ಕೋಲಾರ: ನಗರ ಹೊರವಲಯದ ಅಮ್ಮೇರಹಳ್ಳಿ ಕೆರೆ ಕಟ್ಟೆ ಸುಮಾರು ಕಡೆ ಬಿರುಕು ಬಿಟ್ಟಿದ್ದು, ನೀರು ವ್ಯರ್ಥವಾಗುವ ಸಾಧ್ಯತೆ ಇರುವ ಬಗ್ಗೆ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಡೀಸಿ ಸಿ.ಸತ್ಯಭಾಮ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ಬೆಳಗ್ಗೆ ಅಣೆಕಟ್ಟಿನ ಒಂದು ಭಾಗದಲ್ಲಿ ನೀರು ಕೋಡಿ ಹರಿದಿದ್ದು ಸಂಜೆ ಅಥವಾ ರಾತ್ರಿ ವೇಳೆಗೆ ಪೂರ್ತಿಯಾಗಿ ಹರಿಯುವ ಸಾಧ್ಯತೆಗಳಿದೆ. ಹೀಗಾಗಿ ಕೆ.ಸಿ. ವ್ಯಾಲಿ ನೀರು ತುಂಬಿ ಕೋಡಿ ಹರಿಯುತ್ತಿರುವ ವೇಳೆ ಅಮ್ಮೇರಹಳ್ಳಿ ಕೆರೆ ಕಟ್ಟೆ ಸುಮಾರು ಕಡೆ ಬಿರುಕು ಬಿಟ್ಟಿದ್ದು, ಜಿಲ್ಲಾಡಳಿತ ಶೀಘ್ರವಾಗಿ ಸರಿಪಡಿಸಿ, ನೀರು ಸರಾಗವಾಗಿ ಮುಂದಿನ ಕೆರೆಗಳಿಗೆ ಹರಿಯುವ ಕೆಲಸ ಮಾಡಲಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಸೇರಿದಂತೆ ಅನೇಕರು ಒತ್ತಾಯಿಸಿದ್ದರು. ಈ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆರೆ ಬಳಿಗೆ ಆಗಮಿಸಿದ ಸಿ.ಸತ್ಯಭಾಮ, ಸ್ವತ್ಛತಾ ಕಾರ್ಯ ಸೇರಿದಂತೆ ನೀರು ಸೋರಿಕೆ ಆಗದಿರುವ ಬಗ್ಗೆ ಖಚಿತಪಡಿಸಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದಾಗಿ ಕೆಲವೆಡೆ ಬಿರುಕು ಬಿಟ್ಟಿದ್ದು, ಕೆರೆ ಕಟ್ಟೆ ಬಳಿ ನೀರು ಸೋರಿಕೆಯಾಗುತ್ತಿದ್ದ ಸ್ಥಳದಲ್ಲಿ ಈಗಾಗಲೇ ನಗರಸಭೆಯಿಂದ ದುರಸ್ತಿಪಡಿಸಲಾಗಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ.
ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಬಾಗಿನ ಅರ್ಪಣೆ ಆಯೋಜಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು. ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸುರೇಶ್‌ಕುಮಾರ್, ಕೆ.ಸಿ.ವ್ಯಾಲಿ ಅಧಿಕಾರಿ ಕೃಷ್ಣ, ನಗರಸಭೆ ಸಿಬ್ಬಂದಿ ಇದ್ದರು.
ಇದನ್ನೂ ಓದಿ :ವ್ಯಕ್ತಿಯೊಬ್ಬನನ್ನು ಕೊಲೆಗೈದು ಕಾರು ಸಮೇತ ಸುಟ್ಟು ಹಾಕಿದ ದುಷ್ಕರ್ಮಿಗಳು
***
ಶ್ರೀನಿವಾಸಪುರ: 9 ಸೋಂಕು ದೃಢ
ಶ್ರೀನಿವಾಸಪುರ: ತಾಲೂಕಿನ ಗ್ರಾಮಾಂತರ ಹಾಗೂ ಪಟ್ಟಣದಲ್ಲಿ ಬುಧವಾರ 9 ಸೋಂಕು ಪ್ರಕರಣ ದೃಢಪಟ್ಟಿವೆ ಎಂದು
ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಗ್ರಾಮಾಂತರ ಕೂಸಂದ್ರದ ಇಬ್ಬರು ಮಹಿಳೆಯರಿಗೆ, ಬೂರಗಮಾಕಲಹಳ್ಳಿಯ ಇಬ್ಬರು ಮಹಿಳೆಯರು, ಓರ್ವ ಪುರುಷ , ಕೇತಗಾನಹಳ್ಳಿಯ ಪುರುಷ, ಸಿ.ಹೊಸೂರು ಗ್ರಾಮದ ಓರ್ವ ಪುರುಷ, ಯದರೂರಿನ ಮಹಿಳೆ, ಪಟ್ಟಣದ ಮೋತಿಲಾಲ್ ರಸ್ತೆ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಇದುವರೆಗೂ ತಾಲೂಕಿನಲ್ಲಿ 685 ಸೋಂಕು ಪ್ರಕರಣ ದಾಖಲಾಗಿವೆ ಎಂದು ತಿಳಿದು ಬಂದಿದೆ.