Advertisement

Bantwal: ಕಲ್ಲಡ್ಕದಲ್ಲಿ ಸರ್ವೀಸ್‌ ರಸ್ತೆಗೆ ಡಾಮರು

12:36 PM Nov 12, 2024 | Team Udayavani |

ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಹಲವು ರೀತಿಯ ಟ್ರೋಲ್‌ ಜತೆಗೆ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್‌ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ. ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

Advertisement

ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಚರಂಡಿಗಳನ್ನು ಅಗೆದು ಮಣ್ಣು ತುಂಬಿರುವುದರಿಂದ ಮಳೆ ನೀರು ಬಂದರೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಹೀಗೆ ಎಲ್ಲ ರೀತಿಯಿಂದಲೂ ಬರೀ ಸಮಸ್ಯೆಗಳೇ ತುಂಬಿದ್ದವು.

ಪ್ರಸ್ತುತ ಸರ್ವೀಸ್‌ ರಸ್ತೆಗೆ ಡಾಮರು ಕಾಮಗಾರಿ ಆರಂಭಗೊಂಡಿರುವುದರಿಂದ ಕಲ್ಲಡ್ಕದ ನಾಗರಿಕರ ಜತೆಗೆ ಹೆದ್ದಾರಿ ಪ್ರಯಾಣಿಕರು ಕೊಂಚ ನೆಮ್ಮದಿ ಆಗಿದ್ದು, ಪೇಟೆಯಲ್ಲಿ ಸಾಗಿರುವ ಎರಡೂ ಬದಿಯ ಪೂರ್ತಿ ಸರ್ವೀಸ್‌ ರಸ್ತೆಗೆ ಡಾಮರು ಹಾಕುತ್ತಾರೋ ಅಥವಾ ಹಿಂದೆ ಮಾಡಿದ ರೀತಿ ಅರ್ಧಂಬರ್ಧ ಕಾಮಗಾರಿ ಮಾಡಿ ಮುಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಹಿಂದೆ ಸರ್ವೀಸ್‌ ರಸ್ತೆಗೆ ಹಾಕಿದ್ದ ಡಾಮರು ಸ್ವಲ್ಪ ಸಮಯದಲ್ಲೇ ಕಿತ್ತು, ಮತ್ತೆ ಹೊಂಡಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಈ ಬಾರಿಯೂ ಅದೇ ಸ್ಥಿತಿ ಇರುತ್ತದೆಯೇ ಎಂಬ ಆತಂಕವೂ ಜನತೆಯಲ್ಲಿದೆ. ಒಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ನೋಡುವಾಗ ಉತ್ತಮ ರೀತಿಯಲ್ಲಿ ಕಾಣುತ್ತಿದ್ದು, ಅವುಗಳ ಗುಣಮಟ್ಟ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳುವಂತಿಲ್ಲ. ಒಟ್ಟಿನಲ್ಲಿ ಗುತ್ತಿಗೆ ಸಂಸ್ಥೆಯಾದ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ ಮಳೆ ದೂರವಾದ ತತ್‌ಕ್ಷಣ ಡಾಮರು ಹಾಕುವುದಾಗಿ ನೀಡಿದ ಭರವಸೆಯಂತೆ ಕಾಮಗಾರಿ ಆರಂಭಿಸಿರುವುದು ಸಮಾಧಾನದ ವಿಚಾರವಾಗಿದೆ.

ಉದಯವಾಣಿ ಅಭಿಯಾನ ನಡೆಸಿತ್ತು
ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ಜನತೆಗೆ ಆಗಿರುವ ತೊಂದರೆಗಳ ಕುರಿತು ಉದಯವಾಣಿ ಸುದಿನದಲ್ಲಿ ಅ. 19ರಿಂದ 30ರ ವರೆಗೆ ರಾ.ಹೆದ್ದಾರಿ ಕಾಮಗಾರಿ; ಯಾವಾಗ ಮುಗಿಸ್ತೀರಿ ಅಭಿಯಾನವನ್ನು ನಡೆಸಿ ಸಮಸ್ಯೆಗಳ ಇಂಚಿಂಚು ಬೆಳಕು ಚೆಲ್ಲಲಾಗಿತ್ತು. ಜತೆಗೆ ದ.ಕ.ಸಂಸದರು, ಬಂಟ್ವಾಳ, ಪುತ್ತೂರು, ಸುಳ್ಯ ಶಾಸಕರ ಜತೆಗೆ ಮಾತನಾಡಿ ಕಾಮಗಾರಿಗೆ ವೇಗ ನೀಡುವ ಕುರಿತು ಅಭಿಪ್ರಾಯ ಪಡೆಯಲಾಗಿತ್ತು. ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ನವರು ಸ್ವತಃ ಉದಯವಾಣಿಯನ್ನು ಸಂಪರ್ಕಿಸಿ ಕಾಮಗಾರಿ ಪೂರ್ಣಗೊಳ್ಳುವ ಹಂತ ಹಂತದ ಮಾಹಿತಿ ನೀಡಿದ್ದರು. ಸರಣಿಯ ಕುರಿತು ಸಾರ್ವಜನಿಕರು, ಓದುಗರು ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದರು. ಇದೀಗ ಸರಣಿ ವರದಿಗಳಿಗೆ ಸ್ಪಂದನೆ ಎಂಬಂತೆ ಕಲ್ಲಡ್ಕದ ಸರ್ವೀಸ್‌ ರಸ್ತೆಗಳಿಗೆ ಡಾಮರು ಹಾಕಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next