Advertisement

ಮತ್ತೆರಡು ಕ್ರೀಡಾಂಗಣಕ್ಕೆ ಕೆಎಸ್‌ಸಿಎ ಸಿದ್ಧತೆ

04:35 PM Nov 23, 2018 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕ ಕ್ರಿಕೆಟ್‌ ಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಇನ್ನೂ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಲು ಉತ್ಸುಕವಾಗಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತಗಳು ಸಹಕಾರ ನೀಡಿದರೆ ತ್ವರಿತಗತಿಯಲ್ಲಿ ಕ್ರೀಡಾಂಗಣಗಳು ಸಜ್ಜಾಗಲಿವೆ.

Advertisement

ಈಗಾಗಲೇ ಧಾರವಾಡ ವಲಯದಲ್ಲಿ ಹುಬ್ಬಳ್ಳಿ ಹಾಗೂ ಬೆಳಗಾವಿ ಕ್ರೀಡಾಂಗಣಗಳಿದ್ದು, ಗದಗ ಹಾಗೂ ಕಾರವಾರದಲ್ಲಿ ಹೊಸ ಕ್ರೀಡಾಂಗಣಗಳು ತಲೆ ಎತ್ತಲಿವೆ. ಇದರಿಂದ ಧಾರವಾಡ, ಹಾವೇರಿ, ಕಾರವಾರ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯ ಧಾರವಾಡ ವಲಯದಲ್ಲಿ ನಾಲ್ಕು ಕ್ರೀಡಾಂಗಣಗಳಾಗಲಿವೆ.
 
ಗದಗನಲ್ಲಿ ಗದಗ-ರೋಣ ರಸ್ತೆಯ ನರಸಾಪುರ ಸಮೀಪ ಎಂಟೂವರೆ ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಜಾಗವನ್ನು ಖರೀದಿಸಲಾಗಿದ್ದು, ನೀರಿನ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಕ್ರೀಡಾಂಗಣದ ಜಾಗದಲ್ಲಿ 4-5 ಕೊಳವೆಬಾವಿಗಳನ್ನು ಕೊರೆಸಿದರೂ ನೀರಿನ ಸೆಲೆ ಸಿಕ್ಕಿಲ್ಲ. ಶಾಸಕ ಎಚ್‌. ಕೆ.ಪಾಟೀಲ ಅವರು ಕೂಡಾ ಕ್ರೀಡಾಂಗಣ ನಿರ್ಮಾಣಕ್ಕೆ ಆಸಕ್ತಿ ತೋರಿದ್ದು, ನಾಲೆಯ ಮೂಲಕ ನೀರು ತರಲಾಗುತ್ತಿದ್ದು, ಆಗ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇನ್ನು ಕಾರವಾರದಲ್ಲಿ ಸದಾಶಿವಗಡ ಸಮೀಪ ಕ್ರೀಡಾಂಗಣಕ್ಕೆ ಭೂಮಿ ಗುರುತಿಸಲಾಗಿದೆ. ಸಮುದ್ರ ಹಾಗೂ ನದಿಗೆ ಸಮೀಪದಲ್ಲಿ ಜಾಗವಿದ್ದು, ರಮಣೀಯ ದೃಷ್ಯ ಇಲ್ಲಿ ಸಿಗಲಿದೆ. ಆದರೆ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕರೆ ಪ್ರಕ್ರಿಯೆ ಮುಂದುವರೆಯಲಿದೆ. ಇದಕ್ಕೆ ಜನಪ್ರತಿನಿಧಿಗಳ ಆಸಕ್ತಿ ಮುಖ್ಯವಾಗಿದೆ. 

ಹುಬ್ಬಳ್ಳಿ ಹಾಗೂ ಬೆಳಗಾವಿ ಕ್ರೀಡಾಂಗಣಗಳಲ್ಲಿ ಶೇ.80ರಷ್ಟು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಹುಬ್ಬಳ್ಳಿ ಕ್ರೀಡಾಂಗಣದಲ್ಲಿ ಕೆಪಿಎಲ್‌ ಪಂದ್ಯಗಳು ನಡೆದಿವೆ. ಬಾಂಗ್ಲಾದೇಶ ಮಹಿಳಾ ತಂಡ ಹಾಗೂ ವೆಸ್ಟ್‌ಇಂಡೀಸ್‌ ಎ ತಂಡಗಳು ಆಡಿವೆ. ಬೆಳಗಾವಿ ಕ್ರೀಡಾಂಗಣ ಕೂಡ ಕೆಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳ ಸಂಖ್ಯೆ ಹೆಚ್ಚಾಗಿದ್ದು, ತಾರಾ ಹೊಟೇಲ್‌ಗಳು ಕೂಡ ಆರಂಭಗೊಂಡಿವೆ.

ಇದು ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ಪೂರಕವಾಗಿದೆ. ಧಾರವಾಡ ವಲಯ ಹೊರತು ಪಡಿಸಿದರೆ ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರ ಹಾಗೂ ಮಂಗಳೂರು ವಲಯಗಳಲ್ಲಿ ಕೆಲವೆಡೆ ಕ್ರೀಡಾಂಗಣಗಳಿಲ್ಲ. ಇನ್ನು ಕೆಲವೆಡೆ ಕ್ರೀಡಾಂಗಣಗಳಿದ್ದರೂ ಅವು ಅಭಿವೃದ್ಧಿಯಾಗಿಲ್ಲ. ಆದರೆ ಧಾರವಾಡ ವಲಯದ ಪದಾಧಿಕಾರಿಗಳ ಇಚ್ಛಾಶಕ್ತಿಯಿಂದಾಗಿ ನೂತನ ಕ್ರೀಡಾಂಗಣಗಳು ಇಲ್ಲಿ ಆರಂಭಗೊಳ್ಳುವಂತಾಗಿದೆ.  

Advertisement

ಹಲವು ವರ್ಷಗಳ ಹಿಂದೆ ರಣಜಿ ತಂಡದಲ್ಲಿ ಉತ್ತರ ಕರ್ನಾಟಕದ ಸಾಕಷ್ಟು ಕ್ರಿಕೆಟಿಗರು ಅವಕಾಶ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಕ್ರೀಡಾಳುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಲ್ಲಿ ಪ್ರತಿಭಾವಂತ ಹುಡುಗರಿದ್ದು, ಅವರಿಗೆ ಅವಕಾಶ ನೀಡುವ ಉದ್ದೇಶದಿಂದ ಧಾರವಾಡ ವಲಯದ ಅಭಿವೃದ್ಧಿಗೆ ಕೆಎಸ್‌ಸಿಎ ಆದ್ಯತೆ ನೀಡುತ್ತಿದೆ. ಬಿಸಿಸಿಐ ನಕಾಶೆಯಲ್ಲಿ ಉತ್ತರ ಕರ್ನಾಟಕದ ಕ್ರೀಡಾಂಗಣಗಳು ಸ್ಥಾನ ಪಡೆದುಕೊಳ್ಳಬೇಕು ಎಂಬುದು ನಮ್ಮ ಇಚ್ಛೆ.
 ಸಂತೋಷ ಮೆನನ್‌, ಕೆಎಸ್‌ಸಿಎ ಸಹಾಯಕ ಕಾರ್ಯದರ್ಶಿ

ಕ್ರೀಡಾಂಗಣದಲ್ಲೇ ಮಕ್ಕಳು ಕ್ರಿಕೆಟ್‌ ಅಭ್ಯಾಸ ಮಾಡುವಂತಾದರೆ ಅವರು ಕ್ರೀಡಾಂಗಣದ ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಕಷ್ಟವಾಗುವುದಿಲ್ಲ. ಇದನ್ನು ಮನಗಂಡು ಕೆಎಸ್‌ಸಿಎ ಹೆಚ್ಚೆಚ್ಚು ಕ್ರೀಡಾಂಗಣಗಳ ನಿರ್ಮಾಣಕ್ಕೆ ಮುಂದಾಗಿದೆ. ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲು ವಿಶಾಲವಾದ ರಸ್ತೆಗಳು, ಸಮರ್ಪಕ ನೀರಿನ ಸೌಲಭ್ಯ ಒದಗಿಸಿದರೆ ಕ್ರೀಡಾಂಗಣಗಳು ದೊಡ್ಡ ದೊಡ್ಡ ಪಂದ್ಯಗಳಿಗೆ ಆತಿಥ್ಯ ವಹಿಸಲು ಸಾಧ್ಯವಾಗುತ್ತದೆ. 
 ಬಾಬಾ ಭೂಸದ, ಕೆಎಸ್‌ಸಿಎ ಧಾರವಾಡ ವಲಯ ಸಂಯೋಜಕ

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next