Advertisement

ಪುರಾತನ ಹೊಂಡಕ್ಕೆ ಬೇಕಿದೆ ಕಾಯಕಲ್ಪ

03:50 PM Sep 05, 2022 | Team Udayavani |

ಕುಕನೂರು: ತಾಲೂಕಿನ ಸುತ್ತಮುತ್ತಲಿನ ಸುಮಾರು 15 ಗ್ರಾಪಂಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ಅಮೃತ ಸರೋವರ, ಕೆರೆ ಕಟ್ಟೆ, ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ, ಆದರೆ ಪಟ್ಟಣದ ಸೌಂದರ್ಯ, ಜಲಮೂಲ ರಕ್ಷಣೆಗಾಗಿ ಯಾವುದೇ ಹೊಂಡ, ಕೆರೆ, ಉದ್ಯಾನವನ, ಅಭಿವೃದ್ಧಿಗೊಳ್ಳದಿರುವುದು ಖೇದಕರ ಸಂಗತಿ.

Advertisement

ನಮ್ಮ ಪೂರ್ವಜರು ನಿರ್ಮಿಸಿದ ಹೊಂಡ(ಕೊಂಡ) ವು ಸಂಪ್ರದಾಯ, ಸಂಸ್ಕಾರ, ವಿಧಿ, ವಿಧಾನಗಳನ್ನು ಪೂರೈಸುವ ಭಾವೈಕ್ಯತೆಯ ಸ್ಥಳವಾಗಿತ್ತು. ಸುಮಾರು 15 ಎಕರೆ ವಿಸ್ತೀರ್ಣದ ಈ ಹೊಂಡ ಭರ್ತಿಯಾದರೆ ಸುತ್ತಲಿನ ಸಾವಿರಾರು ಎಕರೆ ಭೂಮಿಯ ತೇವಾಂಶ ವೃದ್ಧಿಸುತ್ತಿತ್ತು. ಆಗೀನ ಕುಡಿಯುವ ನೀರಿನ ನೀಲಪ್ಪನ ಬಾವಿ, ತಿಪ್ಪನಬಾವಿ ಇನ್ನಿತರ ಕೃಷಿ ಭಾವಿಗಳಲ್ಲಿ ಜೀವಜಲ ಹೆಚ್ಚಳವಾಗುತ್ತಿತ್ತು. ಬೇಸಿಗೆಯಲ್ಲಿ ಮಕ್ಕಳ ಜಲ ಕ್ರೀಡೆಗೆ ಸಹಕಾರಿಯಾಗಿತ್ತು. ರೈತರ ದನಕರುಗಳ ಸ್ವಚ್ಛತೆ, ಬಟ್ಟೆ ತೊಳೆಯಲು, ಜಾತ್ರೆ, ಹಬ್ಬ ಹರಿದಿನಗಳಲ್ಲಿ ವಿವಿಧ ಮೂರ್ತಿಗಳ ವಿಸರ್ಜನೆಗೆ ಧಾರ್ಮಿಕ ಕಾರ್ಯದ ಕೇಂದ್ರ ಸ್ಥಳವಾಗಿ ಬಿಂಬಿತವಾಗಿತ್ತು. ಹೊಂಡದ ಫಲವತ್ತಾದ ಕೆಂಪು ಮಣ್ಣನ್ನು ಮಣ್ಣೆತ್ತು, ಬಸವಣ್ಣ, ನಾಗರ, ಗಣೇಶ ಮೂರ್ತಿ ತಯಾರಿಕೆಗೆ ಬಳಕೆ ಮಾಡುತ್ತಿದ್ದರು.

ದಶಕಗಳಿಂದ ಈ ಹೊಂಡಕ್ಕೆ ನೀರು ಹರಿದು ಬರುವ ಮಾರ್ಗಗಳು ಬಂದಾಗಿ, ನೀರು ನಿಲ್ಲದೇ ಭತ್ತುತ್ತಿದೆ. ಇದರಿಂದ ಸುತ್ತಮುತ್ತಲಿನ ಬಾವಿ ಬರಡಾಗುತ್ತಿವೆ. ಇದಲ್ಲದೇ ಪ್ರಭಾವಿಗಳು ಹೊಂಡದ ಒಡಲ ಬಗೆದು ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಸ್ತೆಯಿಂದ ತೆಗೆದ ನಿರುಪಯುಕ್ತ ಕಸದ ರಾಶಿಯನ್ನು ಹೊಂಡಕ್ಕೆ ಹಾಕುತ್ತಿರುವುದು ದುರಂತ ಸಂಗತಿ.

ಕಾಯಕಲ್ಪಕ್ಕೆ ಮುಂದಾಗಬೇಕಿದೆ: ಪೂರ್ವಜರು ನಿರ್ಮಿಸಿದ ಕೆರೆ, ಕಟ್ಟೆ ಉಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪಟ್ಟಣದ ಹೊಂಡ, ನೃಪತುಂಗ ಕೆರೆಯ ಜೀರ್ಣೋದ್ಧಾರಗೊಳಿಸಬೇಕಿದೆ. ಜನಪ್ರತಿನಿಧಿಗಳು ಸುಂದರವಾದ ಉದ್ಯಾನವನ ನಿರ್ಮಿಸಿ, ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿದರೆ ಪಟ್ಟಣದ ಸೌಂದರ್ಯ ವೃದ್ಧಿಸುತ್ತದೆ. ಇಡೀ ಪಟ್ಟಣದ ಜನತೆಗೆ ವಾಯು ವಿಹಾರ ಸ್ಥಳವಾಗಿ ಮಾದರಿ ಪಟ್ಟಣವಾಗುತ್ತದೆ ಎನ್ನುವುದು ಪಟ್ಟಣದ ಜನತೆ ಅಭಿಲಾಷೆ. ಗದಗ ರಸ್ತೆಯಲ್ಲರುವ ನೃಪತುಂಗ ಕೆರೆ ಹೂಳೆತ್ತಿಸಿದರೆ ನೀರಿನ ಸಂಗ್ರಹ ಹೆಚ್ಚಳವಾಗಿ ಅಂತರ್ಜಲಮಟ್ಟ ಕಡಿಮೆಯಾಗಿ ರೈತರಿಗೆ ಸಹಕಾರಿಯಾಗಲಿದೆ.

ಪುರಾತನ ಹೊಂಡ ಮತ್ತು ನೃಪತುಂಗ ಕೆರೆಗಳಲ್ಲಿ ನೀರು ಸಂಗ್ರಹದಿಂದ ಪಟ್ಟಣದ ತೇವಾಂಶ ರಕ್ಷಣೆಗೆ ಸಹಕಾರಿಯಾಗಿದೆ.ಆದರೆ ಇತ್ತೀಚಿಗೆ ಹೊಂಡ ಮತ್ತು ಕೆರೆಯಲ್ಲಿ ಹೂಳು ತುಂಬಿರುವ ಕಾರಣ ನೀರು ಸಂಗ್ರಹ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಿ ಪುರಾತನ ಹೊಂಡ ಮತ್ತು ನೃಪತುಂಗ ಕೆರೆಯ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು. –ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್‌, ಪಪಂ ಆಡಳಿತ ಅಧಿಕಾರಿ

Advertisement

-ಬಸವರಾಜ ಕೋನಾರಿ

Advertisement

Udayavani is now on Telegram. Click here to join our channel and stay updated with the latest news.

Next