Advertisement

Koppal: ತುಂಗಭದ್ರಾ ಅಣೆಕಟ್ಟೆಯ 33 ಕ್ರೆಸ್ಟ್‌ ಗೇಟ್‌ ಬದಲಿಗೆ ಚಿಂತನೆ

02:56 PM Aug 21, 2024 | Team Udayavani |

ಕೊಪ್ಪಳ: ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಈಚೆಗೆ 19ನೇ ಕ್ರೆಸ್ಟ್‌ಗೇಟ್‌ ಮುರಿದು ದೊಡ್ಡ ಅವಘಡ ಸಂಭವಿಸಿದ ಬೆನ್ನಲ್ಲೇ ಡ್ಯಾಂನ ಎಲ್ಲ 33 ಕ್ರೆಸ್ಟ್ ಗೇಟ್‌ಗಳ ಬದಲಿಸುವ ಚಿಂತನೆ ಆರಂಭವಾಗಿದೆ. ಈ ಕುರಿತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಇಂಗಿತ ವ್ಯಕ್ತಪಡಿಸಿದ್ದು, ಈ ಕುರಿತು ತುಂಗಭದ್ರಾ ಮಂಡಳಿ ಒಪ್ಪಿಗೆ ಪಡೆಯಲು ಯೋಜಿಸಿದ್ದಾರೆ. ‌

Advertisement

ತುಂಗಭದ್ರಾ ಜಲಾಶಯ ಬಯಲು ಸೀಮೆಯ ಲಕ್ಷಾಂತರ ಜನರ ಜೀವನಾಡಿಯಾಗಿ ಬದುಕನ್ನು ರೂಪಿಸಿಕೊಟ್ಟಿದೆ. ಮದ್ರಾಸ್‌ ಹಾಗೂ ನಿಜಾಮ್‌ ಸರ್ಕಾರದ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿರುವ ಈ ಜಲಾಶಯಕ್ಕೀಗ 70 ವರ್ಷ ವಯಸ್ಸಾಗಿದೆ. ಹಾಗಾಗಿ ಈ ಡ್ಯಾಂ ಅನ್ನು ಮುಂದಿನ ಪೀಳಿಗೆವರೆಗೂ ಕಾಪಾಡಿಕೊಳ್ಳಬೇಕಿದೆ. ತುಂಗಭದ್ರಾ ಜಲಾಶಯದಲ್ಲಿ ಈಚೆಗೆ ನಡೆದ 19ನೇ ಕ್ರೆಸ್ಟ್ ಗೇಟ್‌ ಮುರಿದ ಪ್ರಕರಣ ಇಡೀ ನಾಡನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಅಲ್ಲದೇ ಕರ್ನಾಟಕ, ಆಂಧ್ರ, ತೆಲಂಗಾಣದ ಲಕ್ಷಾಂತರ ಜನರು ಒಂದು ವಾರಗಳ ಕಾಲ ಆತಂಕದಲ್ಲಿಯೇ ಕಾಲ ಕಳೆದಿದ್ದರು. ತಜ್ಞ ಕನ್ನಯ್ಯ ನಾಯ್ಡು ನೈಪುಣ್ಯತೆಯಿಂದ ಡ್ಯಾಂನಲ್ಲಿ ನೀರು ಉಳಿಯುವಂತಾಯಿತು.

ತಜ್ಞ ಕನ್ನಯ್ಯ ನಾಯ್ಡು ಹೇಳುವ ಪ್ರಕಾರ, ಡ್ಯಾಂನ ಆಯಸ್ಸು 100 ವರ್ಷವಾದರೆ, ಆ ಡ್ಯಾಂನ ಕ್ರೆಸ್ಟ್‌ಗೇಟ್‌ಗಳ ಆಯಸ್ಸು 45 ವರ್ಷಗಳಷ್ಟಾಗಿವೆ. ಈಗಾಗಲೇ ತುಂಗಭದ್ರಾ ಡ್ಯಾಂಗೆ 70 ವರ್ಷದಷ್ಟು ವಯಸ್ಸಾಗಿದೆ. ಇಷ್ಟಾದರೂ ಈವರೆಗೂ ಕ್ರೆಸ್ಟ್‌ಗೇಟ್‌ಗಳು ಸುಸ್ಥಿತಿಯಲ್ಲಿದ್ದವು. ಡ್ಯಾಂನ ನೂರು ವರ್ಷದ ಆಯಸ್ಸಿನಲ್ಲಿ ಎರಡು ಬಾರಿ ಕ್ರೆಸ್ಟ್‌ಗೇಟ್‌ ಬದಲಿಸಬೇಕು ಎಂಬುದು ತಜ್ಞರ ಅಭಿಮತವಾಗಿದೆ. ಆದರೆ ಆಡಳಿತ ಮಾಡುವ ಸರ್ಕಾರಗಳು ಡ್ಯಾಂಗಳ ಬಗ್ಗೆ ಅಷ್ಟೇನು ಕಾಳಜಿ ಕೊಡದ ಕಾರಣ ಈಗ ಕ್ರೆಸ್ಟ್‌ಗೇಟ್‌ ಮುರಿದು ಅವಘಡ ಸಂಭವಿಸುವಂತಾಗಿದೆ. ಈ ಅವಘಡ ನಡೆದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಡ್ಯಾಂಗಳ ಬಗ್ಗೆ ಕಾಳಜಿ ವಹಿಸಲು ಮುಂದಾಗಿದೆ.

ರಾಜ್ಯ ಸರ್ಕಾರದಿಂದ ವಿಶೇಷ ಬಜೆಟ್‌: ತುಂಗಭದ್ರಾ ಡ್ಯಾಂನಲ್ಲಿ 33 ಕ್ರೆಸ್ಟ್‌ಗೇಟ್‌ ಗಳಿವೆ. ಈ ಎಲ್ಲ ಗೇಟ್‌ಗಳನ್ನು ಬದಲಾವಣೆ ಮಾಡಿ ಹೊಸ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಕೆ ಮಾಡುವ ಬಗ್ಗೆ ಸಚಿವ ಶಿವರಾಜ ತಂಗಡಗಿ ಇಂಗಿತ ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯ ಜತೆ ಮಾತನಾಡಿ 33 ಕ್ರೆಸ್ಟ್‌ಗೇಟ್‌ಗಳಿಗೆ 250ರಿಂದ 300 ಕೋಟಿ ರೂ. ವಿಶೇಷ ಅನುದಾನ ಬಜೆಟ್‌ನಲ್ಲಿ ಮೀಸಲಿರಿಸಿ ಗೇಟ್‌ ಗಳ ಬದಲಾವಣೆ ಮಾಡುವ ಅವಶ್ಯಕತೆಯಿದೆ ಎಂದಿದ್ದಾರೆ.

ಗೇಟ್‌ ಬದಲಿಗೆ ಕೇಂದ್ರದ ಒಪ್ಪಿಗೆ ಬೇಕು: ತುಂಗಭದ್ರಾ ಜಲಾಶಯವು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳ ನಡುವೆ ಇದ್ದು ಇಲ್ಲಿ ಏನೇ ಮಾಡಬೇಕೆಂದರೂ ಕೆಲವೊಂದು ನಿಯಮಗಳ ಅಡಿಯಲ್ಲೇ ಮಾಡಬೇಕಾದ ಅವಶ್ಯಕತೆಯಿದೆ. ಯಾವುದೇ ಸ್ವಂತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಗಭದ್ರಾ ಮಂಡಳಿಯು ಕೇಂದ್ರ ಸರ್ಕಾರದ ಅ ಧೀನದಡಿ ಬರಲಿದೆ. ಇಲ್ಲಿ ತುಂಗಭದ್ರಾ ಡ್ಯಾಂನ ಒಂದು ಸಣ್ಣ ಕೆಲಸಕ್ಕೂ ಮಂಡಳಿಯ ಒಪ್ಪಿಗೆ ಬೇಕು. ಕೇಂದ್ರ ಜಲ ಆಯೋಗದ ಅನುಮತಿ ಬೇಕು. ಇವರ ಅನುಮತಿ ಇಲ್ಲದೇ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿಯೇ ಕರ್ನಾಟಕ ಸರ್ಕಾರದಿಂದ ಇಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಈಚೆಗೆ ಕ್ರೆಸ್ಟ್‌ಗೇಟ್‌ ಮುರಿದಾಗಲೂ ಕೇಂದ್ರ ಜಲ ಆಯೋಗ, ಬೋರ್ಡ್‌ ಒಪ್ಪಿಗೆ ಕೊಟ್ಟ ಬಳಿಕವೇ ಗೇಟ್‌ ಬದಲಿಸಲು ಸಾಧ್ಯವಾಗಿದೆ. ಜನರ ಜೀವನಾಡಿಯಾಗಿರುವ ತುಂಗಭದ್ರಾ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೇ ಜನರಿಗಾಗಿ ಜಲಾಶಯವನ್ನು ಕಾಪಾಡಬೇಕಿದೆ.

Advertisement

ತುಂಗಭದ್ರಾ ಜಲಾಶಯಕ್ಕೆ ಈಗ 70 ವರ್ಷ ವಯಸ್ಸು. ತಜ್ಞರ ಪ್ರಕಾರ 40 ವರ್ಷಗಳಿಗೆ ಬದಲಿಸಬೇಕು. ಹೀಗಾಗಿ ಈಗ ಎಲ್ಲ 33 ಕ್ರೆಸ್ಟ್ ಗೇಟ್‌ಗಳನ್ನು ಬದಲಿಸಬೇಕೆಂಬ ಚಿಂತನೆ ಇದೆ. ಈ ಕುರಿತು ಸಿಎಂ ಜತೆ ಮಾತನಾಡಿ 250 ರಿಂದ 300 ಕೋಟಿ ರೂ. ಮೀಸಲಿರುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ತುಂಗಭದ್ರಾ ಮಂಡಳಿ ಒಪ್ಪಿಗೆ ಬೇಕಾಗುತ್ತದೆ. ಶಿವರಾಜ ತಂಗಡಗಿ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ತುಂಗಭದ್ರಾ ಡ್ಯಾಂ

ತುಂಗಭದ್ರಾ ಜಲಾಶಯದ ಆಯಸ್ಸು 100 ವರ್ಷ. ಕ್ರೆಸ್ಟ್‌ಗೇಟ್‌ಗಳ ಆಯಸ್ಸು 45 ವರ್ಷ. ಗೇಟ್‌ ಗಳು ತುಂಬ ಹಳೆಯದಾಗಿವೆ. 70 ವರ್ಷ ಬಾಳಿಕೆ ಬಂದಿರುವುದೇ ದೊಡ್ಡದು. ಎಲ್ಲ ಗೇಟ್‌ಗಳನ್ನು ಬದಲಿಸುವ ಅವಶ್ಯಕತೆಯಿದೆ. ಡ್ಯಾಂಗಳ ರಕ್ಷಣೆಗೆ ಕ್ರೆಸ್ಟ್‌ಗೇಟ್‌ ಬದಲಾವಣೆ ಅವಶ್ಯಕತೆಯಿದೆ. ಈ ಕುರಿತು ಸರ್ಕಾರಕ್ಕೂ ಸಲಹೆ ನೀಡುವೆ. ಕನ್ನಯ್ಯ ನಾಯ್ಡು, ಅಣೆಕಟ್ಟು ತಜ್ಞ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next