ವಿಶೇಷ ವರದಿ- ಮಂಗಳೂರು: ಕೋವಿಡ್-19 ಲಾಕ್‌ಡೌನ್ ಸಡಿಲಿಕೆ ಬಳಿಕ ದೂರದ ಊರುಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳ ಚಾಲಕ-ನಿರ್ವಾಹಕರು ಸುಮಾರು 7 ತಾಸು ಊಟ-ತಿಂಡಿ ಇಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯ ಎದುರಾಗಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ ಸಹಿತ ದೂರದ ಊರುಗಳಿಗೆ ತೆರಳುವ ಬಸ್ ಸಿಬಂದಿಗೆ ಈ ಸಮಸ್ಯೆ ಎದುರಾಗಿದೆ. ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಡುವ ಬಸ್ ಬೆಂಗಳೂರು ತಲುಪುವಾಗ ಸಂಜೆ ಸುಮಾರು 5 ಗಂಟೆಯಾಗುತ್ತದೆ. ಅಂದರೆ, ಸುಮಾರು 6 ತಾಸು ಕೊರೊನಾ ಆತಂಕದ ನಡುವೆ ವಾಹನವನ್ನು ಚಲಿಸಬೇಕಾಗುತ್ತದೆ.
ಮಂಗಳೂರು ಕೆಎಸ್ಸಾರ್ಟಿಸಿ ಡಿಪೋದಿಂದ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆ ಯವರೆಗೆ ದೂರದ ಊರುಗಳಿಗೆ ಬಸ್‌ಗಳು ಕಾರ್ಯಾಚರಿಸುತ್ತವೆ. ಹೀಗಿದ್ದಾಗ ಪ್ರಯಾಣಿಕರು ಸಹಜವಾಗಿಯೇ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಾರೆ. ಅವರನ್ನು ಬಸ್‌ಗೆ ಹತ್ತಿಸುವ ಪ್ರಕ್ರಿಯೆಯಲ್ಲಿ ಬೆಳಗ್ಗೆ ಸಿಬಂದಿಗೆ ತಿಂಡಿ ತಿನ್ನಲು ಸಮಯ ಇರುವುದಿಲ್ಲ. ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಚಾಲನೆಯ ವೇಳೆ ಮಾರ್ಗದ ಯಾವುದೇ ಕಡೆಗಳಲ್ಲಿ ಬಸ್ ನಿಲ್ಲಿಸುವ ಹಾಗಿಲ್ಲ. ಅಷ್ಟೇ ಅಲ್ಲ, ಬಸ್ ಚಾಲಕ, ನಿರ್ವಾಹಕ ಸಹಿತ ಪ್ರಯಾಣಿಕರಿಗೆ ಈ ಹಿಂದಿನಂತೆ ಊಟಕ್ಕೆಂದು ಬಸ್ ನಿಲ್ಲಿಸುವಂತಿಲ್ಲ. ಪ್ರಯಾಣಿಕರು ಬಸ್ ಹತ್ತುವಾಗಲೇ ಪಾರ್ಸೆಲ್ ತರಬೇಕು. ಇನ್ನು, ಚಾಲಕರು, ನಿರ್ವಾಹಕರು ನಿಗದಿತ ಡಿಪೋಗೆ ತೆರಳಿದ ಬಳಿಕ ಊಟ-ತಿಂಡಿ ಸೇವಿಸಬೇಕು.
ಇನ್ನು ಒಮ್ಮೆ ಪ್ರಯಾಣ ಆರಂಭಿಸಿದ ಬಸ್ ಒಂದು ಕಡೆಯಿಂದ ನೇರವಾಗಿ ನಿಗದಿತ ಸ್ಥಳಕ್ಕೆ ಹೋಗಬೇಕು. ಮಂಗಳೂರು ಬಸ್ ನಿಲ್ದಾಣದಲ್ಲಿ ಸದ್ಯ ಹೊಟೇಲ್ ವ್ಯವಸ್ಥೆ ಕೂಡ ಇಲ್ಲ. ಹೊರಗಡೆ ಹೊಟೇ ಲ್‌ನಲ್ಲಿ ದುಪ್ಪಟ್ಟು ದರ ನೀಡಬೇಕು. ಅದು ಕೂಡ ಪಾರ್ಸೆಲ್‌ಗೆ ಮಾತ್ರ ಅವಕಾಶ. ಒಂದೆಡೆ ಈ ಸಮಸ್ಯೆಯಾದರೆ, ಮತ್ತೊಂದಡೆ ನಿರ್ವಾಹಕರಿಗೆ ಪ್ರಯಾಣಿಕರ ಗೋಳು ತಪ್ಪುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರವು ಪ್ರಯಾಣಿಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.
ಬೆಂಗಳೂರಿಗೆ ಪ್ರಯಾಣಿಕರು ಜಾಸ್ತಿ
ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನೇರವಾಗಿ ಬೆಂಗಳೂರಿಗೆ ತೆರಳುವ ಮಂದಿಯೇ ಹೆಚ್ಚು. ಲಾಕ್‌ಡೌನ್ ಸಡಿಲಗೊಂಡು ಎರಡೇ ದಿನದಲ್ಲಿ ಮಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ 67 ಬಸ್‌ನಲ್ಲಿ 1,746 ಮಂದಿ ಪ್ರಯಾಣಿಕರು ಬೆಂಗಳೂರಿಗೆ ತೆರಳಿದ್ದಾರೆ. ಅದೇ ರೀತಿ ಎರಡು ದಿನದಲ್ಲಿ ಜಿಲ್ಲೆ ಮತ್ತು ಅಂತರ್ ಜಿಲ್ಲೆಗೆ 157 ಬಸ್‌ನಲ್ಲಿ 3,647 ಮಂದಿ ಪ್ರಯಾಣಿಸಿದ್ದಾರೆ.
ಮಾರ್ಗ ಸೂಚಿಯಂತೆ ಸಂಚಾರ
ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಕೆಎಸ್ಸಾರ್ಟಿಸಿ ಬಸ್ ಕಾರ್ಯಾಚರಿಸುತ್ತಿವೆ. ಹೊಟೇಲ್‌ಗಳು ಈಗಾಗಲೇ ಬಂದ್ ಆಗಿದ್ದು, ಸಿಬಂದಿಗೆ ಅಥವಾ ಪ್ರಯಾಣಿಕರಿಗೆ ಊಟ-ತಿಂಡಿಗೆಂದು ಎಲ್ಲಿ ಯೂ ನಿಲ್ಲಿಸುವುದಿಲ್ಲ. ಪ್ರಯಾಣಿಕರು ಮನೆಯಿಂದ ಬರುವಾಗ ಊಟ-ತಿಂಡಿ ತರಬೇಕು.
– ಕಮಲ್ ಕುಮಾರ್, ಕೆಎಸ್ಸಾರ್ಟಿಸಿ ವಿಭಾಗೀಯ ಸಂಚಾರ ಅಧಿಕಾರಿ