ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಕೋಟಿಗೊಬ್ಬ- 3 ಚಿತ್ರತಂಡ ದೂರದ ಪೋಲಂಡ್ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿ, ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ನವರಸ ನಾಯಕ ಜಗ್ಗೇಶ್ ಅವರ ಸಹಾಯದಿಂದ ಸುಖಾಂತ್ಯ ಕಂಡಿರುವ ಪ್ರಕರಣವೊಂದು ವರದಿಯಾಗಿದೆ.
ಸೂರಪ್ಪ ಬಾಬು ಅವರು ನಿರ್ಮಾಪಕರಾಗಿರುವ ಈ ಚಿತ್ರದ ಶೂಟಿಂಗ್ ಯುರೋಪ್ ನ ಪೋಲಂಡ್ ದೇಶದಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಚಿತ್ರತಂಡಕ್ಕೆ ಸಹಾಯ ಮಾಡುವುದಾಗಿ ಏಜೆನ್ಸಿಯೊಂದನ್ನು ನಡೆಸುತ್ತಿರುವ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ಎಂಬಿಬ್ಬರು ನಿರ್ಮಾಪಕರಿಗೆ ಗಂಟುಬಿದ್ದಿದ್ದಾರೆ. ಮತ್ತು ಇದಕ್ಕಾಗಿ ಸುಮಾರು ಎರಡು ಕೋಟಿ ರೂಪಾಯಿಗಳನ್ನು ಇವರಿಗೆ ಪಾವತಿಸುವ ಕುರಿತು ಚಿತ್ರತಂಡ ಮತ್ತು ಇವರಿಬ್ಬರ ನಡುವೆ ಒಪ್ಪಂದವೂ ಆಗಿತ್ತು.
ಆದರೆ ಇವೆಲ್ಲದರ ನಡುವೆ ಅಜಯ್ ಮತ್ತು ಸಂಜಯ್ ಇನ್ನಷ್ಟು ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ. ಮತ್ತು ಚಿತ್ರತಂಡ ಅಲ್ಲಿಂದ ಕರ್ನಾಟಕಕ್ಕೆ ವಾಪಾಸಾದರೂ ಸೂರಪ್ಪ ಬಾಬು ಅವರ ಸಹಾಯಕರೊಬ್ಬರ ಪಾಸ್ ಪೋರ್ಟ್ ಅನ್ನು ಪಾಲ್ ಗಳು ತೆಗೆದಿರಿಸಿದ್ದರಿಂದ ಆತ ಪೋಲಂಡ್ ನಲ್ಲೇ ಉಳಿಯುವ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಮತ್ತು ಈತನ ಪಾಸ್ ಪೋರ್ಟ್ ನೀಡಲು ಈ ಪಾಲ್ ಗಳಿಬ್ಬರು ಹೆಚ್ಚುವರಿ 95 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಇತ್ತ ಬೇರೆ ದಾರಿ ಕಾಣದೆ ಸೂರಪ್ಪ ಬಾಬು ಅವರು ಚಿತ್ರನಟ ಜಗ್ಗೇಶ್ ಅವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಜಗ್ಗೇಶ್ ಅವರು ಕೂಡಲೇ ಕೇಂದ್ರ ಸಚಿವ ಸದಾನಂದ ಗೌಡರಿಗೆ ಮಾಹಿತಿ ನೀಡಿ ಅಲ್ಲಿ ವಂಚಕರ ಕೈಯಲ್ಲಿ ಸಿಲುಕಿಕೊಂಡಿರುವ ನಿರ್ಮಾಪಕರ ಸಹಾಯಕನನ್ನು ಬಿಡಿಸಿಕೊಳ್ಳಲು ನೆರವು ಕೇಳಿದ್ದಾರೆ.
ಜಗ್ಗೇಶ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಸದಾನಂದ ಗೌಡ ಅವರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿ ಅವರ ಮೂಲಕ ಅಜಯ್ ಮತ್ತು ಸಂಜಯ್ ಪಾಲ್ ಅವರಿಗೆ ನೊಟೀಸು ಕೊಡಿಸಿದ್ದಾರೆ. ಇದರಿಂದ ಕಂಗಾಲಾದ ಪಾಲ್ ದ್ವಯರು ತಮ್ಮ ವಶದಲ್ಲಿದ್ದ ಚಿತ್ರತಂಡದ ವ್ಯಕ್ತಿಯ ಪಾಸ್ ಪೋರ್ಟ್ ಅನ್ನು ಆತನಿಗೆ ಮರಳಿಸಿ ಆತನನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಇದೀಗ ಅಜಯ್ ಪಾಲ್ ಹಾಗೂ ಸಂಜಯ್ ಪಾಲ್ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ವಿವಿಧ ದಂಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ವಂಚಕರು ಬೇರೆ ಬೇರೆ ಕಂಪೆನಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಕುರಿತಾಗಿಯೂ ಇದೀಗ ಶಂಕೆ ವ್ಯಕ್ತವಾಗಿದೆ.
ಈ ಕುರಿತಾಗಿ ಟ್ವೀಟ್ ಒಂದನ್ನು ಮಾಡಿರುವ ಜಗ್ಗೇಶ್ ಅವರು ‘ನನ್ನ ರಂಗದವರಿಗೆ ಭುಜ ಕೊಡುವುದು ನನ್ನ ಕರ್ತವ್ಯ’ ಎಂದು ಬರೆದುಕೊಂಡಿದ್ದಾರೆ.