇ ಇರುತ್ತದೆ. ಅಂದರೆ ಲೋಟದ ಅರ್ಧ ಭಾಗ ಹಾಲಿನಂತೆ, ಇನ್ನರ್ಧ ಭಾಗ ಟೀಯಂತೆ ಕಾಣಿಸುತ್ತದೆ. ಕುಡಿದರೆ ಮಾತ್ರ ಸ್ಟ್ರಾಂಗ್ ಟೀ ಕುಡಿದ ಅನುಭವವಾಗುತ್ತದೆ. ಇದು ಕೆ.ಟಿ.ಯ ವಿಶೇಷ. ಆದರೆ, ಶುಗರ್ ಲೆಸ್ ಆದ್ರೆ, ಕೆಲವೊಮ್ಮೆ ಬೆರೆಯುತ್ತದೆ ಎನ್ನುತ್ತಾರೆ ಹೋಟೆಲ್ ಮಾಲಿಕರು. ರುಚಿಯೂ ಅಷ್ಟೇ ಇತರೆ ಹೋಟೆಲ್‌ಗಿಂತಲೂ ಭಿನ್ನ. ಮೊದಲು ನಿಮಗೆ ಟೀ ಅಥವಾ ಕಾಫೀಯ ಸ್ವಾದ ಸಿಕ್ಕರೆ, ನಂತರ ಹಾಲಿನ ರುಚಿ ಸಿಗುತ್ತದೆ. ಇದರ ಬೆಲೆ ಕೇವಲ 15 ರೂ. ಮಾತ್ರ.
ಇಲ್ಲಿ ವಿಶೇಷವಾದ ಟೀ, ಕಾಫಿ ಜೊತೆಗೆ ತುಪ್ಪ ದೋಸೆ, ಟೊಮೇಟೊ ಆಮ್ಲೆಟ್, ಬನ್ಸ್, ಮಸಾಲೆ ದೋಸೆ. ಅದರಲ್ಲೂ ಕೊಂಕಣಿ ಶೈಲಿಯ ಉಪಾಹಾರಗಳು, ಬಿಸ್ಕೆಟ್ ರೊಟ್ಟಿ, ಜ್ಯೂಸ್ ಇಲ್ಲಿನ ಹೈಲೈಟ್. ಪ್ರತಿ ತಿಂಡಿಯ ದರವೂ 25 ರೂ. ಆಸುಪಾಸಿನಲ್ಲಿದೆ. ತಾರೆಗಳಿಗೆ ಇಷ್ಟದ ಟೀ.
ವಾರವಿಡೀ ಗ್ರಾಹಕರಿಂದ ತುಂಬಿರುವ ಈ ಹೋಟೆಲ್‌ನಲ್ಲಿ ಶನಿವಾರ ಮತ್ತು ಭಾನುವಾರ ರಶ್Ï ಇರುತ್ತದೆ. ಕೆ.ಟಿ. ಸವಿಯಲು ಸುತ್ತಮುತ್ತಲಿನ ಊರಿನಿಂದಲೂ ಬರುತ್ತಾರೆ. ಈ ಹೋಟೆಲ್‌ಗೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಕೂಡ ಬಂದಿದ್ದರಂತೆ. ಕರಾವಳಿ ಶಾಸಕರು, ಸಚಿವರು, ಸಂಸದರು, ಸಿನಿ ತಾರೆಯರಾದ ಅಂಬರೀಶ್, ಜೂಹಿ ಚಾವ್ಲಾ, ತೆಲುಗು ನಟ ಸುಮನ್, ರಾಧಿಕಾ ಕುಮಾರಸ್ವಾಮಿ ಮುಂತಾದವರು ಈ ಹೋಟೆಲ್‌ನ ಟೀ, ಕಾಫಿಯ ರುಚಿ ಸವಿದಿದ್ದಾರೆ.
Related Articles
ಬೆಳಗ್ಗೆ 5.45ಕ್ಕೆ ಆರಂಭವಾದ್ರೆ ರಾತ್ರಿ 8 ಗಂಟೆವರೆಗೂ ತೆರೆದಿರುತ್ತದೆ. ಪ್ರತಿ ಬುಧವಾರ ರಜೆ.
Advertisement
ಹೋಟೆಲ್ ವಿಳಾಸ: ಲಕ್ಷ್ಮೀ ನಿವಾಸ ಕೆ.ಟಿ. ಹೋಟೆಲ್, ಮುಖ್ಯರಸ್ತೆ, ಕಲ್ಲಡ್ಕ ಭೋಗೇಶ್ ಎಂ.ಆರ್.