Advertisement

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

10:38 AM Nov 01, 2024 | Team Udayavani |

ಕೋಲಾರ: ಹರನಿಗೆ ಕೈಲಾಸ, ಹರಿಗೆ ವೈಕುಂಠ. ಆದರೆ, ಕೋಲಾರದ ಹರಿಹರಪ್ರಿಯರಿಗೆ ಪುಸ್ತಕಗಳೇ ಪ್ರಪಂಚ!

Advertisement

ಹೌದು, ಪುಸ್ತಕಗಳನ್ನು ಮಕ್ಕಳೆಂದು ಭಾವಿಸಿ ಐದು ಲಕ್ಷ ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಪೋಷಿಸಲು ಇಳಿ ವಯಸ್ಸಿನಲ್ಲಿಯೂ ಕುಟುಂಬದಿಂದ ದೂರವಿದ್ದು, ಸಮಸ್ಯೆಗಳ ನಡುವೆಯೇ ಹೆಣಗಾಡುತ್ತಿರುವ ಅಪ್ಪಟ ಕನ್ನಡ ಪುಸ್ತಕ ಪ್ರೇಮಿ ಹರಿಹರಪ್ರಿಯ. ಬದುಕಿನ ಸಂಧ್ಯಾಕಾಲದಲ್ಲೂ ಸುಸಜ್ಜಿತ ಪುಸ್ತಕ ಮನೆಗೆ ನೆರವು ಸಿಗುವ ಆಶಾಭಾವನೆಯಿಂದ ಹೋರಾಟ ಸಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಪುಸ್ತಕ ಇಡಲು ಬಾಡಿಗೆ ಮನೆ ಸಾಕಾಗದೆ ಕೋಲಾರದ ಮಾಲೂರಿನಲ್ಲಿ ಮನೆ ಕಟ್ಟಿ ಪುಸ್ತಕದ ಜತೆ ಬದುತ್ತಿದ್ದಾರೆ.

ತಮ್ಮಲ್ಲಿದ್ದ ಪುಸ್ತಕಗಳನ್ನು ಆರು ಟ್ರಕ್‌ಗಳಲ್ಲಿ ತುಂಬಿಸಿಕೊಂಡು ಬಂದು ಅಲ್ಲಿ ಪೇರಿಸಿಟ್ಟು ಪುಸ್ತಕ ಮನೆ ಎಂದು ಹೆಸರಿಟ್ಟರು. ಪುಟ್ಟ ಮನೆಯಲ್ಲಿ ಪುಸ್ತಕಗಳ ಸಂಗ್ರಹಣೆಗೆ ಪ್ರದರ್ಶನಕ್ಕೆ ಜಾಗ ಸಾಕಾಗುತ್ತಿಲ್ಲ.

ತಮ್ಮಲ್ಲಿರುವ ಪುಸ್ತಕಗಳನ್ನೆಲ್ಲ ಎರಡು ಎಕ್ರೆ ಪ್ರದೇಶದಲ್ಲಿ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಿ, ಸುಮಾರು 500 ಪಾರದರ್ಶಕ ಬೀರುಗಳ ಮೂಲಕ ಅಕಾರಾದಿಯಾಗಿ ಪ್ರದರ್ಶನಕ್ಕಿಡಬೇಕು. ಹರಿಹರಪ್ರಿಯರಿಗೆ ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿದ್ದರೂ, ತಮ್ಮ ಪುಸ್ತಕಗಳಿಗೊಂದು ಶಾಶ್ವತ ನೆಲೆ ಸಿಕ್ಕಿಲ್ಲ ಎಂಬ ಕೊರಗು ಕಾಡುತ್ತಲೇ ಇದೆ.

Advertisement

ಮೂಲತಃ ಕೋಲಾರ ತಾಲೂಕಿನ ಹೊಳಲಿ ಗ್ರಾಮದವರು. ತಂದೆ ಸ್ವಾತಂತ್ರ್ಯ ಹೋರಾಟಗಾರರು, ಹರಿಹರಪ್ರಿಯ ಹುಟ್ಟಿದ್ದು ಮೈಸೂರು, ಬೆಳೆದಿದ್ದು ಮಂಡ್ಯ ಜಿಲ್ಲೆಯಲ್ಲಿ. ತಂದೆ ಸಂಗ್ರಹಿಸಿದ್ದ ಪುಸ್ತಕಗಳನ್ನು ಹತ್ತರ ವಯಸ್ಸಿನಲ್ಲಿಯೇ ಓದುತ್ತಾ ಪುಸ್ತಕ ಪ್ರಿಯರಾದರು. ಶಾಲೆಗೆ ಹೋಗಿದ್ದು ಪಿಯುಸಿವರೆಗೆ ಮಾತ್ರ.

ಕುವೆಂಪು ನಿಕಟವರ್ತಿ: ಪುಸ್ತಕಗಳ ಓದಿನ ಮೂಲಕವೇ ಕುವೆಂಪು ಸಾಹಿತ್ಯವನ್ನು ಓದಿ ಅವರ ನಿಕಟವರ್ತಿಯಾಗಿದ್ದರು. 16 ವಯಸ್ಸಿಗೆ ಕವನ ಸಂಕಲನ ಹೊರತಂದಿದ್ದರು. ಸುನಂದ ಕಾವ್ಯರೊಂದಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. 1968ರಲ್ಲಿ ಬೆಂಗಳೂರಿಗೆ ಆಗಮಿಸಿ ಆರು ದಶಕಗಳ ಕಾಲ ಹೋರಾಟ, ಭಾಷಣ, ಪುಸ್ತಕಗಳ ಬರವಣಿಗೆಯಲ್ಲಿ ನಿರತರಾಗಿ 110 ಪುಸ್ತಕ ಬರೆದಿದ್ದಾರೆ.

ಪುಸ್ತಕಗಳ ಸಂಗ್ರಹ ಅಧ್ಯಯನ:  ಮೈಸೂರಿನಲ್ಲಿ ತಾತಾಚಾರ್ಯ ಸಂಸ್ಥೆಗೆ ಟ್ಯೂಶನ್‌ಗೆ ಎಂದು ಹೋದವರು ಕುವೆಂಪು ಅವರನ್ನು 1968ರಲ್ಲಿ ಭೇಟಿಯಾಗಿದ್ದರು. ಹೀಗೆ ಕನ್ನಡ ವಿವಿಧ ಸಾಹಿತಿಗಳ ಪುಸ್ತಕ ಸಂಗ್ರಹಿಸುತ್ತಾ ಈ 6 ದಶಕಗಳಲ್ಲಿ ಕನ್ನ ಡದ 500 ಸಾಹಿತಿಗಳ  ಪುಸ್ತಕ ಸಂಗ್ರಹಿಸಿದ್ದಾರೆ.

ಸಂಗ್ರಹ ಪ್ರದರ್ಶನ:  ಕನ್ನಡ ಸಂಸ್ಕೃತಿ ಇಲಾಖೆ ಆಯುಕ್ತರಾಗಿದ್ದ ಡಾ| ಪಿ.ಎಸ್‌.ರಾಮಾನುಜಂ ಪುಸ್ತಕಗಳ ಅಧ್ಯಯನಕ್ಕಾಗಿ ಹರಿಹರಪ್ರಿಯರ ಮನೆಗೆ ಭೇಟಿ ಕೊಡುತ್ತಿದ್ದರು. ಅವರ ಸಲಹೆ ಹಾಗೂ ಹಡಪದ್‌ ಅವರ ಚಿತ್ರ ಕಲಾಕೃತಿಗಳ ಪ್ರದರ್ಶನದಿಂದ ಪ್ರೇರಣೆಗೊಂಡು ಪುಸ್ತಕ ಪ್ರದರ್ಶನ ಆರಂಭಿಸಿದರು.  ದಿನದ 24 ಗಂಟೆಗಳ ಕಾಲ ಪುಸ್ತಕಗಳ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ತೆರೆದರು. ಆಗಲೇ ಹುಟ್ಟಿದ್ದು ಪುಸ್ತಕ ಮನೆ. ಲಂಕೇಶ್‌ರು ನಿರ್ದೇಶಿಸಿದ ಪಲ್ಲವಿ ಚಲನಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು.

ಇವರ ಸಮಸ್ಯೆಗಳ ಕುರಿತು ಪ್ರಕಾಶಕ ವೀರಕಪುತ್ರ ಶ್ರೀನಿವಾಸ್‌ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಗಮನಸೆಳೆದಿದ್ದಾರಲ್ಲದೆ, ಹರಿಹರ ಪ್ರಿಯ ಅವರ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.

ಪುಸ್ತಕಗಳ   ಅಧ್ಯ ಯನ, ಸಂರಕ್ಷಣೆಗಾಗಿಯೇ 6 ದಶಕಗಳ ಬದುಕು ಸವೆಸಿದ್ದೇನೆ. ಸರಕಾರ 2 ಎಕ್ರೆ ಜಾಗ ಕೊಟ್ಟು ಮುಂದಿನ ಪೀಳಿಗೆಗೆ ಪುಸ್ತಕ ಮನೆ ಉಳಿಸಿಕೊಳ್ಳಲು ನೆರವಾಗಬೇಕು. – ಹರಿಹರಪ್ರಿಯ,  ಮಾಲೂರು

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next