ನಮ್ಮ ಬಾಲ್ಯದಲ್ಲಿ ಈಗಿನಂತೆ ಹೆಜ್ಜೆ ಹೆಜ್ಜೆಗೆ ಅಂಗಡಿಗಳೂ ಇರಲಿಲ್ಲ. ಇದ್ದರೂ ಹಣ ಕೊಟ್ಟು ತಿಂಡಿ ತಿನ್ನುವಷ್ಟು ಸ್ಥಿತಿವಂತರೂ ನಾವಲ್ಲ.ಹಾಗಾಗಿ ನಮಗೆ ಉತ್ತಮ ತಿಂಡಿ ಎಂದರೆ ಕಪ್ಪು ಬೆಲ್ಲ. ಸಿಹಿ ತಿಂಡಿ ಎಂದರೆ ಅಪರೂಪಕ್ಕೆ ತರುವ ಬಿಳಿ ಉಂಡೆ ಬೆಲ್ಲ. ಅತ್ಯುತ್ತಮವಾದ ತಿಂಡಿ, ಡಬ್ಬಿ ಬೆಲ್ಲ ಅಂದರೆ ಜೋನಿ ಬೆಲ್ಲ. ಅದರಲ್ಲೂ ನಾವೇ ಕಷ್ಟಪಟ್ಟು ಸಮಯ ಸಾಧಿಸಿ ಕದ್ದು ತಿನ್ನುವ ಆ ಮಜಾವೇ ಬೇರೆ.
ಒಮ್ಮೆ ನಾನು ಮತ್ತು ನನ್ನ ಗೆಳತಿ ಸಂಜೆ ನಮ್ಮ ಪಿಕ್‌ನಿಕ್ ಸ್ಪಾಕ್ ಆಗಿರುವ ಹಲಸಿನ ಮರಕ್ಕೆ ಹತ್ತುವ ಪ್ರೋಗ್ರಾಮ್ ಇದ್ದ ಕಾರಣ ಅಲ್ಲಿ ನಮಗೆ ತಿನ್ನಲು ಅವಲಕ್ಕಿ ಮತ್ತೆ “ಕಪ್ಪು ಬೆಲ್ಲ’ದ ಅಗತ್ಯ ಇತ್ತು. ಮನೆಯಿಂದ ಹೊರಡುವ ಸಮಯದಲ್ಲಿಯೇ ಬೆಲ್ಲ ಕದಿಯುವುದು ಅಸಾಧ್ಯವೆನಿಸಿ ಸ್ವಲ್ಪ ಬೇಗನೇ ನಾನು ಸಂದರ್ಭ ನೋಡಿ ದೊಡ್ಡ ಕಪ್ಪು ಬೆಲ್ಲವನ್ನು ಎಗರಿಸಿ ಒಂದು ಕಾಗದದಲ್ಲಿ ಕಟ್ಟಿ ಕಿಟಕಿಯಲ್ಲಿ ಇಟ್ಟಿದ್ದೆ. ಅದೆಲ್ಲಿಂದಲೋ ಸಿಗ್ನಲ್ ಸಿಕ್ಕಿದ ಇರುವೆಗಳು ಸಾಲುಸಾಲಾಗಿ ಬೆಲ್ಲಕ್ಕೆ ದಾಳಿ ಮಾಡಿದ್ದನ್ನು ನಾನು ನೋಡಲಿಲ್ಲ. ದುರದೃಷ್ಟವಶಾತ್ ನನ್ನಮ್ಮ “ಪತ್ತೆದಾರಿ ಪದ್ಮಮ್ಮ’ನವರು ಇರುವೆಗಳ ಜಾಡನ್ನು ಹಿಡಿದು ನೋಡುವಾಗ ಕಂಡಿದ್ದು ಕಾಗದದಿಂದ ಹೊರಗೆ ಇಣುಕುತ್ತಿದ್ದ ಕಪ್ಪು ಬೆಲ್ಲದ ತುಂಡು! ನಂತರ ವಿಚಾರಣೆ ನಡೆಸುವ ಅಗತ್ಯವೇ ಇಲ್ಲ ಬಿಡಿ. ಏಕೆಂದರೆ, ಮನೆಯಲ್ಲಿ ಅಂತಹ ಕೆಲಸ ಮಾಡುವುದು ನಾನೊಬ್ಬಳೇ. ಹಾಗಾಗಿ, ವಿಚಾರಣೆ ಇಲ್ಲದೇ ನೇರ ಶಿಕ್ಷೆ ಪ್ರಕಟ !
ಇನ್ನೊಮ್ಮೆ ಮನೆಯಲ್ಲಿ ನಮ್ಮನ್ನು ಒಂದು ಮೈಲಿ ದೂರದ ಬೆಳ್ಳಜ್ಜನ ಮನೆಯಿಂದ ಲಿಂಬೆಹಣ್ಣನ್ನು ತರಲು ಹೇಳಿದರು. ನಮಗಂತೂ ಸಿಂಗಾಪುರ ಪ್ರವಾಸಕ್ಕೆ ಹೋಗುವಷ್ಟೇ ಸಂಭ್ರಮ. ಹಿಂದಿನ ದಿನವೇ ತಯಾರಿ. ಅಂದರೆ ನಾನು ಮತ್ತು ಗೆಳತಿ ಸಾಧ್ಯವಾದಷ್ಟು ಬೆಲ್ಲವನ್ನು ಸಂಗ್ರಹಿಸಿ ರೆಡಿ ಮಾಡಿಟ್ಟುಕೊಳ್ಳುವುದು. ಬೆಳ್ಳಂಬೆಳಗ್ಗೆ ಹೊರಟೆವು. ಆ ಮನೆಯ ಯಜಮಾನ ಅಂದರೆ ಬೆಳ್ಳಜ್ಜನ ಹವ್ಯಾಸವಾದ ಕತೆೆ ಹೇಳುವ ಬಾಯಿಗೆ ಕೇಳುವ ಕಿವಿಗಳಾಗುವುದಲ್ಲದೆ, ನಮ್ಮಂಥವರಿಗೆ ಕೊನೆಯಲ್ಲಿ ಲಂಚ ರೂಪದಲ್ಲಿ “ಬೆಲ್ಲ ಕಾಯಿ’ ಸಿಗುತ್ತಿತ್ತು. ಹೀಗಾಗಿ, ನಮಗೆ ಕಥೆ ಕೇಳುವ ಆಸಕ್ತಿ ಇಲ್ಲದಿದ್ದರೂ ಕೊನೆಯಲ್ಲಿ ಸಿಗುವ ಲಂಚದಾಸೆಗೆ ಕೇಳುವಂತೆ ನಟಿಸುತ್ತಿದ್ದೆವು. ಹಾಗೆಯೇ ಆ ದಿನವೂ ಅಲ್ಲಿಂದ ಲಂಚ ಸ್ವೀಕರಿಸಿ ಹೊರಟ ನಾವು, ತಂದ ಬೆಲ್ಲಕ್ಕೊಂದು ಗತಿ ಕಾಣಿಸಲು ಹಾಗೂ ಪ್ರವಾಸದ ಮೋಜನ್ನು ಇನ್ನಷ್ಟು ಹೆಚ್ಚಿಸಲು ಬಂದ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಹೊರಟೆವು. ಬರುವಾಗ ದಾರಿಯಲ್ಲಿ ಕಾಫಿ ತೋಟದಲ್ಲಿದ್ದ ಹೂವಿನ ಗಿಡಗಳನ್ನೆಲ್ಲ ಕಿತ್ತು ನಮ್ಮ ನಮ್ಮ ಮನೆಯ ಅಂಗಳದಲ್ಲಿ “ಗಾರ್ಡನ್’ ಮಾಡುವ ಅತ್ಯದ್ಭುತ ಯೋಜನೆಗಳನ್ನು ಹಾಕಿದೆವು. ಹಾಗೆ ಮರಳುವಾಗ ಸಂಜೆ 5 ಗಂಟೆ !
ಬೆಳಿಗ್ಗೆ ಹೊರಟಿದ್ದು 9 ಗಂಟೆಗಲ್ಲವೆ? ಅಷ್ಟರಲ್ಲಾಗಲೇ ನಮ್ಮ ಮನೆಗಳಲ್ಲಿ ಚಿಂತಾಕ್ರಾಂತರಾಗಿ ಹುಡುಕಿಕೊಂಡು ಹೊರಟ ನಮ್ಮ ಸೋದರತ್ತೆ ಸಿಕ್ಕಿದರು. (ಈಗಿನ ಹಾಗೆ where are you? ಅಂತ ಕಳಿಸಲು ವಾಟ್ಸಾಪ್ ಇರಲಿಲ್ಲವಲ್ಲ!) ನಮ್ಮನ್ನು ಕಂಡ ಕೂಡಲೇ ಅವರು ಹೇಳಿದ್ದು ಇಷ್ಟೇ, “”ಬನ್ನಿ ಮನೆಗೆ, ನಿಮಗುಂಟು ಇವತ್ತು ಹಬ್ಬ”
ನಾವು ಮೆಲ್ಲಗೆ ಹಿಂದಿನ ಬಾಗಿಲಿನಿಂದ ಮನೆಯೊಳಗೆ ನುಸುಳಿಕೊಂಡೆವು ಇನ್ನೊಮ್ಮೆ ನಮ್ಮ ಅಚ್ಚುಮೆಚ್ಚಿನ ಡಬ್ಬಿ ಬೆಲ್ಲವನ್ನು ಗೆಳತಿಯ ಮನೆಗೆ ಯಾರೋ ತಂದು ಕೊಟ್ಟಿದ್ದರು. ಆದರೆ, ಅದನ್ನು ಕದಿಯಲು ಸಾಧ್ಯವಿರಲಿಲ್ಲ. ಇಪ್ಪತ್ತನಾಲ್ಕು ಗಂಟೆಯೂ ಅವಳ ಅಜ್ಜಿಯ ಸರ್ಪಗಾವಲು ಇರುತ್ತಿತ್ತು. ಅದು ಹೇಗೋ ಅಜ್ಜಿಯ ಕಣ್ತಪ್ಪಿಸಿ ಕಿಟಕಿಯ ಮೇಲೆ ಹತ್ತಿ ಡಬ್ಬಿಯಲ್ಲಿದ್ದ ಬೆಲ್ಲವನ್ನು ಗಬಗಬನೇ ತಿಂದು ಕೆಳ ಇಳಿಯುವಷ್ಟರಲ್ಲಿ ಕೈ ತಾಗಿ ಕೆಲವು ಡಬ್ಬಗಳು ಡಬಡಬನೆ ಕೆಳಗುರುಳಿದವು. ಅಜ್ಜಿ “”ಯಾರು ಯಾರು” ಎಂದು ಓಡಿ ಬರುವಾಗ ನಾವು ಬಾಗಿಲ ಮರೆಯಲ್ಲಿ ನಿಂತು ಏನೂ ತಿಳಿಯದವರಂತೆ ಅವರ ಹಿಂದೆಯೇ ಬಂದು, “”ಏನೋ ಶಬ್ದ ಕೇಳಿತು ಏನಾಯ್ತು?” ಎಂದು ಏನೂ ಗೊತ್ತಿಲ್ಲದಂತೆ, ಈಗ ತಾನೇ ಒಳ ಬಂದವರಂತೆ ನಟಿಸುತ್ತಿದ್ದೆವು.
ನನಗೆ ಪ್ರಾಥಮಿಕ ಶಾಲೆ ಮನೆಯ ಸಮೀಪವೇ ಇದ್ದ ಕಾರಣ ಊಟಕ್ಕೆ ಬಾಕ್ಸ್ ತೆಗೆದುಕೊಂಡು ಹೋಗುವ ಅವಕಾಶ ಇರಲಿಲ್ಲ. ಕೊನೆಗೆ ಹೈಸ್ಕೂಲಿಗೆ ಹೋಗುವಾಗ ಈ ಅವಕಾಶ ಸಿಕ್ಕಿತು. ಇದರಿಂದ ನನಗಾದ ಉಪಯೋಗವೆಂದರೆ ಹೆಚ್ಚುವರಿ ಬೆಲ್ಲವನ್ನೂ ಬಾಕ್ಸ್‌ನಲ್ಲಿ ಸಾಗಿಸಲು ಅನುಕೂಲವಾಯಿತು. ಆ ಕಾಲಕ್ಕೆ ನಮ್ಮ ಮನೆಯ ಸ್ಥಿತಿ ಕೊಂಚ ಸುಧಾರಿಸಿದ ಕಾರಣ ಬಿಳಿ ಬೆಲ್ಲದ ಉಂಡೆಗಳು ರಾರಾಜಿಸುತ್ತಿದ್ದವು. ಹಾಗೆಯೇ ನನ್ನ ಬಾಕ್ಸಿನಲ್ಲಿ ಕೂಡ !
ಒಮ್ಮೆ ನಮ್ಮ ಶಾಲೆಯ ಸರ್ ತಮಾಷೆಗೆಂದ, “ಏನ್ ತಂದಿದ್ದಿ ನೋಡುವ’ ಎಂದು ನನ್ನ ಟಿಫಿನ್ ತೆರೆದವರು ಅದರಲ್ಲಿದ್ದ ಬೆಲ್ಲದ ರಾಶಿಯನ್ನು ನೋಡಿ ಮೂಛೆì ತಪ್ಪುವುದೊಂದೇ ಬಾಕಿ. ಈಗ ನಮ್ಮದೇ ಕೈ, ನಮ್ಮದೇ ಬಾಯಿ. ಎಷ್ಟು ಬೇಕಾದರೂ ತಿನ್ನಬಹುದು. ಆದರೆ, ತಿನ್ನುವ ಆಸಕ್ತಿ ಇಲ್ಲ. “ಕದ್ದು ಕಪ್ಪು ಬೆಲ್ಲ’ ತಿನ್ನುವಾಗ ಇದ್ದ ಆ ಖುಷಿ ಈಗ ಇಲ್ಲ. ಮರಳಿ ಬರುವುದೆ ಆ ಬೆಲ್ಲದ ಬಾಲ್ಯ?
– ಜಯಪ್ರಭಾ ಶರ್ಮ