Advertisement

ಕೋಟ: ವ್ಯವಸ್ಥಿತ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಬೇಡಿಕೆ

07:00 PM Oct 26, 2021 | Team Udayavani |

ಕೋಟ: ಇಲ್ಲಿನ ಪಶುವೈದ್ಯ ಆಸ್ಪತ್ರೆಯ ಬಳಿ ಶತಮಾನದ ಇತಿಹಾಸದ, ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಸರಕಾರಿ ಪ್ರವಾಸಿ ಮಂದಿರವೊಂದಿದೆ. ಪ್ರಸ್ತುತ ಈ ಕಟ್ಟಡ ನಿರ್ವಹಣೆ ಇಲ್ಲದೆ ಸೊರಗಿದ್ದು, ಶಿಥಿಲಾವಸ್ಥೆ ತಲುಪಿ ಭೂತಬಂಗಲೆಯಂತಾಗಿದೆ. ಕೋಟ ಬೆಳೆಯುತ್ತಿರುವ ಊರು ಹಾಗೂ ಹೆಸರುವಾಸಿ ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳಿರುವ ಪ್ರದೇಶವಾಗಿದೆ. ಹೀಗಾಗಿ ಇಲ್ಲಿ ವ್ಯವಸ್ಥಿತ ಪ್ರವಾಸಿ ಮಂದಿರಯೊಂದು ಅಗತ್ಯವಿದೆ ಎನ್ನುವ ಬೇಡಿಕೆ ಸಾರ್ವಜನಿಕ ವಲಯದಲ್ಲಿದೆ.

Advertisement

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್‌ ಅಧಿಕಾರಿಗಳು ಸರಕಾರದ ಕೆಲಸ ಕಾರ್ಯಗಳಿಗಾಗಿ ಕುದುರೆಗಾಡಿ, ಎತ್ತಿನಗಾಡಿಗಳಲ್ಲಿ ಕೋಟ ಆಸುಪಾಸಿನ ಊರುಗಳಿಗೆ ಆಗಮಿಸುತ್ತಿದ್ದು ಹಾಗೂ ಅವರು ಇದೇ ಪ್ರವಾಸಿ ಬಂಗಲೆಯಲ್ಲಿ ಉಳಿಯುತ್ತಿದ್ದರು ಮತ್ತು ಕಂಪೆನಿ ಸರಕಾರದ ಆಪ್ತರು, ಪ್ರವಾಸಿಗರು ಬಂದಾಗ ಕೂಡ ಇಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುತಿತ್ತು ಎನ್ನಲಾಗಿದೆ. ದಶಕದ ಹಿಂದೆ ಉಡುಪಿ ತಾ.ಪಂ. ಅಧೀನದಲ್ಲಿ ಈ ಪ್ರವಾಸಿ ಮಂದಿರ ನಿರ್ವಹಣೆಯಾಗುತ್ತಿತ್ತು ಹಾಗೂ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ದಿನವೊಂದಕ್ಕೆ 50 ರೂ. ಬಾಡಿಗೆ ಪಡೆಯಲಾಗುತ್ತಿತ್ತು. ಕ್ರಮೇಣ ಪ್ರವಾಸಿ ಮಂದಿರಕ್ಕೆ ಆಗಮಿಸುವವರ ಸಂಖ್ಯೆ ಕುಸಿಯುವುದರ ಜತೆಗೆ, ಉಸ್ತುವಾರಿ ನೋಡಿಕೊಳ್ಳುವವರಿಲ್ಲದೆ ಸಂಪೂರ್ಣ ಹಾಳಾಗಿದೆ ಹಾಗೂ 15-20 ವರ್ಷಗಳಿಂದ ಕಾರ್ಯಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಶಿಥಿಲಾವಸ್ಥೆ; ಅಕ್ರಮ ಚಟುವಟಿಕೆ
ಪ್ರವಾಸಿ ಮಂದಿರದ ಬಾಗಿಲುಗಳಿಗೆ ಗೆದ್ದಲು ಹಿಡಿದಿದ್ದು, ಕೋಣೆಯೊಳಗೆ ಕಸದ ರಾಶಿ ಹಾಗೂ ಸುತ್ತಲು ಪೊದೆ ಆವರಿಸಿದೆ. ಬಂಗಲೆಗೆ ಹೊಂದಿಕೊಂಡಿರುವ ಶೌಚಾಲಯ, ನಿರ್ವಹಣೆಗಾರರ ಕೊಠಡಿ ಕುಸಿದಿದೆ. ಈ ಕಟ್ಟಡ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡುಗೊಂಡಿದ್ದು, ಎರಡು ಆತ್ಮಹತ್ಯೆಗಳಾಗಿವೆ.

ಇದನ್ನೂ ಓದಿ:ಇಂದೂ ಜಾಮೀನು ಸಿಕ್ಕಿಲ್ಲ…ಆರ್ಯನ್ ಖಾನ್ ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿದ ಹೈಕೋರ್ಟ್

ಪ್ರವಾಸಿ ಮಂದಿರ ಯಾಕೆ ಬೇಕು
ಮಾಬುಕಳದಿಂದ ತೆಕ್ಕಟ್ಟೆಯ ತನಕ ಹಾಗೂ ಕೋಟದಿಂದ ಆವರ್ಸೆಯ ತನಕ ಕೋಟ ಹೋಬಳಿ ವ್ಯಾಪ್ತಿ ಹೊಂದಿದ್ದು, 31 ಗ್ರಾಮ, 14 ಗ್ರಾ.ಪಂ., ಸಾಲಿಗ್ರಾಮ ಪ.ಪಂ. ಈ ಹೋಬಳಿಗೆ ಸೇರಿದೆ ಮತ್ತು ಒಟ್ಟು 96,556 ಜನಸಂಖ್ಯೆ ಇದೆ. ಕೋಟದಲ್ಲಿ ಪ್ರಸಿದ್ಧವಾದ ಅಮೃತೇಶ್ವರೀ ದೇಗುಲ, ಸಾಲಿಗ್ರಾಮದಲ್ಲಿ ಗುರುನರಸಿಂಹ ದೇಗುಲ, ಕಾರಂತ ಕಲಾಭವನ, ಕಡಲ ತೀರ ಮುಂತಾದ ಪ್ರವಾಸಿ ತಾಣಗಳಿದ್ದು ನೂರಾರು ಮಂದಿ ಇಲ್ಲಗೆ ಭೇಟಿ ನೀಡುತ್ತಾರೆ ಹಾಗೂ ಹಲವಾರು ಸರಕಾರಿ ಕಚೇರಿಗಳಿದ್ದು ಸರಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಸಚಿವರು ಭೇಟಿ ನೀಡಿದಾಗ ಸಭೆ ನಡೆಸಲು ಸರಿಯಾದ ವ್ಯವಸ್ಥೆಗಳಿಲ್ಲ. ಭವಿಷ್ಯದಲ್ಲಿ ಕೋಟವನ್ನು ತಾಲೂಕು ಕೇಂದ್ರವಾಗಿಸುವ ನಿಟ್ಟಿನಲ್ಲೂ ಸರಕಾರದ ಮುಂದೆ ಬೇಡಿಕೆ ಇದೆ. ಈ ಎಲ್ಲ ಕಾರಣಕ್ಕೆ ಕೋಟದಲ್ಲಿ ವ್ಯವಸ್ಥಿತವಾದ ಪ್ರವಾಸಿ ಮಂದಿರವೊಂದು ಅಗತ್ಯವಿದೆ.

Advertisement

ಪ್ರವಾಸಿ ಮಂದಿರ ಅಗತ್ಯ
ಕೋಟ ಬೆಳೆಯುತ್ತಿರುವ ಊರು ಹಾಗೂ ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳಿರುವ ಪ್ರದೇಶವಾಗಿದೆ. ಭವಿಷ್ಯದಲ್ಲಿ ಈ ಪ್ರದೇಶ ಇನ್ನೂ ಬೆಳವಣಿಗೆಗೆ ಅವಕಾಶವಿದೆ. ಹೀಗಾಗಿ ಶೀಘ್ರದಲ್ಲಿ ಈಗಿರುವ ಪ್ರವಾಸಿ ಮಂದಿರವನ್ನು ತೆರವುಗೊಳಿಸಿ ವ್ಯವಸ್ಥಿತ ಪ್ರವಾಸಿ ಮಂದಿರವನ್ನು ನಿರ್ಮಿಸಬೇಕಿದೆ.
ಕೋಟ ಗಿರೀಶ್‌ ನಾಯಕ್‌,
ಸಾಮಾಜಿಕ ಕಾರ್ಯಕರ್ತ

ಪ್ರಸ್ತಾವನೆ ಸಲ್ಲಿಕೆ
ಕೋಟದಲ್ಲಿ ಪ್ರವಾಸಿ ಮಂದಿರ ಅಗತ್ಯವಾಗಿ ಬೇಕಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಹಾಗೂ ಸಮಗ್ರ ಕಡತ ಸಲ್ಲಿಕೆಯಾಗಿದೆ. ಸಚಿವರಲ್ಲಿ ಈ ಬಗ್ಗೆ ವಿಶೇಷ ಮನವಿ ಮಾಡಿದ್ದೇನೆ. ಶೀಘ್ರ ದಲ್ಲಿ ಮಂಜೂರಾಗುವ ಸಾಧ್ಯತೆ ಇದೆ.
– ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next