ಕುಂದಾಪುರ: ಕೋಟೇಶ್ವರದಿಂದ ದಕ್ಷಿಣಾಭಿ ಮುಖವಾಗಿ ರಾ.ಹೆ.66ನ್ನು ಸಂಧಿಸುವ ಮಾರ್ಗದಲ್ಲಿ ಈ ಹಿಂದೆ ಇದ್ದ ವೈ ಜಂಕ್ಷನ್ ಡಿವೈಡರ್‌ನ್ನು ಮುಚ್ಚುಗಡೆ ಮಾಡಿದ ಹಿನ್ನೆಲೆಯಲ್ಲಿ ಕೋಟೇಶ್ವರ,ಕುಂಭಾಶಿ, ಕಡೆಗೆ ಚಲಿಸುವ ಖಾಸಗಿ ಬಸ್ಸುಗಳು ಹಾಗೂ ಇತರ ಘನ ವಾಹನಗಳು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದರಿಂದ ಸಾಕಷ್ಟು ಅಪಘಾತಗಳಿಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಪ್ರತ್ಯೇಕ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಮುಂದಾದ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿ ಚರಮಡಿ ಮೊದಲಾದ ಕಾಮಗಾರಿಗೆ ಚಾಲನೆ ನೀಡಿದರೂ ಪ್ರಸ್ತುತ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೈಚೆಲ್ಲಿ ಕುಳಿತಿರುವುದು ಇಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಆತಂಕದ ಸ್ಥಿತಿ ಉಂಟುಮಾಡಿದೆ.
ಕಾಮಗಾರಿ ಸ್ಥಗಿತ: ಕೋಟೇಶ್ವರ ಪೇಟೆಯಿಂದ ರಾ.ಹೆ.ಗೆ ಕೂಡುತ್ತಿದ್ದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಾಗಿ ಮುಂದೆ ಬೀಜಾಡಿಯಲ್ಲಿರುವ ಜಂಕ್ಷನ್‌ನಲ್ಲಿ ತಿರುಗಿ ರಾ.ಹೆದ್ದಾರಿಯನ್ನು ಸೇರಬೇಕಾದ ಅನಿವಾರ್ಯತೆ ಇರುವುದರಿಂದ ಜನರ ಒತ್ತಾಯಕ್ಕೆ ಗುತ್ತಿಗೆದಾರರು ಸ್ಪಂದಿಸಿ ಈ ಭಾಗದಲ್ಲಿ ಸುಮಾರು 200 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸಲು 2016ನೇ ಅಕ್ಟೋಬರ್‌ನಲ್ಲಿ ಕಾಮಗಾರಿಯನ್ನು ಆರಂಭಿಸಿತ್ತು. ಆದರೆ ಸರ್ವಿಸ್ ರಸ್ತೆಗೆ ಪೂರಕವಾದ ಚರಂಡಿ ಕಾಮಗಾರಿಗಳು ಅರೆಬರೆಯಾಗಿ ನಡೆದರೂ ಪ್ರಸ್ತುತ ಸಂಪೂರ್ಣ ಸ್ಥಗಿತಗೊಂಡ ಸ್ಥಿತಿಯಲ್ಲಿದೆ.
ಅಪಘಾತಕ್ಕೆ ಆಹ್ವಾನ: ಕೋಟೇಶ್ವರದಿಂದ ಬೀಜಾಡಿ, ಕುಂಭಾಶಿ ಕಡೆಗೆ ಹೋಗುವ ಬಹುತೇಕ ವಾಹನಗಳು ರಾ.ಹೆ.ಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುವುದರಿಂದ ಈ ಪ್ರದೇಶದಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದರೂ ಗುತ್ತಿಗೆದಾರರು ಎಚ್ಚತ್ತುಕೊಂಡಿಲ್ಲ. ಪೇಟೆಯಿಂದ ರಾ.ಹೆ.ಗೆ ಬರುವ ವಾಹನವನ್ನು ಗ್ರಹಿಸಲಾರದೇ ಕುಂದಾಪುರದತ್ತ ಸಾಗುವ ವಾಹನಗಳು ಗಲಿಬಿಲಿಯಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಕುಸಿದ ಪುಟ್‌ಪಾತ್: ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಮಳೆಗಾಲದಲ್ಲಿ ರಾ.ಹೆ.ಪಕ್ಕದ ಪುಟ್‌ಪಾತ್ ಕುಸಿದಿದ್ದು ಅಪಾಯಕ್ಕೆ ಮುನ್ಸೂಚನೆ ನೀಡಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಅದಕ್ಕೆ ತಡೆಯನ್ನು ಏರ್ಪಡಿಸಿ ಅಪಾಯ ಸಂಭವಿಸದೇ ಇರುವಂತೆ ಎಚ್ಚರಿಕೆ ವಹಿಸಿದ್ದರು. ಆದರೆ ಕಣಿವೆಯೋಪಾದಿಯಲ್ಲಿ ಈ ಚರಂಡಿ ಕಾಮಗಾರಿಗಳು ನಡೆದಿರುವುದರಿಂದ ರಾತ್ರಿ ವೇಳೆ ವಾಹನಗಳು ಹಾಗೂ ಜನರಿಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು.
ಈ ಭಾಗದಲ್ಲಿ ಸುಮಾರು 200 ಮೀಟರ್ ಉದ್ದದ ಸರ್ವಿಸ್ ರಸ್ತೆಯನ್ನು ನಿರ್ಮಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದರು. ಹಾಗೂ ಕಾಮಗಾರಿಯನ್ನು ಆರಂಭಿಸಿದ್ದರು. ಆದರೆ ಕಾಮಗಾರಿ ಆರಂಭಿಸಿ ಬಹಳಷ್ಟು ಸಮಯವಾದರೂ ಯಾವುದೇ ಪ್ರಗತಿ ಕಾಣಲಿಲ್ಲ ಹಾಗೂ ಪ್ರಸ್ತುತ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಸ್ಥಳೀಯ ವ್ಯವಹಾರಸ್ಥರಿಗೆ ಬಹಳಷ್ಟು ತೊಂದರೆಯಾಗಿದೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ. ಆದ್ದರಿಂದ ಕೂಡಲೇ ಕಾಮಗಾರಿಯನ್ನು ಆರಂಭಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
– ಉಮೇಶ್ ಪ್ರಭು, ಉದ್ಯಮಿ ಬೀಜಾಡಿ
– ಉದಯ ಆಚಾರ್ ಸಾಸ್ತಾನ