Advertisement

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

01:24 AM Jan 01, 2025 | Team Udayavani |

ಬಿಜೆಪಿಯವರಿಗೆ ನಾನು ಮನೆ ದೇವರಿದ್ದಂತೆ. ನನ್ನ ಹೆಸರು ಹೇಳದಿದ್ದರೆ ಅವರಿಗೆ ಊಟ ಅರಗುವುದಿಲ್ಲ. ಇಲ್ಲದ ವಿಚಾರವನ್ನು ವಿವಾದ ಮಾಡಲು ಹೊರಟಿದ್ದಾರೆ. ಸೈದ್ಧಾಂತಿಕವಾಗಿ ನಾನು ಅವರ ವಿರುದ್ಧ ಇದ್ದೇನೆ ಎಂಬ ಒಂದೇ ಕಾರಣಕ್ಕೆ ನನ್ನನ್ನು ಗುರಿ ಮಾಡುತ್ತಿದ್ದಾರೆ. ರಾಜ್ಯವಲ್ಲದಿದ್ದರೆ ರಾಷ್ಟ್ರ ಮಟ್ಟದಲ್ಲಿ ಪ್ರತಿಭಟಿಸಲಿ, ಮೂಗು ಕೊಯ್ಸಿಕೊಂಡು ಬರುತ್ತಾರೆ. ಇದಿಷ್ಟು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತುಗಳು.

Advertisement

– ವಿವಾದದ ಮೇಲೆ ವಿವಾದಗಳು ನಿಮ್ಮ ಸುತ್ತಲೇ ಸುತ್ತುತ್ತಿರುವುದು ಏಕೆ?
ಬಿಜೆಪಿಯವರಿಗೆ ನನ್ನ ಮೇಲೆ ಪ್ರೀತಿ ಬಹಳ ಇದೆ. ಗೊಬೆಲ್ಸ್‌ ಸಿದ್ಧಾಂತ ಅನುಸರಿಸಿ ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 4 ಬಾರಿ ನನ್ನ ರಾಜೀನಾಮೆ ಕೇಳಿದ್ದಾರೆ. ಯಾವುದಕ್ಕೂ ದಾಖಲೆ, ಪುರಾವೆ ಕೊಟ್ಟಿಲ್ಲ. ಇನ್ನೊಂದೆರಡು ದಿನದಲ್ಲಿ ಅವರೇ ಇದನ್ನೆಲ್ಲಾ ನಿಲ್ಲಿಸಬೇಕಾಗುತ್ತದೆ. ಏಕೆಂದರೆ, ಇದರಲ್ಲಿ ನಿಜವೂ ಇಲ್ಲ, ಸುಳ್ಳೇ ಎಲ್ಲ.

-ನಿಮ್ಮೊಬ್ಬರನ್ನೇ ಬಿಜೆಪಿ ಗುರಿ ಮಾಡುತ್ತಿದೆ ಎನ್ನುವಿರಾ? ಅದಕ್ಕೆ ಕಾರಣವೇನು?
ನಾನು ಅವರಿಗೆ ಸೈದ್ಧಾಂತಿಕವಾಗಿ ವಿರುದ್ಧ ಇದ್ದೇನೆ. ಆರ್‌ಎಸ್‌ಎಸ್‌, ಮನುಸ್ಮತಿ ದೃಷ್ಟಿಕೋನದ ವಿರುದ್ಧ ಮಾತನಾಡುತ್ತೇನೆ. ಸಂವಿಧಾನ, ಡಾ| ಬಿ.ಆರ್‌. ಅಂಬೇಡ್ಕರ್‌, ಬಸವಣ್ಣನವರ ಆಶಯಗಳನ್ನು ಸಮಾಜದಲ್ಲಿ ಅನುಷ್ಠಾನ ಮಾಡಬೇಕೆಂದಿದ್ದೇವೆ. ಈ ತತ್ತÌಗಳು ಬೆಳೆದಷ್ಟು ಸಹಜವಾಗಿ ಬಿಜೆಪಿಯ ಅಸ್ತಿತ್ವದ ಪ್ರಶ್ನೆ ಇದು. ಹೀಗಾಗಿ ನಾನೇ ನಂ. 1 ಗುರಿ.

– ನಿಮ್ಮಂತೆ ಮಾತನಾಡುವವರು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲವೇ?
ಸೈದ್ಧಾಂತಿಕವಾಗಿ ನಾನು ಬದ್ಧನಾಗಿದ್ದೇನೆ. ನಮ್ಮ ಸುತ್ತಮುತ್ತ ಇರುವವರು ಬುದ್ಧ, ಬಸವ, ಅಂಬೇಡ್ಕರ್‌ ನಂಬಿ ಬಂದವರು. ಇದರಲ್ಲೇ ನಮ್ಮ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವೂ ಇದೆ. ಬೇರೆಯವರ ತತ್ವ-ಸಿದ್ಧಾಂತದ ಬಗ್ಗೆ ಮಾತನಾಡಲ್ಲ. ಸಿಎ, ಡಿಸಿಎಂ, ಸಚಿವರಾದ ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಸಂತೋಷ್‌ ಲಾಡ್‌ ಎಲ್ಲರೂ ಮಾತನಾಡುತ್ತಾರೆ.

– ಎಲ್ಲ ಸಚಿವರ ಇಲಾಖೆ ಬಗ್ಗೆ ನೀವೊಬ್ಬರೇ ಮಾತನಾಡುತ್ತೀರಿ ಎಂಬ ಬಿಜೆಪಿ ಆಕ್ಷೇಪಕ್ಕೆ ಏನಂತೀರಾ?
ಪಿಎಸ್‌ಐ, ಕೋವಿಡ್‌, ಕೆಕೆಆರ್‌ಡಿಬಿ, ಬಿಟ್‌ ಕಾಯಿನ್‌ ಹಗರಣಗಳಾದಾಗ ದಾಖಲೆ ಕೊಟ್ಟು ಮಾತನಾಡಿದ್ದೇನೆ. ಸುಮ್ಮನೆ ಆರೋಪಿಸಿಲ್ಲ. ನಾನು ಸರ್ಕಾರದ ವಕ್ತಾರ ಆಗಿದ್ದೇನೆ. ನಾನು ಮಾಧ್ಯಮ ವಿಭಾಗದ ಮುಖ್ಯಸ್ಥನಾಗಿದ್ದೆ. ಮಾತನಾಡುತ್ತೇನೆ. ನನ್ನ ಪರವಾಗಿ ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ನಾವು ಸಾಕ್ಷಿ ಇಟ್ಟು ಮಾತನಾಡುತ್ತೇವೆ.

Advertisement

– ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನಾತ್ಮಕವಾಗಿಯೇ ಕೆಐಎಡಿಬಿ ಹಂಚಿಕೆ ಮಾಡಿದೆ ಎಂದು ಸಾಧಿಸುತ್ತಿದ್ದವರು ವಾಪಸ್‌ ಕೊಟ್ಟಿದ್ದೇಕೆ?
ಟ್ರಸ್ಟ್‌ ಅಧ್ಯಕ್ಷ ರಾಹುಲ್‌ ಖರ್ಗೆ ಸ್ಪಷ್ಟ ಪತ್ರ ಬರೆದಿದ್ದರು. ನಾನು ರಾಜಕಾರಣಿ ಅಲ್ಲ. ಈ ಕೆಸರೆರಚಾಟ ನನಗೆ ಇಷ್ಟ ಇಲ್ಲ. ಇಂತಹ ವಾತಾವರಣದಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದಿದ್ದರು. ನಾನಾಗಿದ್ದರೆ ವಾಪಸ್‌ ಕೊಡುತ್ತಿರಲಿಲ್ಲ. ಇದು ಕಾನೂನುಬಾಹಿರ ಆಗಿದ್ದರೆ ಪ್ರತಿಪಕ್ಷದಲ್ಲಿರುವ ಬಿಜೆಪಿಯವರು ಸುಮ್ಮನೆ ಬಿಡುತ್ತಿದ್ದರಾ?

– ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ನಿಮ್ಮ ಆಪ್ತ ರಾಜು ಕಪನೂರು ಪ್ರಭಾವ ಇದೆ ಎಂಬ ಆರೋಪವಿದೆ. ರಾಜೀನಾಮೆ ಕೊಡಬೇಕಾದದ್ದು ನಿಮ್ಮ ನೈತಿಕತೆ ಅಲ್ಲವೇ?
ರಾಜು ಕಪನೂರು ನಮ್ಮ ಪಕ್ಷದ ಕಾರ್ಪೊರೇಟರ್‌ ಸಹೋದರ. ನಾವು ಅದನ್ನು ತಳ್ಳಿಹಾಕುತ್ತಿಲ್ಲ. ಇದೇ ರಾಜು ಕಪನೂರು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿರಲಿಲ್ಲವೇ? ಬಸವರಾಜ ಮತ್ತಿಮೋಡ್‌, ಚಂದು ಪಾಟೀಲ್‌ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಒಡನಾಟ ಇರಲಿಲ್ಲವೇ? ಸಚಿನ್‌ ಪಡೆದಿದ್ದ ಸಾಲದ ಹಣ ವಾಪಸ್‌ ಕೇಳಿದಾಗ ಕೊಟ್ಟಿರಲಿಲ್ಲ. ಆಗ ಈತ ಫೇಕ್‌ ಕಾಂಟ್ರಾಕ್ಟರ್‌ ಎಂಬುದು ಗೊತ್ತಾಗಿದೆ. ಇಷ್ಟು ಚಿಕ್ಕವಯಸ್ಸಿಗೇ ಕೋಟ್ಯಂತರ ರೂಪಾಯಿ ಗುತ್ತಿಗೆ ಪಡೆದಿದ್ದಾನೆ ಎಂಬುದನ್ನು ಅವರ ಕುಟುಂಬದವರ ಗಮನಕ್ಕೆ ತಂದಾಗ, ನಮ್ಮ ಗಮನದಲ್ಲೂ ಇರಲಿಲ್ಲ. ಸರಿಪಡಿಸುತ್ತೇವೆ ಎಂದು ಸಚಿನ್‌ ಕುಟುಂಬದವರೂ ಹೇಳಿದ್ದರು. ನೈತಿಕತೆ ಇರುವುದರಿಂದಲೇ ಪ್ರಕರಣದ ತನಿಖೆ ಆಗಲಿ ಎಂದು ನಾನೂ ಮನವಿ ಮಾಡಿದ್ದೇನೆ. ಎಲ್ಲಿಯೂ ತಲೆತಪ್ಪಿಸಿಕೊಂಡಿಲ್ಲ.

ನಿಮ್ಮ ವಿರುದ್ಧ ಸುಮ್ಮನೆ ಆರೋಪ ಕೇಳಿಬರಲು ಸಾಧ್ಯವೇ?
ಆಪಾದಿತ ಮರಣಪತ್ರದ ಅಸಲಿಯತ್ತು ಇನ್ನೂ ಗೊತ್ತಿಲ್ಲ. ಒಟ್ಟು 8 ಪುಟ ಇದೆ. 7ನೇ ಪುಟದಲ್ಲೇ ಸಚಿನ್‌ ಸಹಿ ಇದೆ. ಎಲ್ಲಿಯೂ ಪ್ರಿಯಾಂಕ್‌ ಖರ್ಗೆ ಪ್ರಭಾವ ಬೀರಿ ಟೆಂಡರ್‌ ಕೊಡಿಸುವ ಭರವಸೆ ಕೊಟ್ಟಿದ್ದರೆಂದು ಉಲ್ಲೇಖವಿಲ್ಲ. ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿದ್ದಾಗಿ ಒಂದೆರಡು ಕಡೆ ಉಲ್ಲೇಖವಿದೆ. ಎಲ್ಲಿಯಾದರೂ ಉಂಟೆ? 8 ಜನ ಆರೋಪಿಗಳ ಪೈಕಿ ಮೊದಲ ಮೂವರು ನಮ್ಮ ಪಕ್ಷದವರು. ಇನ್ನುಳಿದವರು ಸಚಿನ್‌ ಕೆಲಸ ಮಾಡುತ್ತಿದ್ದ ಯುನಿಟಿ ಇನ್‌ಫ್ರಾ ಬಿಲ್ಡ್‌ ಕಂಪನಿಗೆ ಸೇರಿದವರು. ಕಂಪನಿಗೆ ಸಿಕ್ಕಿದ್ದ ಟೆಂಡರ್‌ನಂತೆ ಕಾಮಗಾರಿ ಮಾಡಲು ಸಚಿನ್‌ ಮೂಲಕ ನೆರವು ಕೇಳಿದ್ದಾರೆ. ಮೊದಲ ಮೂವರು ಆರೋಪಿಗಳು ಹಣಕಾಸಿನ ನೆರವು ಕೊಟ್ಟಿದ್ದಾರೆ. ಇದರಲ್ಲಿ ಅವ್ಯವಹಾರ ಏನಿದೆ?

ಕೆ.ಜೆ. ಜಾರ್ಜ್‌ ತನಿಖೆ ಎದುರಿಸಿ ಆರೋಪಮುಕ್ತರಾಗಿ ಸಂಪುಟ ಸೇರಿದರು. ನಿಮಗಿದು ಮಾದರಿಯಲ್ಲವೇ?
ಬಿಜೆಪಿಯವರು ತಾರ್ಕಿಕವಾಗಿ ಮಾತನಾಡಿದರೆ ಉತ್ತರ ಕೊಡಬಹುದು. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಆದಾಗ ಈಶ್ವರಪ್ಪ ಅವರ ಹೆಸರು ನೇರವಾಗಿ ಉಲ್ಲೇಖವಾಗಿತ್ತು. ನನ್ನ ಆಪ್ತರ ಹೆಸರಿದೆ ಎಂಬ ಕಾರಣಕ್ಕೆ ನನ್ನ ರಾಜೀನಾಮೆ ಕೇಳುವುದಾದರೆ, ಕೋವಿಡ್‌ ಹಗರಣದಲ್ಲಿ ಯಡಿಯೂರಪ್ಪ ಅವರ ಹೆಸರು ನ್ಯಾ.ಕುನ್ಹಾ ವರದಿಯಲ್ಲಿದೆ. ಪೋಕ್ಸೋ  ಪ್ರಕರಣದಲ್ಲೂ ಅವರ ಹೆಸರಿದೆ.

ಮುನಿರತ್ನ ಪ್ರಕರಣದಲ್ಲಿ ಎಫ್ಎಸ್‌ಎಲ್‌ ವರದಿ ಬಂದಿದೆಯಲ್ಲವೇ? ಅದಕ್ಕೆ ಏನು ಹೇಳುತ್ತಾರೆ? 8 ಜನ ಆರೋಪಿಗಳಲ್ಲಿ ಎಲ್ಲೂ ನನ್ನ ಹೆಸರಿಲ್ಲ. ನಾನು ಪ್ರಭಾವ ಬಳಸಿದ್ದೇನೆ ಎಂದು ಮರಣ ಪತ್ರದಲ್ಲಿ ಎಲ್ಲಿಯಾದರೂ ಇದೆಯೇ? ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ, ಬಳ್ಳಾರಿ ಗಣಿಗಾರಿಕೆ, ಪರೇಶ್‌ ಮೆಸಾ ಕೊಲೆ ಪ್ರಕರಣಗಳನ್ನೂ ಬಿಜೆಪಿ ಆಗ್ರಹದ ಮೇರೆಗೆ ಸಿಬಿಐಗೆ ವಹಿಸಿದ್ದೆವು. ನಮ್ಮ ತನಿಖೆ ಸರಿಯಿದೆ ಎಂದೇ ವರದಿ ಬಂದಿತ್ತು.

– ಸಿಬಿಐ ಮೇಲೆ ನೀವು ದೂರುತ್ತೀರಿ, ಸಿಐಡಿ ಮೇಲೆ ನಂಬಿಕೆ ಇಲ್ಲ ಎಂದು ವಿಪಕ್ಷಗಳು ಹೇಳುತ್ತವೆ. ತನಿಖಾ ಸಂಸ್ಥೆಗಳ ಅಪಮೌಲ್ಯ ಆಗುವುದಿಲ್ಲವೇ?
ಬಿಜೆಪಿಯವರಿಗೆ ತನಿಖಾ ಸಂಸ್ಥೆಗಳ ಮೇಲೂ ನಂಬಿಕೆ ಇಲ್ಲ. ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದರೆ ದೇವರ ಮೇಲೂ ನಂಬಿಕೆ ಇಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದೇ ಘೋಷಣೆ ಕೂಗಿದ್ದು. ಎಫ್ಎಸ್‌ಎಲ್‌ ವರದಿ ಬಂದಿದೆ ಎನ್ನುತ್ತಾರೆ. ಯಡಿಯೂರಪ್ಪ, ಮುನಿರತ್ನ ವಿರುದ್ಧದ ಪ್ರಕರಣಗಳಲ್ಲಿ ಎಫ್ಎಸ್‌ಎಲ್‌ ವರದಿ ಬಂದಾಗ ನಂಬಲ್ಲ ಎಂದರೆ ಹೇಗೆ? ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಆಗಲಿ ಎಂದೇ ನಾನು ಹೇಳುತ್ತಿದ್ದೇನೆ.

-ನಿಮ್ಮ ರಾಜೀನಾಮೆ, ಸಚಿನ್‌ ಆತ್ಮಹತ್ಯೆಯ ಸಿಬಿಐ ತನಿಖೆ, ಅವರ ಕುಟುಂಬಕ್ಕೆ ಪರಿಹಾರ, ಸರ್ಕಾರಿ ನೌಕರಿ ನೀಡಲು ಬಿಜೆಪಿ ಡೆಡ್‌ಲೈನ್‌ ಕೊಟ್ಟಿದೆ?
ಶಾಸಕನಾಗಿ ನಾನು 4 ಬಾರಿ ಚುನಾವಣೆಗೆ ನಿಂತಿದ್ದೇನೆ. ನಾನು ಸಂಪುಟದಲ್ಲಿ ಅತಿ ಕಿರಿಯ ಸಚಿವ. ಏನೇ ಮಾತನಾಡಿದರೂ ತೂಕ, ಬೆಲೆ ಇರಬೇಕು ಎಂದು ನಂಬಿರುವವನು ನಾನು. ಪ್ರತಿಭಟನೆ ಮಾಡುವವರಿಗೆ ಇಲ್ಲ ಎನ್ನಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶಗಳಿವೆ. ಬಿಜೆಪಿಯವರ ಡೆಡ್‌ಲೈನ್‌ನ್ನು ನಾನು ಸ್ವಾಗತಿಸುತ್ತೇನೆ. ಎಳನೀರು, ಟೀ, ಕಾಫಿ, ಶುಗರ್‌ಲೆಸ್‌ ಕೂಡ ಕೊಡುತ್ತೇನೆ. ವಕ್ಫ್ ವಿಚಾರ, ಬಾಣಂತಿ-ಮಕ್ಕಳ ಸಾವಿನ ವಿರುದ್ಧದ ಹೋರಾಟದಲ್ಲಿ ಬಿಜೆಪಿಯಲ್ಲಿ ಬಣಗಳಾಗಿವೆ. ಸ್ವಪಕ್ಷೀಯರೇ ವಿಜಯೇಂದ್ರ ಮಾತು ಕೇಳುತ್ತಿಲ್ಲ. ನಾನು, ನಮ್ಮ ಸರಕಾರ ಏಕೆ ಇವರಿಗೆ ಬೆಲೆ ಕೊಡಬೇಕು?

– ರಾಷ್ಟ್ರ ಮಟ್ಟದಲ್ಲಿ ಈ ಪ್ರಕರಣ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತದೆ. ಹೈಕಮಾಂಡ್‌ ರಾಜೀನಾಮೆ ಕೇಳಿದೆ ಎನ್ನುವ ಸುದ್ದಿ ಇದೆಯಲ್ಲವೇ?
ಇವೆಲ್ಲಾ ಊಹಾಪೋಹ. ಬಿಜೆಪಿಯವರಿಗೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಆದರೂ, ಪ್ರಕೃತಿ ವಿಕೋಪ ಆದರೂ ಬಿಜೆಪಿಯಲ್ಲಿ ಅಸಮಾಧಾನ ಆಗಿ ಅವರ ಮನೆ ನೂರು ಬಾಗಿಲಾದರೂ ನಾನೇ ಕಾರಣ. ನಾನು ಅವರ ಮನೆ ದೇವರಾಗಿಬಿಟ್ಟದ್ದೇನೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲೂ ಪ್ರತಿಭಟಿಸಲಿ, ಅವರೇ ಮೂಗು ಕುಯ್ಸಿಕೊಳ್ಳುತ್ತಾರೆ. ನನ್ನ ಹೆಸರಲ್ಲಿ ನಾಯಕತ್ವ ಸಿಗುತ್ತದೆ ಎನ್ನುವುದಾದರೆ ಮಾಡಿಕೊಳ್ಳಲಿ.

ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next