ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿರುವ ಬೆಳಗಾವಿಯಲ್ಲಿ ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನ ಆಚರಿಸಿತು. ಕರ್ನಾಟಕ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಎಂಇಎಸ್ ಕಾರ್ಯಕರ್ತರು, ಬೆಳಗಾವಿ, ಬೀದರ, ಕಾರವಾರ, ನಿಪ್ಪಾಣಿ, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಬೇಕು ಎಂದು ಘೋಷಣೆ ಕೂಗಿ ಪುಂಡಾಟ ಮೆರೆದರು.
ಪ್ರತಿ ವರ್ಷದಂತೆ ಕಪ್ಪು ಬಟ್ಟೆ ಹಾಕಿಕೊಂಡು ರ್ಯಾಲಿ ನಡೆಸಿದ ಎಂಇಎಸ್ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಎದುರೇ ಕರ್ನಾಟಕದ ವಿರುದ್ಧ ಘೋಷಣೆ ಕೂಗಿದರು. ಮಹಾರಾಷ್ಟ್ರ ಸರ್ಕಾರ ನಮ್ಮ ನೋವಿಗೆ ಸ್ಪಂದಿಸದೇ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು. ಬೆಳಗಾವಿಯ ಮರಾಠಿ ಭಾಷಿಕರಿಂದ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಕೂಗು ಹಲವು ವರ್ಷಗಳಿಂದ ಇದ್ದರೂ ಯಾರೂ ಸ್ಪಂದಿಸುತ್ತಿಲ್ಲ.
ಮಹಾರಾಷ್ಟ್ರದ ನಾಯಕರು ನಮ್ಮ ಪರವಾಗಿ ಧ್ವನಿ ಎತ್ತುತ್ತಿಲ್ಲ. ಈ ವರ್ಷ ನಮಗೆ ನ್ಯಾಯ ಸಿಗದಿದ್ದರೆ ಮುಂಬೈ ಅಥವಾ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ, ಎಂಇಎಸ್ ನಾಯಕ ಮನೋಹರ ಕಿಣೇಕರ ಎಚ್ಚರಿಕೆ ನೀಡಿದರು. ಎಂಇಎಸ್ ಕರಾಳ ದಿನಾಚರಣೆ ವಿರುದ್ಧ ಕ್ರಮ: ಸಚಿವ ಸತೀಶ್ ಜಿಲ್ಲಾಡಳಿತದ ಅನುಮತಿ ಇಲ್ಲದಿದ್ದರೂ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ವೇಳೆ ಕರಾಳ ದಿನಾಚರಣೆ ಮಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದರ ಬಗ್ಗೆ ಪರಿಶೀಲನೆ ನಡೆಸಿ ಕರಾಳ ದಿನಾಚರಣೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಿದೆ. ಎಂಇಎಸ್ ನಿಷೇಧ ಮಾಡುವುದರಲ್ಲಿ ಅರ್ಥವಿಲ್ಲ. ಈಗ ಅದು ಹೆಸರಿಗಷ್ಟೇ ಇದೆ. ಪ್ರತಿ ವರ್ಷ ಅದಕ್ಕೆ ಕರಾಳ ದಿನಾಚರಣೆ ಮಾತ್ರ ನೆನಪಾಗುತ್ತದೆ. ಹೀಗಾಗಿ ನಾವು ಅದನ್ನು ನಿಷೇಧ ಮಾಡಿ ಮತ್ತೆ ಜೀವ ಕೊಡುವುದರಲ್ಲಿ ಅರ್ಥವಿಲ್ಲ. ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು. ನಾವು ನಿಷೇಧ ಕ್ರಮ ಕೈಗೊಂಡರೆ ಆಗ ಎಂಇಎಸ್ಗೆ ಮತ್ತೆ ಮಹತ್ವ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅದನ್ನು ನಿಷೇಧ ಮಾಡುವುದಿಲ್ಲ ಎಂದರು.