Advertisement

Kota: ರಾ.ಹೆ. ಪಕ್ಕದಲ್ಲಿ ನಿರ್ವಹಣೆ ಇಲ್ಲದೆ ಭಾರೀ ಸಮಸ್ಯೆ; ಸೈಕಲ್‌ ಸವಾರರಿಗೆ ಅಪಾಯ

03:39 PM Nov 07, 2024 | Team Udayavani |

ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನಗಳು ಸಂಚರಿಸಲಾಗದ ದುಃಸ್ಥಿತಿ ಇರುವ ಕುರಿತು ಸಾಕಷ್ಟು ದೂರುಗಳಿದೆ. ಇಷ್ಟು ಮಾತ್ರವಲ್ಲದೆ ಪಡುಬಿದ್ರೆಯಿಂದ-ಕುಂದಾಪುರ ತನಕ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲೂ ಸಾಲು-ಸಾಲು ಹೊಂಡಗಳು ಸೃಷ್ಟಿಯಾಗಿದ್ದು ಅಲ್ಲಿಯೂ ಪಾದಚಾರಿಗಳು, ಸೈಕಲ್‌ ಮೊದಲಾದ ಲಘು ವಾಹನಗಳು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ಇದೆ.

Advertisement

ಮುಖ್ಯವಾಗಿ ಟ್ರಕ್‌, ಲಾರಿ ಮೊದಲಾದ ವಾಹನಗಳು ಹೆಚ್ಚು ನಿಲುಗಡೆಯಾಗುವ ಕಡೆಗಳಲ್ಲಿ ಟೋಲ್‌ಗೇಟ್‌ಗಳ ಆಸುಪಾಸಿನಲ್ಲಿ, ಹೊಟೇಲ್‌, ಬಾರ್‌ಗಳು ಇರುವ ಕಡೆಗಳಲ್ಲಿ ಈ ಸಮಸ್ಯೆ ಇದೆ.

ಮೀನು ಲಾರಿ ಮುಂತಾದ ವಾಹನಗಳು ನಿಲ್ಲುವುದರಿಂದ ಕೊಳಚೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ ಮತ್ತು ಕೆಲವು ಕಡೆಗಳಲ್ಲಿ ಆಳವಾದ ಹೊಂಡಗಳಿದ್ದು ಬೈಕ್‌, ಸೈಕಲ್‌ ಸವಾರರು ಎಡವಿದರೆ ಬಿದ್ದು ಗಾಯಗಳಾಗುವ ಸ್ಥಿತಿ ಇದೆ. ಹೀಗೆ ಮಳೆಗಾಲದಲ್ಲಿ ಹೊಂಡದ ಆಳ ತಿಳಿಯದೆ ಎಡವಿ ಬೀಳುವ ಸನ್ನಿವೇಶಗಳು ಎಲ್ಲ ಕಡೆಗಳಲ್ಲಿ ಕಂಡು ಬರುತ್ತದೆ.

ಇದೇ ಕಾರಣಕ್ಕೆ ಅಪಘಾತ
ಪಾದಚಾರಿ ಮಾರ್ಗದಲ್ಲಿ ಹೊಂಡಗಳಿದೆ ಎನ್ನುವ ಕಾರಣಕ್ಕೆ ಪಾದಚಾರಿಗಳು, ಸೈಕಲ್‌ ಸವಾರರು ಪಾದಚಾರಿ ಮಾರ್ಗವನ್ನು ಬಿಟ್ಟು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಾರೆ. ಆಗ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಢಿಕ್ಕಿಯಾಗಿ ಅಪಘಾತ ನಡೆದು ಹಲವಾರು ಜೀವ ಹಾನಿಯಾದ ಉದಾಹರಣೆ ಕೂಡ ಇದೆ. ಹೀಗಾಗಿ ಪಾದಚಾರಿ ಮಾರ್ಗವನ್ನೂ ತತ್‌ಕ್ಷಣ ದುರಸ್ತಿ ಮಾಡಬೇಕೆಂಬ ಆಗ್ರಹವಿದೆ.

11ವರ್ಷಗಳಿಂದ ನಿರ್ವಹಣೆ ಇಲ್ಲ
ಸುಮಾರು 11 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ಸಂದರ್ಭ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಅನಂತರದಲ್ಲಿ ಇದರ ನಿರ್ವಹಣೆಯ ಬಗ್ಗೆ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ದೂರು ನೀಡಿದರೆ ಚರಂಡಿಯಲ್ಲಿರುವ ಕೊಳಚೆ ಮಣ್ಣನ್ನೇ ರಸ್ತೆಗೆ ಹಾಕಿ ಮತ್ತಷ್ಟು ಸಮಸ್ಯೆ ಉಂಟು ಮಾಡಿದ ಉದಾಹರಣೆಗಳು ಇದೆ ಎನ್ನುತ್ತಾರೆ ಸಾಸ್ತಾನದ ಅಲ್ವಿನ್‌
ಅಂದ್ರಾದೆ ಅವರು.

Advertisement

ಪರಿಶೀಲಿಸಿ ಕ್ರಮ
ಎಲ್ಲೆಲ್ಲಿ ಈ ರೀತಿಯ ಹೊಂಡಗಳಿದೆ ಎನ್ನುವುದನ್ನು ಪರಿಶೀಲಿಸಿ ಪಾದಚಾರಿಗಳಿಗೆ ಸಂಚಾರಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ದುರಸ್ತಿ ನಡೆಸಲು ಕ್ರಮ ಕೈಗೊಳ್ಳಲಾಗುವುದು.-ತಿಮ್ಮಯ್ಯ, ಉಡುಪಿ ಜಿಲ್ಲಾ ಟೋಲ್‌ಗ‌ಳ ಮ್ಯಾನೇಜರ್‌

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next