Advertisement
ವಿಜಯಪುರ ಜಿಲ್ಲಾಧಿಕಾರಿ ಕಚೇರಿಗಳ ಆವರಣದಲ್ಲಿ ರೈತ ಮುಖಂಡರು ದೀಪ ಹಚ್ಚಿ ಧರಣಿ ಕುಳಿತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಭಾವಚಿತ್ರ ಪ್ರದರ್ಶಿಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ನೋಟಿಸ್ ಜಾರಿ ಮಾಡಿದ್ದು ಮತ್ತು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರೈತರು ನಿರಂತರವಾಗಿ ಪ್ರತಿಭಟನೆಗಳ ಮಾಡುತ್ತಿದ್ದಾರೆ. ಇದೀಗ ಕತ್ತಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ದೀಪಾವಳಿ ಆಚರಣೆಗೆ ನಿರ್ಧಾರ ಮಾಡಿದ್ದಾರೆ. ಮಂಗಳವಾರ ಸಂಜೆ ನಗರದಲ್ಲಿ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಡಿಸಿ ಕಚೇರಿವರೆಗೂ ಮೆರವಣಿಗೆಯಲ್ಲಿ ಬಂದರು.
ಈ ವೇಳೆ, ವಿಜಯಪುರ-ಅಥಣಿ ರಸ್ತೆಯಲ್ಲಿ ರೈತರು ಕೆಲಕಾಲ ಬಂದ್ ಮಾಡಿ ಪ್ರತಿಭಟಿಸಿದರು. ಪೊಲೀಸರು ಮನವೊಲಿಕೆಗೆ ಪ್ರಯತ್ನಿಸಿದರು. ಆದರೂ, ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರದ ಹುನ್ನಾರದಿಂದ ರೈತರಿಗೆ ಈ ಬಾರಿ ಕರಾಳ ದೀಪಾವಳಿ ಎದುರಾಗಿದೆ. ರೈತರು ದೀಪಾವಳಿ ಆಚರಣೆ ಮಾಡಲ್ಲ. ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ತೆಗೆಯಬೇಕು. ಭವಿಷ್ಯದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂದು ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಸಗರ, ರಾಮನಗೌಡ ಪಾಟೀಲ ಹಾಗೂ ಮತ್ತಿತರರು ಆಗ್ರಹಿಸಿದರು.