ಉಡುಪಿ: ಜಿಲ್ಲಾ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಸಮಿತಿ, ದಿವ್ಯಾಂಗರ ರಕ್ಷಣ ಸಮಿತಿ, ಸಕ್ಷಮ ಸಂಸ್ಥೆ ಹಾಗೂ ವಿವಿಧ ಜಿಲ್ಲೆಯ ಸಂಘ-ಸಂಸ್ಥೆಗಳ ವತಿಯಿಂದ ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ವಿಕಲಚೇತನರು ಗಾಲಿಕುರ್ಚಿ, ಟ್ರಾಲಿ, ವಾಕರ್, ಹುನ್ನುಹುರಿ ಸಮಸ್ಯೆಯಿಂದ ಬಳುತ್ತಿದ್ದವರು ಹಾಸಿಗೆ ಸಮೇತರಾಗಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ನೋವನ್ನು ಜಿಲ್ಲಾಧಿಕಾರಿಗಳ ಎದುರು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಮನವಿ ಸ್ವೀಕರಿಸಿ, ರಾಜ್ಯ ಸರಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಭಟನ ಸಭೆಯಲ್ಲಿ ಮಾತನಾಡಿದ ದಿವ್ಯಾಂಗರ ರಕ್ಷಣ ಸಮಿತಿಯ ಸಂಚಾಲಕ ವಿಜಯ ಕೊಡವೂರು, ಜಿಲ್ಲೆಯಲ್ಲಿ ಸುಮಾರು 13ರಿಂದ 15 ಸಾವಿರದಷ್ಟು ಅಂಗವಿಕಲರಿದ್ದಾರೆ. ಬೆನ್ನುಮೂಳೆ ಮುರಿದ 124 ರಷ್ಟು ಮಂದಿ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಇವರಿಗೆ ಮನೆಗಳಲ್ಲಿಯೇ ವೈದ್ಯಕೀಯ ಸೇವೆ ಸಿಗಬೇಕು. ಅಂಗವಿಕಲರಿಗೆ ಶೇ.5ರಷ್ಟು ಮೀಸಲಿರುವ ಹಣ ದುರುಪಯೋಗವಾಗುತ್ತಿದೆ. ಈ ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸದೆ ಅಂಗವಿಕಲರ ಹೆಸರಲ್ಲಿ ರಸ್ತೆ ಅಭಿವೃದ್ಧಿ ಪಡಿಸಲು ಖರ್ಚು ಮಾಡಲಾಗುತ್ತಿದೆ. ಈ ಹಿಂದಿನಿಂತೆಯೇ ಅಂಗವಿಕಲರಿಗೆ ಸರಕಾರ ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಮಂಜುನಾಥ ಹೆಬ್ಟಾರ್ ಮಾತನಾಡಿ, ಹೀಮೊಫಿಯಾ ಚುಚ್ಚುಮದ್ದಿಗೆ ಅನುದಾನ ಕಾಯ್ದಿರಿಸಿ ಚುಚ್ಚುಮದ್ದು ಸದಾಕಾಲ ಲಭ್ಯವಿರುವಂತೆ ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ಲಸಿಕೆ ಸಿಗುವಂತಾಗಬೇಕು ಎಂದರು.
ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಂದಾಪುರ-ಬೈಂದೂರು ತಾಲೂಕು ಸಮಿತಿ ಅಧ್ಯಕ್ಷ ಸಂತೋಷ ಜಾಲಾಡಿ ಮಾತನಾಡಿ, ಈ ಹಿಂದೆ ಖಾಸಗಿ ಬಸ್‌ಗಳಲ್ಲಿ ವಿಕಲಚೇತನರಿಗೆ ಶೇ.50 ರಿಯಾಯಿತಿ ನೀಡುತ್ತಿದ್ದು, ಕೋವಿಡ್ ಬಳಿಕ ಅದನ್ನು ಸ್ಥಗಿತಗೊಳಿಸಲಾಗಿದೆ. ಅದನ್ನು ಮತ್ತೆ ಜಾರಿಗೊಳಿಸಬೇಕು. ಎಂಡೋಸಲ್ಫಾನ್ ಪೀಡಿತರಿಗೆ ಪುನರ್ ಸಮೀಕ್ಷೆ ನಡೆಸಲು ಕೈ ಬಿಟ್ಟಿರುವ ಗ್ರಾಮಗಳಾದ ಉಪ್ಪುಂದ, ತಲ್ಲೂರು, ಉಪ್ಪಿನಕುದ್ರು, ಕಿರಿಮಂಜೇಶ್ವರ, ಹೆಮ್ಮಾಡಿ, ಕಟ್‌ಬೆಲೂ¤ರು, ನಾಗೂರು, ಮರವಂತೆ, ನಾವುಂದ, ಗಂಗೊಳ್ಳಿ ಪ್ರದೇಶಗಳು ಎಂಡೋಸಲ್ಫಾನ್ ಸಿಂಪಡಣೆಯ ಗಡಿರೇಖೆ ಪ್ರದೇಶಗಳಾಗಿದ್ದು, ಈ ಪ್ರದೇಶಗಳನ್ನು ಎಂಡೋಸಲ#ನ್ ಪೀಡಿತ ಪ್ರದೇಶಗಳೆಂದು ಪರಿಗಣಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಪ್ರಮುಖರಾದ ರವೀಂದ್ರ, ಲತಾ ಭಟ್, ಹರೀಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಹರೀಶ್ ತೋಳ್ಪಾಡಿ ಉಪಸ್ಥಿತರಿದ್ದರು.