Advertisement
ಬಂಟ್ವಾಳ: ರಸ್ತೆಯೇ ಈ ಗ್ರಾಮೀಣ ಭಾಗದ ಮೂಲ ಸಮಸ್ಯೆಯಾಗಿದ್ದು, ಹದಗೆಟ್ಟ ರಸ್ತೆಗಳಲ್ಲೇ ಸಂಚರಿಸಬೇಕಾದ ಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದು ಮೇರಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕೊಡ್ಮಾಣ್ ಗ್ರಾಮದ ಪರಿಸ್ಥಿತಿಯಾಗಿದೆ. ಗ್ರಾಮದಲ್ಲಿ ಕೊಂಚ ಮಟ್ಟಿನ ನೀರಿನ ಸಮಸ್ಯೆ ಇದ್ದರೂ, ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
Related Articles
Advertisement
ರಸ್ತೆ ಅಭಿವೃದ್ಧಿಯ ಸವಾಲು:
ಗ್ರಾಮದ ಮೇರಮಜಲು ಕ್ರಾಸ್ ಕೊಡ್ಮಾಣ್‌ಮದಕ ರಸ್ತೆಯು ಸುಮಾರು 3 ಕಿ.ಮೀ. ಉದ್ದವಿದ್ದು, ಸಂಚಾರಕ್ಕೆ ತೀರಾ ದುಸ್ತರವಾಗಿದೆ. ಈ ರಸ್ತೆಯ ಕೊಂಚ ಭಾಗಕ್ಕೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದರೂ, ಬಹುತೇಕ ಭಾಗ ಸಂಚಾರಿಸಲಾರದ ಪರಿಸ್ಥಿತಿಗೆ ತಲುಪಿದೆ. ಕೊಟ್ಟಿಂಜ-ಅಮ್ಮೆಮಾರ್ ರಸ್ತೆ, ಪೂಪಾಡಿಕಲ್ಲು-ಮೇರಮಜಲು ರಸ್ತೆಗಳು ಕೂಡ ಹದಗೆಟ್ಟಿವೆ.
ಜತೆಗೆ ಬಾರೆಕ್ಕಾಡು ರಸ್ತೆಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದರ ಅಭಿವೃದ್ಧಿಯ ಕೂಗು ಕೂಡ ಇದೆ. ಇದು ಗ್ರಾಮದ ಪ್ರಮುಖ ರಸ್ತೆಗಳ ಕಥೆಯಾದರೆ ಇನ್ನು ಹಲವು ರಸ್ತೆಗಳು ಇದೇ ರೀತಿ ಅಭಿವೃದ್ಧಿಗಾಗಿ ಕಾಯುತ್ತಿವೆ. ಒಂದಷ್ಟು ರಸ್ತೆಗಳು ಸಣ್ಣ ಅನುದಾನದ ಮೂಲಕ ಅಭಿವೃದ್ಧಿಗೊಂಡಿದ್ದರೂ, ಇನ್ನೂ ಸಾಕಷ್ಟು ಪ್ರದೇಶದ ರಸ್ತೆಗಳು ಅಭಿವೃದ್ಧಿಗೆ ಬಾಕಿ ಇವೆ.
ಕೊಡ್ಮಾಣ್ ಗ್ರಾಮದ ಮಧ್ಯೆ ರೈಲ್ವೇ ಟ್ರ್ಯಾಕ್ ಹಾದು ಹೋಗಿದ್ದು, ಅದು ಗ್ರಾಮವನ್ನು ಎರಡು ಪಾಲು ಮಾಡಿವೆ. ಒಂದು ಭಾಗದ ಮಂದಿ ಇನ್ನೊಂದು ಭಾಗಕ್ಕೆ ಸಂಚರಿಸ ಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಶಾಲೆ, ಗ್ರಾ.ಪಂ. ಸೇರಿ ಇನ್ನಿತರ ಭಾಗಕ್ಕೆ ರೈಲ್ವೇ ಹಳಿ ದಾಟಿ ಬರಬೇಕಿದೆ.
ಶಾಲೆಗೆ ಬೇಕು ಕಟ್ಟಡ :
ಕೊಡ್ಮಾಣ್ ಪ್ರದೇಶದಲ್ಲಿ ಒಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಮುಖ್ಯವಾಗಿ ಇಲ್ಲಿನ ಪ್ರೌಢಶಾಲೆಯು ಸತತವಾಗಿ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಪಡೆದುಕೊಂಡಿದೆ. ಫಲಿತಾಂಶ ಉತ್ತಮವಾಗಿದ್ದರೂ, ಶಾಲೆಯ ಕಟ್ಟಡದ ಕೊರತೆ ಇನ್ನೂ ನೀಗಿಲ್ಲ. ಇರುವ ಕಟ್ಟಡಗಳು ಸುಸಜ್ಜಿತವಾಗಿದ್ದರೂ, ಶಾಲೆಯ ಕಚೇರಿ ಕೊಠಡಿಯ ಬೇಡಿಕೆ ಇನ್ನೂ ಹಾಗೇ ಉಳಿದುಕೊಂಡಿದೆ. ಜತೆಗೆ ಗುಣಮಟ್ಟದ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.
– ಕಿರಣ್ ಸರಪಾಡಿ