ಬೆಂಗಳೂರು : ಗುಜರಾತ್ ನ ಮೊರ್ಬಿ ಸೇತುವೆ ದುರಂತದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಸವಾಲೊಂದನ್ನು ಎಸೆದಿದ್ದಾರೆ.
”ಚುನಾವಣಾ ಕಾಲದಲ್ಲಿ ಕೋಲ್ಕತಾ ಮೇಲ್ಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ, ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ನರೇಂದ್ರ ಮೋದಿ ಅವರೇ?” ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸೇತುವೆ ದುರಂತ ನಡೆದ ಮೊರ್ಬಿಗೆ ನಾಳೆ ಪ್ರಧಾನಿ ಮೋದಿ ಭೇಟಿ
ಬ್ರಿಟಿಷರ ಕಾಲದ ಸೇತುವೆ ಭಾನುವಾರ ಸಂಜೆ ಕುಸಿದು ಬಿದ್ದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿದೆ.177 ಜನರನ್ನು ರಕ್ಷಿಸಲಾಗಿದೆ ಮತ್ತು ಇನ್ನೂ ನಾಪತ್ತೆಯಾಗಿರುವ ಹಲವರಿಗಾಗಿ ತಂಡಗಳು ಹುಡುಕಾಟ ನಡೆಸುತ್ತಿವೆ.
ಮಾರ್ಚ್ 31, 2016 ರಂದು ಕೋಲ್ಕತಾ ದಲ್ಲಿ ನಡೆದ ವಿವೇಕಾನಂದ ರಸ್ತೆಯ ಮೇಲ್ಸೇತುವೆ ಕುಸಿದು ಹಲವರನ್ನು ಬಲಿತೆಗೆದುಕೊಂಡ ನಂತರ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಟೀಕೆಗೆ ಬಳಸಿದ್ದರು.
“ಮೋದಿ ಜೀ, ಮೋರ್ಬಿ ಸೇತುವೆ ಅಪಘಾತವು ದೇವರ ಕೃತ್ಯವೇ ಅಥವಾ ವಂಚನೆಯ ಕೃತ್ಯವೇ?” 2016ರ ಸುದ್ದಿ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.