Advertisement

ಅಪಘಾತ ಸಂಖ್ಯೆ ಗಣನೀಯ ಇಳಿಕೆ KSRTC ಸುರಕ್ಷಿತ ಪ್ರಯಾಣಕ್ಕೆ ಸಾಕ್ಷಿ

08:35 AM Apr 07, 2018 | Karthik A |

ಮಂಗಳೂರು: ದೇಶದಲ್ಲೇ ನಂಬರ್‌ ಒನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (KSRTC) ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪ್ರಯಾಣಕ್ಕೆ KSRTC ಹೆಚ್ಚು ಸುರಕ್ಷಿತ ಎನಿಸಿಕೊಳ್ಳುತ್ತಿದೆ. ಕಳೆದ ನಾಲ್ಕು ವರ್ಷಗಳಿಂದೀಚೆಗೆ KSRTCಯಲ್ಲಿ ದಾಖಲಾಗಿರುವ ಅಪಘಾತಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ. ಸರಕಾರಿ ಸಂಸ್ಥೆಯಾಗಿ ಗುಣಮಟ್ಟದ ಹಾಗೂ ಅತ್ಯಾಧುನಿಕ ಸೇವೆ ಒದಗಿಸುವಲ್ಲಿ ರಾಜ್ಯ ಸಾರಿಗೆ ಸಂಸ್ಥೆಯು ದೇಶದಲ್ಲೇ ಬೇರೆಲ್ಲ ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಿಗಿಂತ ಮುಂದಿದೆ. ಆದರೆ ಜನರ ದೃಷ್ಟಿಯಲ್ಲಿ ಈಗಲೂ ನಿಗಮದ ಬಸ್‌ಗಳೆಂದರೆ ಅಪಘಾತ, ನಿಧಾನಗತಿ; ಸರಕಾರಿ ಬಸ್‌ ಚಾಲಕರು ನಿರ್ಲಕ್ಷ್ಯದಿಂದ ಚಲಾಯಿಸುತ್ತಾರೆ ಇತ್ಯಾದಿ ಅಭಿಪ್ರಾಯಗಳಿವೆ.

Advertisement

ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ KSRTC ಬಸ್‌ ಅಪಘಾತಗಳನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತಿದೆ. ಅಜಾಗರೂಕತೆಯಿಂದ ಅಥವಾ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವ ಚಾಲಕ – ನಿರ್ವಾಹಕರ ಮೇಲೆ ಹದ್ದಿನ ಕಣ್ಣಿರಿಸಲಾಗುತ್ತಿದೆ. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಅಪಘಾತಕ್ಕೀಡಾಗುವುದು ಕಡಿಮೆಯಾಗಿ, ಪ್ರಯಾಣಿಕರ ಪಾಲಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯಾಗಿ ಬದಲಾಗುತ್ತಿದೆ. ಚಾಲಕರಲ್ಲಿ ಸಮಯ ಪ್ರಜ್ಞೆ, ಮುಂಜಾಗರೂಕತೆಗಳ ಜತೆಗೆ ಸಂಸ್ಥೆ ಕಡೆಯಿಂದ ಕಾಲಕಾಲಕ್ಕೆ ನೀಡಲಾಗುತ್ತಿರುವ ತರಬೇತಿ ಹಾಗೂ ಕಟ್ಟು ನಿಟ್ಟಿನ ನಿಯಮಾವಳಿಗಳು ಪೂರಕವಾಗಿವೆ.


ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿರುವ KSRTC ಬಸ್‌ ಅಪಘಾತಗಳಿಗೆ ಸಂಬಂಧಿಸಿದ ಅಂಕಿಅಂಶವು ‘ಉದಯವಾಣಿ’ಗೆ ಲಭ್ಯವಾಗಿದೆ. 2013-14ನೇ ಸಾಲಿನಲ್ಲಿ 1,266 ಅಪಘಾತಗಳಾಗಿದ್ದರೆ, 2017-18ರಲ್ಲಿ 1,043ಕ್ಕೆಇಳಿಕೆಯಾಗಿದೆ. ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ 223ರಷ್ಟು ಕಡಿಮೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ (2017- 18)ಗೆ ಒಟ್ಟಾರೆ ಅಪಘಾತಗಳ ಸರಾಸರಿ ಪ್ರಮಾಣ ಶೇ.0.1ರಷ್ಟು ಕಡಿಮೆಯಾಗಿದೆ. ಇದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೂ ಸಮಾಧಾನ ಮೂಡಿಸಿದ್ದು, ಅಪಘಾತಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆಗೊಳಿಸುವುದಕ್ಕೆ, ಹೊಸ ಮಾದರಿಯ ಅಪಘಾತ ತಡೆ ಮಾರ್ಗೋಪಾಯ ಕಂಡುಕೊಳ್ಳುವುದಕ್ಕೆ ಪ್ರೇರಣೆ ನೀಡುತ್ತಿದೆ.

ಚಾಲಕರಿಗೆ ಸಿಮ್ಯುಲೇಟರ್‌ ತರಬೇತಿ
ಚಾಲಕರ ಅಪಘಾತ ರಹಿತ ಬಸ್‌ ಚಾಲನೆಗಾಗಿ ನಿಗಮದ ಚಾಲಕರಿಗೆ ಮೂರು ಆಯಾಮಗಳಲ್ಲಿ ಸಿಮ್ಯುಲೇಟರ್‌ ತರಬೇತಿಯನ್ನು ಕಳೆದ ಕೆಲವು ವರ್ಷಗಳಿಂದ ನೀಡಲಾಗುತ್ತಿದೆ. ಇದು ರಕ್ಷಣಾತ್ಮಕ ಚಾಲನ ಕೌಶಲ ತರಬೇತಿ. ಸಂಶೋಧನೆಯ ಪ್ರಕಾರ ಚಾಲಕರ ತಪ್ಪಿನಿಂದಲೇ ಶೇ. 78ರಷ್ಟು ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದಲೇ ಈ ಹೊಸ ಯೋಜನೆಯನ್ನು ನಿಗಮವು ಹಮ್ಮಿಕೊಂಡಿದೆ. ಈ ತರಬೇತಿಯನ್ನು ಹಾಸನ, ಬೆಂಗಳೂರು, ಮೈಸೂರಿನಲ್ಲಿ ನೀಡಲಾಗುತ್ತಿದೆ.

ಹೊಸ ಆಲ್ಕೋ ಮೀಟರ್‌
ಎಷ್ಟೇ ಮುಂಜಾಗ್ರತೆ ಕೈಗೊಂಡರೂ ಕೆಲವು ಚಾಲಕರು ಮದ್ಯ ಸೇವಿಸಿ ಬಸ್‌ ಚಲಾಯಿಸುವುದು ನಿಗಮದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಿಗಮವು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದಕ್ಕೆಂದೇ ಆಧುನಿಕ ತಂತ್ರಜ್ಞಾನ ಆಲ್ಕೋಮೀಟರ್‌ ಪರಿಚಯಿಸಿದೆ. ಈ ಯಂತ್ರ ಬಳಸಿ ರಾತ್ರಿ ಪಾಳಿಯ ಜತೆಗೆ ಉಳಿದ ಸಮಯದಲ್ಲಿಯೂ ಚಾಲಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಿಗಮದ ಅಧಿಕಾರಿಯೊಬ್ಬರು ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, ಆಲ್ಕೋ ಮೀಟರ್‌ ಪರಿಚಯಿಸಿದ ಬಳಿಕ ಅಪಘಾತಗಳ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ, ಒಂದುವೇಳೆ ಚಾಲಕರು ಮದ್ಯ ಸೇವಿಸಿ ಬಸ್‌ ಚಾಲನೆ ಮಾಡಿದರೆ ಸಂಸ್ಥೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.

Advertisement

ಇವಿಷ್ಟೇ ಅಲ್ಲದೆ, ನಿಗಮದಲ್ಲಿ ಹೆಚ್ಚಾಗಿ ಚಾಲಕರಿಗೆ ಒಂದೇ ರೂಟ್‌ನಲ್ಲಿ ಬಸ್‌ಗಳನ್ನು ಚಲಾಯಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ, ಪದೇಪದೇ ಮಾರ್ಗಗಳನ್ನು ಬದಲಿಸುವುದಿಲ್ಲ. ಒಂದೇ ಮಾರ್ಗದಲ್ಲಿ ಬಸ್‌ ಚಲಾಯಿಸುವುದರಿಂದ ಚಾಲಕರಿಗೆ ಮಾರ್ಗ ಪರಿಚಯ ಚೆನ್ನಾಗಿದ್ದು, ಅಪಘಾತ ಇಳಿಕೆಗೆ ಅನುಕೂಲವಾಗುತ್ತದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಎಲ್ಲ ಹಂತಗಳಲ್ಲೂ ಗಂಭೀರ ಪ್ರಯತ್ನ ನಡೆಯುತ್ತಿದ್ದು, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಪ್ರಯಾಣಿಕರಲ್ಲಿಯೂ ಸರಕಾರಿ ಬಸ್‌ ಸೇವೆ ಮತ್ತು ಅದರ ಸುರಕ್ಷತೆ ಬಗ್ಗೆ ಭರವಸೆ ಮೂಡಿಸಿದೆ.

ಚಾಲಕರಿಗೆ ಪದಕದ ಗೌರವ
ಅಪಘಾತ ರಹಿತ ಚಾಲನೆ ಮಾಡಿದ ಪ್ರಯಾಣಿಕರಿಗೆ ಚಿನ್ನ ಮತ್ತು ಬೆಳ್ಳಿ ಪದಕದ ಗೌರವವನ್ನು KSRTC ನೀಡುತ್ತಿದೆ. 15 ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮಾಡಿದ ಗ್ರಾಮೀಣ ಪ್ರದೇಶದ ಚಾಲಕರಿಗೆ ಮತ್ತು ಏಳು ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮಾಡಿದ ನಗರ ಪ್ರದೇಶದ ಚಾಲಕರಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಐದು ವರ್ಷಗಳ ಕಾಲ ಗ್ರಾಮೀಣ ಪ್ರದೇಶ, ಮೂರು ವರ್ಷಗಳ ಕಾಲ ನಗರ ಪ್ರದೇಶದಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ನೀಡಲಾಗುತ್ತಿದೆ.

ರಸ್ತೆ ಸುರಕ್ಷತೆಯ ಬಗ್ಗೆ ನಮ್ಮ ಸಾರಿಗೆ ಸಂಸ್ಥೆಯ ಚಾಲಕರಿಗೆ ಎಲ್ಲ ರೀತಿಯ ಮುಂಜಾಗ್ರತೆ ತರಬೇತಿ, ಸಲಹೆ ನೀಡಲಾಗುತ್ತಿದೆ. ಅಲ್ಲದೆ ಅಪಘಾತರಹಿತ ಚಾಲನೆಯ ಅನೇಕ ಕಾರ್ಯಾಗಾರವನ್ನು ಚಾಲಕರು, ನಿರ್ವಾಹಕರಿಗೆ ಹಮ್ಮಿಕೊಳ್ಳುತ್ತಿದ್ದೇವೆ. ಇನ್ನು ಅಪಘಾತರಹಿತ ಬಸ್‌ ಚಾಲನೆ  ಮಾಡುವ ಚಾಲಕರಿಗೆ ಪದಕ ನೀಡಿ ಪ್ರೋತ್ಸಾಹಿಸುವ ಮೂಲಕ ಇತರ ಚಾಲಕರನ್ನೂ ಉತ್ತೇಜಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ KSRTCಯಲ್ಲಿ ಅಪಘಾತ ಪ್ರಮಾಣ ಇಳಿಮುಖವಾಗಿರುವುದು ನಿಜ.
– ಎಚ್‌.ಎಂ. ರೇವಣ್ಣ, ರಾಜ್ಯ ಸಾರಿಗೆ ಸಚಿವ

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next