ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಿ.ಎಸ್.ವೀರಯ್ಯ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
2019ರ ಲೋಕಸಭಾ ಚುನಾವಣೆಗೆ ಇನ್ನೂ ಹನ್ನೊಂದು ತಿಂಗಳು ಬಾಕಿ ಇರುವಾಗಲೇ ವಿವಿಧ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದು, ಬಿಜೆಪಿ ಸಮರ್ಥ ಅಭ್ಯರ್ಥಿಯ ಆಯ್ಕೆಯ ಹುಡುಕಾಟದಲ್ಲಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವವರ ಪಟ್ಟಿಯೂ ದೊಡ್ಡದಾಗಿಯೇ ಬೆಳೆದಿತ್ತು. ಕೋಲಾರ ಜಿಲ್ಲೆಯ ವೇಮಗಲ್ ಭಾಗದ ಚಿ.ನಾ.ರಾಮು, ಮಾಜಿ ಶಾಸಕ ಬೇತಮಂಗಲ ಎಂ.ನಾರಾಯಣಸ್ವಾಮಿ, ಕೆಜಿಎಫ್ನ ವೈ.ಸಂಪಂಗಿ, ಡಾ.ಶಿವಣ್ಣ, ಇತ್ತೀಚೆಗೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಛಲವಾದಿ ನಾರಾಯಣಸ್ವಾಮಿ ಹೆಸರುಗಳು ಕೇಳಿ ಬರುತ್ತಿದ್ದವು.
ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಯಾವೊಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗದ ಕಾರಣ ಯಾವುದೇ ಪ್ರಯೋಗಕ್ಕೆ ಮುಂದಾಗದ ಬಿಜೆಪಿ, ಹಿಂದೆ ಎರಡು ಬಾರಿ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಅಲ್ಪಮತಗಳ ಅಂತರದಿಂದ ಸೋಲನ್ನಪ್ಪಿದ ಡಿ.ಎಸ್.ವೀರಯ್ಯರನ್ನು ಕೋಲಾರ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆಯಲ್ಲಿ ಗೊಂದಲಗಳು ಏರ್ಪಟ್ಟಿರುವುದರಿಂದ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಹಿಂದಿನ ತಪ್ಪುಗಳನ್ನು ಮಾಡದಿರಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹನ್ನೊಂದು ತಿಂಗಳಿಗೆ ಮೊದಲೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಪ್ರಚಾರಕ್ಕೆ ಅಭ್ಯರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.
2014ರ ಚುನಾವಣೆಯಲ್ಲಿ ಬಿಜೆಪಿ, ವೀರಯ್ಯ ಬದಲಿಗೆ ಬೇತಮಂಗಲದ ಎಂ.ನಾರಾಯಣಸ್ವಾಮಿಗೆ ಟಿಕೆಟ್ ನೀಡಿತ್ತು. ಪರಿಣಾಮ ಹಿಂದಿನ ಚುನಾವಣೆಗಳಲ್ಲಿ ಎರಡನೇ ಸ್ಥಾನದಲ್ಲಿ ಇರುತ್ತಿದ್ದ ಪಕ್ಷ ಮೂರನೇ ಸ್ಥಾನಕ್ಕೆ ಜಾರುವಂತಾಯಿತು. ಕಳೆದ ಚುನಾವಣೆಯಲ್ಲಿ ಕೋಲಾರ ಕೇಶವ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನಕ್ಕೇರುವಂತಾಗಿತ್ತು. ಆದರೆ, ಅದಕ್ಕೂ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೀರಯ್ಯನವರು ಕೆ.ಎಚ್.ಮುನಿಯಪ್ಪ ವಿರುದ್ಧ ಸೋತಿದ್ದರೂ, ಮೂರು ಲಕ್ಷಕ್ಕೂ ಮೀರಿ ಮತಗಳನ್ನು ಗಳಿಸಿದ್ದರು.
ಕಳೆದ ಒಂದು ವಾರದಿಂದ ಆರ್‌ಎಸ್‌ಎಸ್ ಮುಖಂಡರು ಇಡೀ ರಾಜ್ಯದಲ್ಲಿ ಗೆಲ್ಲಲೇ ಬೇಕಾದ ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದು, ಈ ಪಟ್ಟಿಯಲ್ಲಿ ಡಿ.ಎಸ್.ವೀರಯ್ಯ ಅವರ ಹೆಸರು ಅಂತಿಮಗೊಂಡಿದೆ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಮತದಾರರಿದ್ದು, ಈ ಪೈಕಿ ಬಲಗೈ ಪಂಗಡದ ಪರಿಶಿಷ್ಟ ಜಾತಿಯವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅದೇ ಬಲಗೈ ಜಾತಿಗೆ ಸೇರಿದ ವೀರಯ್ಯನವರನ್ನು ಅಭ್ಯರ್ಥಿಯಾಗಿಸಲು ಚಿಂತಿಸಿದೆ. ಜತೆಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವುದರಿಂದ ಬಿಜೆಪಿ ಮುಖಂಡರ ಕಡೆಯಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಶನಿವಾರ ಮಧ್ಯಾಹ್ನದಿಂದ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಕೋಲಾರದ ಡಿ.ಎಸ್.ವೀರಯ್ಯ ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಸಿದ್ದರೆ, ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಆರೇಳು ಮಂದಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ಸತತ ಏಳು ಗೆಲುವು ಸಾಧಿಸಿ ಬೀಗುತ್ತಿರುವ ಕೆ.ಎಚ್.ಮುನಿಯಪ್ಪ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, 2019ರ ಚುನಾವಣೆ ಕೆ.ಎಚ್.ಮುನಿಯಪ್ಪ ಹಾಗೂ ಡಿ.ಎಸ್.ವೀರಯ್ಯ ನಡುವಿನ ನೇರ ಹಣಾಹಣಿಗೆ ವೇದಿಕೆ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಕೋಲಾರಕ್ಕೆ ಆಗಮಿಸಿದ ವೀರಯ್ಯ, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಚುನಾವಣಾ ಪ್ರಚಾರಕ್ಕೆ ಈಗಿನಿಂದಲೇ ಚಾಲನೆ ನೀಡುವ ಕುರಿತು ಸಿದ್ಧತೆ ನಡೆಸಿದರು.
ಕೋಲಾರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗುವಂತೆ ಪಕ್ಷದಿಂದ ನನಗೆ ಸೂಚನೆ ದೊರೆತಿದೆ. ಚುನಾವಣಾ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಕೋಲಾರದಲ್ಲಿ ಮನೆ ಮಾಡಿ ಪ್ರಚಾರ ಕಾರ್ಯವನ್ನು ಆರಂಭಿಸುತ್ತೇನೆ. ಮೂರನೇ ಬಾರಿ ಕೋಲಾರ ಜಿಲ್ಲೆಯ ಜನತೆ ನನ್ನ ಕೈ ಹಿಡಿಯುತ್ತಾರೆಂಬ ವಿಶ್ವಾಸ ನನಗಿದೆ.
– ಡಿ.ಎಸ್.ವೀರಯ್ಯ.
– ಕೆ.ಎಸ್.ಗಣೇಶ್