Advertisement

KSRTC ನೌಕರರ ಧರಣಿ ವಾಪಸ್‌

08:15 AM Jan 18, 2018 | Team Udayavani |

ಬೆಂಗಳೂರು: ಸಾರಿಗೆ ನಿಗಮದ ನೌಕರರ ಬೇಡಿಕೆಗಳ ಕುರಿತಂತೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಸಂಘದ ಸದಸ್ಯರು ಕುಟುಂಬದವರೊಂದಿಗೆ
ಗುರುವಾರ (ಜ. 18) ಸಚಿವರ ನಿವಾಸದ ಮುಂದೆ ನಡೆಸಲು ಉದ್ದೇಶಿಸಿದ್ದ ಧರಣಿ ಕೈಬಿಟ್ಟಿದ್ದಾರೆ.

Advertisement

ಸಚಿವ ರೇವಣ್ಣ ಅವರು ವಿಕಾಸಸೌಧದಲ್ಲಿ ಬುಧವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳೊಂದಿಗೆ ಸುದೀರ್ಘ‌ ಮಾತುಕತೆ ನಡೆಸಿದ್ದು, ಕೆಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಒಪ್ಪಿದ ಸಂಘದ ಪದಾಧಿಕಾರಿಗಳು ಹೋರಾಟ ಕೈಬಿಟ್ಟಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೇವಣ್ಣ, ಅಂತರ ನಿಗಮ ವರ್ಗಾವಣೆ ಯೋಜನೆಯಡಿ ವರ್ಗಾವಣೆಗೊಂಡ ನೌಕರರನ್ನು ಬಿಡುಗಡೆಗೊಳಿಸುವ ಸಂಬಂಧ ಈಗಾಗಲೇ ಸಿಬ್ಬಂದಿ
ಇಲಾಖೆಯಿಂದ ಸೂಚನೆ ನೀಡಲಾಗಿದ್ದು, ಪ್ರಕ್ರಿಯೆ ಆರಂಭವಾಗುತ್ತಿದೆ. ಅಲ್ಲದೆ, ಕೇಳಿದ ಸ್ಥಳಕ್ಕೆ ವರ್ಗಾವಣೆ ಸಿಗದವರನ್ನು ಬೇರೆ ಕಡೆ ಬಲವಂತದಿಂದ ವರ್ಗಾವಣೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂಬುದನ್ನು ಸಂಘದ ಪದಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದಕ್ಕೆ ಅವರು ಸಮ್ಮತಿಸಿದ್ದಾರೆಂದು ಹೇಳಿದರು.

ಹಾಸನದಿಂದ ಮಂಗಳೂರು ವಿಭಾಗಕ್ಕೆ ಎರವಲು ಸೇವೆಗೆ ನಿಯೋಜಿಸಿರುವ ಸಿಬ್ಬಂದಿಯನ್ನು ಖಾಲಿ ಹುದ್ದೆಗಳ ಲಭ್ಯತೆಗೆ ಅನುಗುಣವಾಗಿ ಹಾಸನ ವಿಭಾಗಕ್ಕೆ ನಿಯೋಜಿಸಲಾಗುವುದು. 2016ರ ಜುಲೈನಲ್ಲಿ ನೌಕರರು ನಡೆಸಿದ ಮುಷ್ಕರದ ವೇಳೆ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣಗಳ ಪೈಕಿ ಮೂರು ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ಇತರೆ ಕ್ರಮಗಳನ್ನು ಕೈಬಿಡಲು ತೀರ್ಮಾನಿಸಲಾಗಿದೆ. ಬಿಎಂಟಿಸಿ ನೌಕರರಿಗೆ ಬೋನಸ್‌ ನೀಡುವ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ 
ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಲಾಗಿದೆ ಎಂದು ತಿಳಿಸಿದರು. ವರ್ಗಾವಣೆಗೆ 10 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 3,952 ಮಂದಿಗೆ ಕೇಳಿದ ಕಡೆ ವರ್ಗಾವಣೆ ಸಿಕ್ಕಿತ್ತು. ಉಳಿದವರು ತಮಗೆ ವರ್ಗಾವಣೆ 
ಬೇಡವೆಂದು ಹೇಳಿದರೂ ಅವರನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಗೊಂದಲ ಸೃಷ್ಟಿಯಾಗಿತ್ತು ಎಂದೂ ಸಚಿವರು ತಿಳಿಸಿದರು.

ಹಳೇ ರೂಟ್‌ ನಂ.4ರ ಬಸ್‌ಗೆ ಹತ್ತಿಸಬೇಕು ಮತ್ತೆ ನಾಲಿಗೆ ಹರಿಬಿಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರನ್ನು ಬಿಎಂಟಿಸಿ ಹಳೇ ರೂಟ್‌ ನಂ.4ರ ಬಸ್‌ನಲ್ಲಿ ಕಳುಹಿಸಬೇಕು ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಏಳು ಜ್ಞಾನಪೀಠ ತಂದುಕೊಟ್ಟ ಸಾಹಿತಿಗಳ ವಲಯಕ್ಕೇ ಅವಮಾನ ಮಾಡುತ್ತಿದ್ದಾರೆ. ಇವರನ್ನು ಬಿಎಂಟಿಸಿ ಹಳೇ ರೂಟ್‌ ನಂ.4ರ ಬಸ್‌ನಲ್ಲಿ ಕಳುಹಿಸಬೇಕು ಎಂದರು. ರೂಟ್‌ ನಂ. 4ರ ಬಸ್‌ನಲ್ಲಿ ಏಕೆ
ಕಳುಹಿಸಬೇಕು. ಅಲ್ಲೇನಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಲ್ಲಿ ಹುಚ್ಚಾಸ್ಪತ್ರೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next